ಹೆಬ್ರಿ : ಹೆಬ್ರಿಯಲ್ಲಿ ಹಾದು ಹೋಗುವ 169-ಎ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗಾಗಿ ಪಕ್ಕದಲ್ಲಿರುವ ಪ್ರಸಿದ್ಧ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾಗವು ಹೋಗಲಿದ್ದು ಅನಂತಪದ್ಮನಾಭ ದೇವಸ್ಥಾನದ ವಾಸ್ತುವಿಗೆ ಯಾವುದೇ ತೊಂದರೆಯಾಗದಂತೆ ” ದೇವಸ್ಥಾನವನ್ನು ಉಳಿಸಿ ” ಅಭಿಯಾನದ ಘೋಷಣೆಯೊಂದಿಗೆ ನೂರಾರು ಮಂದಿ ಭಕ್ತರು ಹೆಬ್ರಿ ತಾಲ್ಲೂಕು ಆಡಳಿತ ಮೂಲಕ ಗುರುವಾರ
ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಯಾವುದೇ ರೀತಿಯ ಶಾಂತಿಭಂಗ ಉಂಟಾಗಬಾರದಂತೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್ ನಾಯ್ಕ್ ಭೇಟಿ ನೀಡಿ, ಪರಿಶೀಲ ನಡೆಸಿದರು.
ಹೆದ್ದಾರಿ ಕಾಮಗಾರಿ ನಡೆಯುವಾಗ ಯಾವುದೇ ರೀತಿಯ ಶಾಂತಿ ಭಂಗ ಆಗಬಾರದು. ಎಲ್ಲರ ಸಹಕಾರ ಬೇಕಾಗಿದೆ. ದೇವಸ್ಥಾನದ ಬೇಡಿಕೆಯಂತೆ 15 ಅಂಗಡಿಗಳನ್ನು ಬಿಟ್ಟು ಕಾಮಗಾರಿಯನ್ನು ನಡೆಸಲು ಕೇಳಿಕೊಂಡಿದ್ದಾರೆ, ಅದರಂತೆ ಹೆದ್ದಾರಿ ಇಲಾಖೆಯವರು ಪರಿಶೀಲನೆ ನಡೆಸಿ, ಯಾವುದೇ ಸಮಸ್ಯೆ ಬಾರದ ಹಾಗೆ ಕ್ರಮ ಜರುಗಿಸುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್ ನಾಯ್ಕ್ ಹೇಳಿದರು.
ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಹಾನಿಯಿಲ್ಲ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ :
ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ದೇವಸ್ಥಾನದ ಮುಂಭಾಗದಲ್ಲಿರುವ ನಾಲ್ಕು ವಾಣಿಜ್ಯ ಮಳಿಗೆಗಳಿಗೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡು, ಈ ಕುರಿತು ಈಗಾಗಲೇ ನೋಟಿಸ್ ನೀಡಲಾಗಿದೆ. ದೇವಸ್ಥಾನದ ಕಟ್ಟಡ, ಪ್ರಾಂಗಣ ಅಥವಾ ರಥ ಎಳೆಯುವ ಜಾಗಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
ದೇವಸ್ಥಾನದ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ದೇವಸ್ಥಾನ ಸಮಿತಿ ಸಲ್ಲಿಸಿದ ತಕ್ಷಣ ಭೂ ಪರಿಹಾರವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನದ ವತಿಯಿಂದ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್ ನಾಯ್ಕ್ ಅವರನ್ನು ಗೌರವಿಸಲಾಯಿತು.
ದೇವಸ್ಥಾನ ಆಡಳಿತ ಮೋಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಸಿಪಿಐ ಸಂದೀಪ್, ಹೆಬ್ರಿ ಪಿಎಸ್ಐ ಚಂದ್ರ ಎಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಂಜನ ಗೌಡ, ಎಇಗಳಾದ ಶಶಿಧರ್ ನವೀನ್ ರಾಜ್, ಸ್ಥಳೀಯ ಪ್ರಮುಖರಾದ ಪ್ರವೀಣ್ ಬಲ್ಲಾಳ್, ಭಾಸ್ಕರ್ ಜೋಯಿಸ್, ಹೆಬ್ರಿ ಟಿ.ಜಿ.ಆಚಾರ್ಯ, ಬೇಳಂಜೆ ಹರೀಶ್ ಪೂಜಾರಿ ಸಹಿತ, ವಿವಿಧ ಗಣ್ಯರು, ಪ್ರಮುಖರು, ಭಕ್ತ ಸಮೂಹದವರು, ಅರ್ಚಕ ವರ್ಗದವರು, ಇಲಾಖಾಧಿಕಾರಿಗಳಿದ್ದರು.





