“ವಿಜ್ಞಾನವೇ ಜೀವನಕ್ಕೆ ಬೆಳಕು ” – ದಿವಾಕರ ಶೆಟ್ಟಿ.
ಹೆಬ್ರಿ : ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘದ ಆಶ್ರಯದಲ್ಲಿ “ದೈನಂದಿನ ಜೀವನದಲ್ಲಿ ವಿಜ್ಞಾನ” ವಿಶೇಷ ಉಪನ್ಯಾಸ ಕಾರ್ಯಕ್ರಮ ಗುರುವಾರ ಕಾಲೇಜಿನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನ ನಿವೃತ್ತ ರೀಡರ್ ದಿವಾಕರ ಶೆಟ್ಟಿ ಎಚ್ ಅವರು ಕಾರ್ಯಗಾರ ಉದ್ಘಾಟಿಸಿ “ವಿಜ್ಞಾನವೇ ಜೀವನಕ್ಕೆ ಬೆಳಕು. ನಮ್ಮ ದೈನಂದಿನ ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ವಿಜ್ಞಾನ ಅಡಗಿದೆ. ಭಾರತೀಯ ವಿಜ್ಞಾನವು ವೇದ, ಉಪನಿಷತ್ತು ಮತ್ತು ನಮ್ಮ ಪವಿತ್ರ ಗ್ರಂಥಗಳೊಂದಿಗೆ ಅವಿನಾಭಾವವಾಗಿ ಬೆಸೆದುಕೊಂಡಿದೆ. ಪ್ರಾಚೀನ ಭಾರತದಲ್ಲಿ ಗಣಿತ, ಖಗೋಳ, ವೈದ್ಯಕೀಯ ಮತ್ತು ರಸಾಯನಶಾಸ್ತ್ರದಲ್ಲಿ ನಾವು ಜಗತ್ತಿಗೆ ದಾರಿ ತೋರಿಸಿದ್ದೇವೆ. ವಿದ್ಯಾರ್ಥಿಗಳು ವಿಜ್ಞಾನವನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೆ, ನಮ್ಮ ಸಂಸ್ಕೃತಿ ಮತ್ತು ಜೀವನದೊಂದಿಗೆ ಬೆಸೆದುಕೊಳ್ಳಬೇಕು”_ ಎಂದರು.
“Science – The Light That Illuminates Life” ಎಂಬ ಧ್ಯೇಯವಾಕ್ಯದಡಿ ನಡೆದ ಈ ಕಾರ್ಯಕ್ರಮದಲ್ಲಿ ದೈನಂದಿನ ಉಪಕರಣಗಳಿಂದ ಹಿಡಿದು ಆಧುನಿಕ ತಂತ್ರಜ್ಞಾನದವರೆಗೆ ವಿಜ್ಞಾನದ ಪಾತ್ರವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಸೀತಾನದಿ ವಿಠ್ಠಲ ಶೆಟ್ಟಿ, ವಿಜ್ಞಾನ ಸಂಘದ ಸಂಯೋಜಕ ಡಾ. ಸುದರ್ಶನ್ ಶೆಟ್ಟಿ ಉಪಸ್ಥಿತರಿದ್ದರು.
ರಕ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ಸಾತ್ವಿಕ್ ದೇವಾಡಿಗ ಸ್ವಾಗತಿಸಿದರು. ಅಕ್ಷಯ್ ಅಶೋಕ್ ನಿರೂಪಿಸಿದರು. ಸುಚಿತ್ ಶೆಟ್ಟಿ ವಂದಿಸಿದರು.



