ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಧಿಕಾರಿ ಆದೇಶವಿದ್ದರೂ ಆಗದ ಕ್ರಮ.
ಹೆಬ್ರಿ : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಬೆಟ್ಟು ಗ್ರಾಮದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯಿದೆಯ ವಿಧಿಗಳನ್ನು ಅನುಸರಿದೆ ಉದ್ಯಮ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದರಿಂದ ಸಾರ್ವಜಿಕರಿಗೆ ತೊಂದರೆಯಾಗುತ್ತಿದೆ. ಸಂಸ್ಥೆಯ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡು ಸಂಸ್ಥೆಯನ್ನು ಮುಟ್ಟುಗೋಲು ಹಾಕಬೇಕು ಎಂದು ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಹೆಬ್ರಿ ಕಾರ್ಕಳ ಇದರ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಒತ್ತಾಯಿಸಿದ್ದಾರೆ. ಅವರು ಹೆಬ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮುಂದಿನ ಆದೇಶದ ವರೆಗೆ ಅತೀ ಶೀಘ್ರವಾಗಿ ಮುಟ್ಟುಗೋಲು ಹಾಕುವಂತೆ ಆದೇಶ ನೀಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಧಿಕಾರಿಯವರಿಗೆ ಮುಟ್ಟುಗೋಲು ಹಾಕಲು ಸೂಚಿಸಿದೆ. ಜಿಲ್ಲಾಧಿಕಾರಿಯವರು ಹೆಬ್ರಿ ತಹಶೀಲ್ಧಾರ್, ಕುಂದಾಪುರ ಸಹಾಯಕ ಕಮೀಷನ್ ಅವರಿಗೆ ಸೂಚಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ ಪರಿಸ ಅಧಿಕಾರಿಯವರಿಗೆ ಮಾಹಿತಿಯನ್ನು ನೀಡಿದ್ದಾರೆ. ಹೆಬ್ರಿ ತಹಶೀಲ್ಧಾರ್ ಅವರು ಪರಿಸರ ಅಧಿಕಾರಿ, ಶಿವಪುರ ಗ್ರಾಮ ಪಂಚಾಯಿತಿ ಮತ್ತು ಹೆಬ್ರಿ ಪೊಲೀಸರಿಗೆ ಮುಟ್ಟುಗೋಲು ಹಾಕಲು ಸಹಕಾರ ನೀಡುವಂತೆ ಕೋರಿದ್ದಾರೆ. ಆದರೂ ಈ ತನಕ ಯಾವೂದೇ ಕಾನೂನು ಕ್ರಮ ಆಗಿಲ್ಲ ಎಂದು ಕೆರೆಬೆಟ್ಟು ಸಂಜೀವ ಶೆಟ್ಟಿ ಆರೋಪಿಸಿದ್ದಾರೆ.
ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ : ನಮ್ಮ ಹೆಬ್ರಿ ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆಯಿದೆ. ಇದ್ದ ಸಿಬ್ಬಂದಿ ವರ್ಗಾವಣೆಗೊಂಡಿದ್ದಾರೆ. ಜನರ ಕೆಲಸಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಾಕಷ್ಟು ಸಿಬ್ಬಂದಿ ವರ್ಗವನ್ನು ನೇಮಿಸಿ ಎಂದು ಕೆರೆಬೆಟ್ಟು ಸಂಜೀವ ಶೆಟ್ಟಿ ಒತ್ತಾಯಿಸಿದ್ದಾರೆ. ನಾಡ್ಪಾಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಳ್ಕಾಡು ಭಾಸ್ಕರ ಶೆಟ್ಟಿ ಇದ್ದರು.


