ಹೆಬ್ರಿ : ಯುವಜನತೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಸೇವೆಯ ಮನೋಭಾವ ಮೂಡಿಸುವ ಉದ್ದೇಶದಿಂದ ಅಮೃತ ಭಾರತಿ ಪದವಿಪೂರ್ವ ಕಾಲೇಜು ಮತ್ತು ರಾಷ್ಟ್ರೀಯ ಪದವಿಪೂರ್ವ ಸಂಘ ಉಡುಪಿ ಆಶ್ರಯದಲ್ಲಿ “ಭಾರತೀಯ ಸೇನೆಯಲ್ಲಿನ ವೃತ್ತಿ ಅವಕಾಶಗಳು” ಎಂಬ ವಿಷಯದ ಕುರಿತು ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಸಂಯೋಜಕ ವಿಜಯ ಕೊಡವೂರು ಉದ್ಘಾಟಿಸಿ ಉದ್ಘಾಟಿಸಿ, ಮಾತನಾಡಿ, ಇಂದಿನ ಯುವಕರು ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಮನೋಭಾವ ಇಟ್ಟುಕೊಂಡು ಮುಂದೆ ಬರಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಸೇನಾ ನೇಮಕಾತಿ ಕಚೇರಿ ಮಂಗಳೂರಿನ ನೇಮಕಾತಿ ವೈದ್ಯಾಧಿಕಾರಿ ಮೇಜರ್ ಅಭಿಜಿತ್ ಸಿಂಗ್ ಆಗಮಿಸಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿನ ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
“ಗೌರವದಿಂದ ಸೇವೆ ಮಾಡಿ, ಧೈರ್ಯದಿಂದ ಮುನ್ನಡೆಸಿ – Serve with Honour, Lead with Courage” ಎಂಬ ಸಂದೇಶದೊಂದಿಗೆ ಮಾತನಾಡಿದರು. “ಸಮವಸ್ತ್ರ ಧರಿಸುವುದು ಕೇವಲ ಕೆಲಸವಲ್ಲ. ಇದು 140 ಕೋಟಿ ಜನರ ನಂಬಿಕೆ. ದೈಹಿಕ ಸದೃಢತೆ, ಮಾನಸಿಕ ಶಿಸ್ತು ಮತ್ತು ದೇಶಭಕ್ತಿ ಇಲ್ಲದೆ ಸೇನೆಗೆ ಹೋಗಲು ಸಾಧ್ಯವಿಲ್ಲ” ಎಂದು ಹೇಳಿದರು. ನೇಮಕಾತಿ ಪ್ರಕ್ರಿಯೆ, ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಬಗ್ಗೆ ತಿಳಿಸಿದರು. ಅನೇಕ ವಿದ್ಯಾರ್ಥಿಗಳು ಸಣ್ಣ ತಪ್ಪಿನಿಂದ ಅವಕಾಶ ಕಳೆದುಕೊಳ್ಳುತ್ತಾರೆ. ಆದ್ದರಿಂದ ದಾಖಲೆಗಳನ್ನು ಮೊದಲೇ ಸಿದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬಿಜೆಪಿ ಉಡುಪಿ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಸಂಚಾಲಕ ಮಿಥೇಶ್ ಕುಮಾರ್ ಮೂಡುಕೋಣಾಜೆ ಮಾತನಾಡಿ ದೇಶಸೇವೆ ಮಾಡುವ ಕನಸು ಇರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಕಾರ್ಯಗಾರ ದಾರಿದೀಪವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಮೇಜರ್ ಅಭಿಜಿತ್ ಸಿಂಗ್ ಮತ್ತು ಹವಾಲ್ದಾರ್ ಧರ್ಮವೀರ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಗಾರದಿಂದ ಕಾಲೇಜಿನ ವಿದ್ಯಾರ್ಥಿಗಳು NDA ಮತ್ತು AGNIVEER ಗೆ ಅರ್ಜಿ ಸಲ್ಲಿಸುವ ಆಸಕ್ತಿ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಅಮೃತ ಭಾರತಿ ಟ್ರಸ್ಟಿ ಎಚ್. ಬಾಲಕೃಷ್ಣ ಮಲ್ಯ ವಹಿಸಿ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸುತ್ತದೆ ಎಂದು ಭರವಸೆ ನೀಡಿದರು.
ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ. ರವಿ ರಾವ್, ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಚ್. ರಾಜೇಶ್ ನಾಯಕ್, ಪ್ರಾಂಶುಪಾಲ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ವೀಣೆಶ್ ಅಮೀನ್ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕ ಚಂದ್ರಹಾಸ್ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಹೆಗಡೆ ಪ್ರಾರ್ಥನಾ ಗೀತೆ ಹಾಡಿದರು.



