Sunday, August 9, 2026
Homeಹೆಬ್ರಿಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ

ಹೆಬ್ರಿ: ಮಾದಕ ವಸ್ತುಗಳ ದುರುಪಯೋಗವು ಇಂದಿನ ಯುವ ಪೀಳಿಗೆಯ ಮತ್ತು ಮಕ್ಕಳ ಭವಿಷ್ಯಕ್ಕೆ ಅತ್ಯಂತ ಮಾರಕವಾಗಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ (ಎ.ಎಸ್.ಐ) ಬಾಲಕೃಷ್ಣ ಸರ್ ಕಳಕಳಿ ವ್ಯಕ್ತಪಡಿಸಿದರು.

ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಹಾಗೂ ಹೆಬ್ರಿ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಇಂತಹ ದುರಭ್ಯಾಸಗಳಿಂದ ದೂರವಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜನಜಾಗೃತಿ ವೇದಿಕೆಯ ಸದಸ್ಯರಾದ ಹೆಚ್. ಜನಾರ್ಧನ್ ಮಾತನಾಡಿ, “ಸ್ವಸ್ಥ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ವ್ಯಾಪಕ ಅರಿವು ಮೂಡಿಸುವುದು ಅತ್ಯಗತ್ಯ” ಎಂದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆನ್‌ಲೈನ್ (ವಿಡಿಯೋ ಕಾನ್ಫರೆನ್ಸ್) ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ‘ಸ್ವಾಸ್ಥ್ಯ ಸಂಕಲ್ಪ’ದ ದಿವ್ಯ ಸಂದೇಶವನ್ನು ನೀಡಿ ಆಶೀರ್ವದಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಉದಯ ಕುಮಾರ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಸಾದ ಭಂಡಾರಿ ಹಾಗೂ ಹೆಬ್ರಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ (ಡಬ್ಲ್ಯು.ಪಿ.ಸಿ) ಲಕ್ಷ್ಮಿ ಉಪಸ್ಥಿತರಿದ್ದರು.
ಕಾಲೇಜಿನ ಹಿರಿಯ ಅಧ್ಯಾಪಕರಾದ ವೆಂಕಟರಮಣ ಕಲ್ಕೂರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments