Saturday, August 8, 2026
HomeUncategorizedಪಶ್ಚಿಮ ಘಟ್ಟದಲ್ಲಿ ಹರ್ಪಿಂಗ್, ನೈಟ್ ಟ್ರೈಲ್ಸ್ ನಿಂದ ವನ್ಯಜೀವಿಗಳಿಗೆ ಅಪಾಯ

ಪಶ್ಚಿಮ ಘಟ್ಟದಲ್ಲಿ ಹರ್ಪಿಂಗ್, ನೈಟ್ ಟ್ರೈಲ್ಸ್ ನಿಂದ ವನ್ಯಜೀವಿಗಳಿಗೆ ಅಪಾಯ

ಆಗುಂಬೆ : ಮುಂಗಾರು ಮಳೆ ಈ ಬಾರಿ ಕೈಕೊಟ್ಟಿದೆ. ಕಪ್ಪೆಗಳ ರಾಗ ವಿರಳವಾಗಿದೆ. ಕಪ್ಪೆಗಳ ಸಂತಾನೋತ್ಪತ್ತಿಗೆ ದೊಡ್ಡ ಪೆಟ್ಟು ಬಿದ್ದಿದೆ. ಈಗೀಗ ಸ್ವಲ್ಪ ಮಳೆ ಪ್ರಾರಂಭವಾಗಿ, ಈ ಮಧ್ಯೆ ಮಲೆನಾಡಿನಲ್ಲಿ ವನ್ಯಜೀವಿ ಪ್ರವಾಸೋದ್ಯಮ ಎಲ್ಲಾ ಎಲ್ಲೆಗಳನ್ನು ಮೀರಿ ವಿಪರೀತಕ್ಕೆ ಹೋಗುತ್ತಿದೆ. ಅದಕ್ಕೊಂದು ಅಗತ್ಯ ನಿಯಂತ್ರಣ, ಮಾರ್ಗಸೂಚಿ, ಮೇಲ್ವಿಚಾರಣೆ ಇಲ್ಲವಾಗಿದೆ.

ಮಾನ್ಸೂನ್ ವಾರಾಂತ್ಯಗಳಲ್ಲಿ ಹರ್ಪಿಂಗ್, ನೈಟ್ ಟ್ರೇಯಲ್ಸ್, ಫ್ರಗ್ ವಾಕ್, ಮಕ್ರೋ ಫೋಟೋಗ್ರಫಿ
ಮೊದಲಾದ ಹೆಸರಿನಲ್ಲಿ ಅನಧಿಕೃತ ಕಾರ್ಯಾಗಾರ, ಶಿಬಿರಗಳು ಆಗುಂಬೆ, ಶಿರಸಿ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟ ಭಾಗದಲ್ಲಿ ಹೆಚ್ಚುತ್ತಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳ ಟ್ರಾವೆಲ್ ಏಜೆನ್ಸಿಗಳು, ಫೋಟೋಗ್ರಫಿ ಸಂಸ್ಥೆಗಳು ಮಲೆನಾಡಿನ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, 10 ಸಾವಿರದಿಂದ 25 ಸಾವಿರದವರೆಗೆ ಶುಲ್ಕ ಪಡೆಯುತ್ತಿದ್ದಾರೆ. ಶಿಬಿರಗಳಲ್ಲಿ ಭಾಗವಹಿಸುವ ಬಹುಪಾಲು ಶ್ರೀಮಂತರು, ಐಟಿ ಉದ್ಯೋಗಿಗಳು, ವನ್ಯಜೀವಿಗಳ ಬಗೆಗೆ ಆಕರ್ಷಣೆ ಹೊಂದಿರುವವರು.

15-20 ಜನ ಗುಂಪು ಕಟ್ಟಿಕೊಂಡು ಅಕ್ರಮವಾಗಿ ಅರಣ್ಯ ಪ್ರವೇಶಿಸುತ್ತಾರೆ. ರಾತ್ರಿ ಟಾರ್ಚ್ ಹಿಡಿದು ಕಾಡಿನಲ್ಲಿ, ಹಳ್ಳ, ತೊರೆಗಳಲ್ಲಿ ಸಂಚರಿಸುತ್ತಾರೆ. ಕಪ್ಪೆ, ಹಾವು, ಜೇಡ ಸೇರಿದಂತೆ ವನ್ಯಜೀವಿಗಳನ್ನು ಹುಡುಕಿಕೊಂಡು ಹೋಗಿ ಅತ್ಯಾಧುನಿಕ ಕ್ಯಾಮೆರಾಗಳು, ಲೆನ್ಸ್ ಮೂಲಕ ಫ್ಲಾಶ್ ಲೈಟ್ ಬಿಟ್ಟು ಫೋಟೋಗ್ರಫಿ, ವಿಡಿಯೋಗ್ರಫಿ ಮಾಡುತ್ತಿದ್ದಾರೆ. ಅತ್ಯಾಕರ್ಷಕ ಫೋಟೋ, ವಿಡಿಯೋಗಳಿಗಾಗಿ ಹಾವು, ಕಪ್ಪೆ ಮೊದಲಾದ ವನ್ಯಜೀವಿಗಳ, ರಾತ್ರಿ ಸಂಚರಿಸುವ ಸಣ್ಣ ಪುಟ್ಟ ಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಮಾಡಲಾಗುತ್ತದೆ. ರಾತ್ರಿ ವೇಳೆ ಕಪ್ಪೆ, ಹಾವು ಆಹಾರಕ್ಕಾಗಿ ಹೊಂಚು ಹಾಕಿ ಒಂದೆಡೆ ಕುಳಿತಿರುತ್ತವೆ, ಅವುಗಳಿಗೆ ಹತ್ತಾರು ಜನರ ಟಾರ್ಚ್ ಲೈಟ್ ಗಳು, ಕ್ಯಾಮೆರಾದ ಫ್ಲಾಶ್ ಲೈಟ್ ಗಳು, ಮನುಷ್ಯರ ಓಡಾಟ ಅಡ್ಡಿಪಡಿಸುತ್ತವೆ. ಅವುಗಳ ಆಹಾರ, ಸಂತಾನೋತ್ಪತ್ತಿ, ಓಡಾಟಕ್ಕೆ, ಸಹಜ ಜೀವನಕ್ಕೆ ಅಡ್ಡಿ ಉಂಟಾಗುತ್ತದೆ. ತಮ್ಮ ಮನರಂಜನೆಗಾಗಿ ವನ್ಯಜೀವಿಗಳ ಮೇಲೆ ಶೋಷಣೆ ನಡೆಯುತ್ತಿದೆ. ಇದರಲ್ಲಿ ಶೈಕ್ಷಣಿಕ ಚಟುವಟಿಕೆ, ಅಧ್ಯಯನ, ಸಂಶೋಧನೆ, ಸಂರಕ್ಷಣೆಯ ಉದ್ದೇಶ ಇಲ್ಲವಾಗಿದೆ, ಮನರಂಜನೆ, ಫೋಟೋಗ್ರಫಿ, ಹಣ ಮಾಡುವುದು ಇರಾದೆಯಾಗಿದೆ.

ನಗರಗಳಲ್ಲಿ ಇರುವ ವನ್ಯಜೀವಿ ಆಕರ್ಷಣೆ ಹೊಂದಿರುವವರಿಗೆ, ಅಪರೂಪದ ವನ್ಯಜೀವಿಗಳನ್ನು ನೋಡಬೇಕು, ಅವುಗಳ ಫೋಟೋ ಕ್ಲಿಕ್ಕಿಸಬೇಕು, ಅವುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಬೇಕು. ಇದೊಂದು ಟ್ರೆಂಡ್ ಆಗಿ ಬದಲಾಗುತ್ತಿದ್ದು, ಅದಕ್ಕೆ ಹರ್ಪಿಂಗ್, ಮಕ್ರೋ ಫೋಟೋಗ್ರಫಿ ಯಂತಹ ವನ್ಯಜೀವಿ ಕೇಂದ್ರಿತ ಆಕರ್ಷಣೆಯ ಚಟುವಟಿಕೆಗಳು ಹುಟ್ಟಿಕೊಂಡಿವೆ. ಹಣದಾಸೆಗಾಗಿ ಎಲ್ಲಾ ನೈತಿಕ ಗೆರೆಗಳನ್ನು ದಾಟಿ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಡ್ ವೈಪರ್ ಗಳನ್ನು ತಂದಿರಿಸಿಕೊಂಡು ಫೋಟೋಗ್ರಫಿ ಮಾಡುತ್ತಾರೆ. ಈ ಹಾವುಗಳು ಹೆಚ್ಚು ದೂರ ಚಲಿಸುವುದಿಲ್ಲ. ಒಮ್ಮೆ ಕಾಡಿನಿಂದ ತಮ್ಮ ಪರಿಸರಕ್ಕೆ ತಂದಿರಿಸಿದರೆ, ಅಲ್ಲೇ ಸುತ್ತಮುತ್ತ ಸಂಚರಿಸಿಕೊಂಡು ಇರುತ್ತವೆ. ವಿವಿಧ ವರ್ಣಗಳಲ್ಲಿ ಕಂಡುಬರುವ, ಚಿತ್ತಾಕರ್ಷಕವಾಗಿರುವ ಮಲಬಾರ್ ಪಿಟ್ ವೈಪರ್, ಹಂಪ್ ನೋಸ್ಟ್ ವೈಪರ್ ಗಳು ವನ್ಯಜೀವಿ ಛಾಯಾಗ್ರಾಹಕರ ಆಕರ್ಷಣೆ ಆಗಿದೆ. ಇನ್ಸ್ಟಾಗ್ರಾಮ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲು ಕೆಲವರಿಗೆ ವನ್ಯಜೀವಿಗಳ ಅತ್ಯಾಕರ್ಷಕ ಫೋಟೋ ಬೇಕು. ಅದಕ್ಕಾಗಿ ಎಲ್ಲಾ ಕಾನೂನು ಮತ್ತು ನೈತಿಕ ಗೆರೆಗಳನ್ನು ದಾಟುತ್ತಿದ್ದಾರೆ.

ಅರಣ್ಯ ಇಲಾಖೆಯಿಂದ ಯಾವುದೇ ಕಠಿಣ ಕ್ರಮ ಇಲ್ಲ !.

ಇಂತಹ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕುತ್ತಿಲ್ಲ. ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ಯಾವುದೇ ಅಧಿಕೃತ ಯೋಜನೆ, ಪೂರ್ವಾನುಮತಿ, ಮೇಲ್ವಿಚಾರಣೆ, ನಿಯಂತ್ರಣ, ದಾಖಲಾತಿ ನಿರ್ವಹಣೆ, ಅಗತ್ಯ ಬಂದಾಗ ಅವುಗಳ ತಪಾಸಣೆ ಯಾವುದೂ ಇಲ್ಲದೆ ತಮಗಿಷ್ಟ ಬಂದಂತೆ ನಡೆಸುತ್ತಿರುವ ಚಟುವಟಿಕೆಗಳಾಗಿವೆ.

…….

ವನ್ಯಜೀವಿ ಕೇಂದ್ರಿತ ಆಕರ್ಷಣೆಯ ಚಟುವಟಿಕೆಗಳಿಗೆ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಸಂಪೂರ್ಣ ನಿಷೇಧ ಹೇರಬೇಕು. ಸಂಶೋಧನೆ, ಅಧ್ಯಯನ, ಶೈಕ್ಷಣಿಕ ಉದ್ದೇಶ ಇಲ್ಲದ ಇಂತಹ ಅನಧಿಕೃತ ಚಟುವಟಿಕೆಗಳಿಂದ ವನ್ಯಜೀವಿಗಳ ಶೋಷಣೆ ಆಗುತ್ತಿದೆಯೇ ಹೊರತು ಯಾವುದೇ ಜಾಗೃತಿ, ಸಂರಕ್ಷಣೆ ಆಗುತ್ತಿಲ್ಲ. ಹೆಚ್ಚಿನ ಕಡೆ ಅರಣ್ಯ, ವನ್ಯಜೀವಿ ಕಾನೂನುಗಳನ್ನು ಗಾಳಿಗೆ ತೂರಿ ತಮಗಿಷ್ಟ ಬಂದಂತೆ ಇಂತಹ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮುಗ್ಧ ಜೀವಿಗಳನ್ನು ಶೋಷಣೆ ಮಾಡಲಾಗುತ್ತಿದೆ.

– ನಾಗರಾಜ ಕೂವೆ, ಮೂಡಿಗೆರೆ, ಪರಿಸರವಾದಿ .


…….

ಅರಣ್ಯದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಅವಕಾಶವಿಲ್ಲ. ಕೆಲವರು ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಪೋಸ್ಟರ್ ಗಳ ಮೂಲಕ ಚಟುವಟಿಕೆ ನಡೆಯುವುದರ ಬಗ್ಗೆ ಹಾಕಿಕೊಂಡಿರುತ್ತಾರೆ. ಅವರಿಗೆ ನೋಟಿಸ್ ನೀಡಿ ಎಲ್ಲಿ ಚಟುವಟಿಕೆಗಳು ನಡೆಯುತ್ತಿದೆ ಎಂಬುದನ್ನು ಮಾಹಿತಿ ಪಡೆದಿದ್ದೇವೆ. ವನ್ಯಜೀವಿಗಳಿಗೆ ಅಡ್ಡಿ ಉಪಟಳಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ.

 ಡಾ. ಅಜ್ಜಯ್ಯ,ಜಿ. ಆರ್, ಡಿಸಿಎಫ್, ಪ್ರಾದೇಶಿಕ ವಿಭಾಗ, ಶಿವಮೊಗ್ಗ.

…………

ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ದೂರುಗಳು ಬಂದಿವೆ. ಅಧಿಕಾರಿಗಳಿಗೆ ತಿಳಿಸಿ, ಬಗ್ಗೆ ಸೂಕ್ತ ಕ್ರಮ ಜರುಗಿಸಲು ತಿಳಿಸಿದ್ದೇನೆ.

ಕುಮಾರ್ ಪುಷ್ಕರ್, ಪಿ.ಸಿ.ಸಿ.ಎಫ್ – ವರ್ಲ್ಡ್ ಲೈಫ್ ವಿಭಾಗ.
ಅರಣ್ಯ ಇಲಾಖೆ . ಬೆಂಗಳೂರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments