Sunday, August 9, 2026
Homeಕಾರ್ಕಳಹಿರಿಯ ಪತ್ರಕರ್ತ ಕುಂಟಾಡಿ ದಯಾನಂದ ಪೈ ಅವರಿಗೆ ಡಾ. ಶೇಖರ ಅಜೆಕಾರು ಸಂಸ್ಮರಣಾ ರಾಜ್ಯ ಪ್ರಶಸ್ತಿ...

ಹಿರಿಯ ಪತ್ರಕರ್ತ ಕುಂಟಾಡಿ ದಯಾನಂದ ಪೈ ಅವರಿಗೆ ಡಾ. ಶೇಖರ ಅಜೆಕಾರು ಸಂಸ್ಮರಣಾ ರಾಜ್ಯ ಪ್ರಶಸ್ತಿ ಪ್ರಧಾನ.

ಐಶ್ವರ್ಯವಿಲ್ಲದೆಯೂ ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬುದನ್ನು ಡಾ. ಶೇಖರ್ ಅಜೆಕಾರು ತೋರಿಸಿಕೊಟ್ಟರು : ಡಾ . ಮೋಹನ್ ಆಳ್ವ

ಕಾರ್ಕಳ: ಪತ್ರಕರ್ತ ದಿ. ಡಾ. ಶೇಖರ್ ಅಜೆಕಾರು ಅವರೊಂದಿಗೆ ದೀರ್ಘಕಾಲದ ಒಡನಾಟವಿತ್ತು. ಅವರ ಜೀವನಶೈಲಿಯೇ ವಿಭಿನ್ನವಾಗಿತ್ತು. ಸಮಾಜದ ಬಗ್ಗೆ ಅವರಿಗಿದ್ದ ಪರಿಕಲ್ಪನೆ, ವಿಚಾರವಂತಿಕೆ ಹಾಗೂ ಸೃಜನಶೀಲತೆ ಗಮನಾರ್ಹವಾಗಿತ್ತು. ಐಶ್ವರ್ಯವಿಲ್ಲದೆಯೂ ಉತ್ತಮ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಾಣೂರಿನ ರಾಜರಾಜೇಶ್ವರಿ ನ್ಯಾಷನಲ್ ಸ್ಕೂಲ್-ಕಾಲೇಜು ಮೈದಾನದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ಡಾ. ಶೇಖರ್ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ದಯಾನಂದ ಕುಂಟಾಡಿ ಪೈ ಅವರಿಗೆ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.

ಡಾ. ಶೇಖರ್ ಅಜೆಕಾರು ಅವರು ಎಲ್ಲೆಡೆ ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತಿದ್ದ ವ್ಯಕ್ತಿತ್ವ ಹೊಂದಿದ್ದರು. ಪತ್ರಕರ್ತರಾಗಿದ್ದ ಅವರು ಚಲನಚಿತ್ರ ನಟರು ಹಾಗೂ ಕ್ರಿಕೆಟ್ ದಿಗ್ಗಜರೊಂದಿಗೆ ಸಂಪರ್ಕ ಹೊಂದಿದ್ದರು. ದೂರದ ಮುಂಬಯಿಯಲ್ಲಿದ್ದುಕೊಂಡೇ ಕನ್ನಡದ ಪ್ರಚಾರ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದಿಗ್ರಾಮೋತ್ಸವ ಪರಿಕಲ್ಪನೆ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ವಿನೂತನ ಪ್ರಯತ್ನಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕ್ವಾರಿ ಮತ್ತು ಕ್ರಶರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಸಿರಿವಂತಿಕೆ ಇಲ್ಲದಿದ್ದರೂ ವೃತ್ತಿ ಕ್ಷೇತ್ರದ ಮೂಲಕ ಸಮಾಜಕ್ಕೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬಹುದು ಎಂಬುದನ್ನು ದಿ. ಶೇಖರ್ ಅಜೆಕಾರು ಮಾಡಿ ತೋರಿಸಿದ್ದಾರೆ. ಅವರನ್ನು ಸ್ಮರಿಸುವುದು ಅತ್ಯುತ್ತಮ ಕಾರ್ಯವಾಗಿದೆ. ಸಮಾಜಮುಖಿ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಡಾ. ಶೇಖರ್ ಅಜೆಕಾರು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಆತ್ಮಮೆಚ್ಚುವ ಕಾರ್ಯವಾಗಿದೆ. ಜನ್ಮದಿಂದ ಯಾರೂ ದೊಡ್ಡವರಾಗುವುದಿಲ್ಲ; ಕಾರ್ಯದಿಂದ ದೊಡ್ಡವರಾಗುತ್ತಾರೆ ಎಂದರು.
ರಾಜರಾಜೇಶ್ವರಿ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಇದು ಆದರ್ಶ ಹಾಗೂ ಮಾದರಿ ಕಾರ್ಯಕ್ರಮವಾಗಿದೆ. ಪತ್ರಕರ್ತ ವೃತ್ತಿ ಪವಿತ್ರವಾದದ್ದು. ಪತ್ರಿಕಾ ಕ್ಷೇತ್ರ ಸಮಾಜಕ್ಕೆ ದೃಷ್ಟಿ ನೀಡುವ ಕ್ಷೇತ್ರವಾಗಿದೆ. ಪತ್ರಿಕೆ ಹಾಗೂ ಶಿಕ್ಷಣ ಎರಡೂ ಸವಾಲಿನ ಕ್ಷೇತ್ರಗಳಾಗಿವೆ. ಹೋಟೆಲ್‌ನಲ್ಲಿ ದೋಸೆಗೆ ರೂ. 70 ನೀಡುವ ನಾವು ಜ್ಞಾನವನ್ನು ತುಂಬಿಸುವ ಪತ್ರಿಕೆಗೆ ರೂ.10 ನೀಡಲು ಹಿಂದೇಟು ಹಾಕುತ್ತೇವೆ ಎಂದು ಹೇಳಿದರು.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಮಾತನಾಡಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ನಜೀರ್ ಪೊಲ್ಯ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಮುಂಡ್ಕೂರು, ತಾಲೂಕು ಸಂಘದ ಕೋಶಾಧಿಕಾರಿ ಸತೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹರೀಶ್ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು. ಹಿರಿಯ ಪತ್ರಕರ್ತ ದಯಾನಂದ ಪೈ ಕುಂಟಾಡಿ ಅವರಿಗೆ ಡಾ. ಶೇಖರ್ ಅಜೆಕಾರು ಅವರ ಹೆಸರಿನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಡಾ. ಶೇಖರ್ ಅಜೆಕಾರು ಅವರ ಧರ್ಮಪತ್ನಿ ತಾರಾ( ಸೌಮ್ಯಶ್ರೀ ಶೇಖರ ಅಜೆಕಾರು ಅವರಿಗೆ ಕಿರು ಆರ್ಥಿಕ ನೆರವು ನೀಡಲಾಯಿತು.

ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸಚ್ಚೇರಿಪೇಟೆ ವಂದಿಸಿದರು. ಸಿದ್ಧಾಪುರ ವಾಸುದೇವ ಭಟ್ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments