Wednesday, August 19, 2026
Homeಹೆಬ್ರಿಪೆರ್ಡೂರು: ಸಂಭ್ರಮದಿಂದ ಸಂಪನ್ನಗೊಂಡ ಮದುಮಕ್ಕಳ ಜಾತ್ರೆ.

ಪೆರ್ಡೂರು: ಸಂಭ್ರಮದಿಂದ ಸಂಪನ್ನಗೊಂಡ ಮದುಮಕ್ಕಳ ಜಾತ್ರೆ.

ಕದಳೀಪ್ರಿಯ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ಸಂಭ್ರಮ

ಪೆರ್ಡೂರು : ಬಾಳೆಹಣ್ಣಿಗೊಲಿದ ದೇವರು ಎಂದು ಪ್ರಸಿದ್ಧಿ ಪಡೆದ ಕದಳೀ ಪ್ರಿಯ ಪೆರ್ಡೂರು ಶ್ರೀ ಅನಂತಪಧ್ಮನಾಭ ದೇವರ ಸನ್ನಿಧಿಯಲ್ಲಿ ಸೋಮವಾರ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆ ನಡೆಯಿತು. ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ವರ್ಷದ ೧೨ ಸಂಕ್ರಮಣದಲ್ಲಿ ಸಿಂಹ ಸಂಕ್ರಮಣ ಬಹಳ ವಿಶೇಷವಾಗಿದ್ದು ಈ ಸಂಕ್ರಮಣದಂದು ಪೆರ್ಡೂರಿನಲ್ಲಿ ಪ್ರತೀ ವರ್ಷ ಜಾತ್ರೆಯ ಸಂಭ್ರಮ ಕಂಡುಬರುತ್ತದೆ. ಈ ದಿನದಂದು ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ದಂಪತಿಗಳು ಬಂದು ಅನಂತಪಧ್ಮನಾಭ ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ಹಾಗಾಗಿ ಇದು ಮದುಮಕ್ಕಳ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ.

ಆಷಾಡ ಕಳೆದು ಸಿಂಹ ಮಾಸದ ಈ ಸಂಕ್ರಮಣ ಮದುಮಕ್ಕಳಿಗೆ ವಿಶೇಷವಾಗಿದೆ. ಈ ಸಿಂಹ ಸಂಕ್ರಮಣದಂದು ದೇವರ ದರ್ಶನಕ್ಕೆ ಉಡುಪಿ ಸೇರಿದಂತೆ ನೆರೆಯ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಿಂದ ಸಾವಿರಾರು ಭಕ್ತಾಧಿಗಳು ಶ್ರೀ ಕ್ಷೇತ್ರದ ದೇವರ ದರ್ಶನಕ್ಕೆ ಬರುವುದು ಇಲ್ಲಿಯ ವಿಶೇಷ. ಮದುಮಗ ತನ್ನ ಮನೆಯ ಹಿರಿಯರೊಂದಿಗೆ ಬಂದು ತನ್ನ ಮಡದಿಯನ್ನು ಹಾಗು ಮದುಮಗಳು ತನ್ನ ಪೋಷಕರೊಂದಿಗೆ ಬಂದು ಗಂಡನ ಮನೆಗೆ ತೆರಳುವುದು ಈ ಸಂಕ್ರಮಣದ ವಿಶೇಷವಾಗಿದೆ. ಹಾಗಾಗಿ ಈ ಹೊಸದಾಗಿ ಮದುವೆಯಾದ ನವ ದಂಪತಿಗಳು ಜತೆಯಾಗಿ ಬಂದು ದೇವರ ದರ್ಶನ ಪಡೆದು ತಮ್ಮ ಮುಂದಿನ ಭವ್ಯ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಈ ಹಿಂದಿನಿಂದಲೂ ನಡೆದು ಬಂದಂತಹ ಸಂಪ್ರದಾಯವಾಗಿದೆ.

ಬಾಳೆಹಣ್ಣಿಗೊಲಿದ ಭಗವಂತ ಶ್ರೀ ಅನಂತಪದ್ಮನಾಭ ದೇವರು. ಬಾಳೆಹಣ್ಣು ಪ್ರಿಯ ಶ್ರೀ ಅನಂತಪಧ್ಮನಾಭ ದೇವರ ಸಾನ್ನಿಧ್ಯ ಬಹು ಕಾರಣಿವಾಗಿದೆ. ಸಾವಿರಾರು ವರ್ಷಗಳಿಂದ ಭಕ್ತರಿಂದ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಬಾಳೆಹಣ್ಣಿನ ಸೇವೆ ನಡೆದುಬರುತ್ತಿದ್ದು ಸಾವಿರ ಬಾಳೆಹಣ್ಣು ಸೇವೆ, ೫೦೦ ಬಾಳೆಹಣ್ಣು ಸೇವೆ, ದಿನಕ್ಕೊಂದು ಬಾಳೆಹಣ್ಣು, ಸಿಬ್ಲಹಣ್ಣು ಹೀಗೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ವಿವಿಧ ರೀತಿಯ ಬಾಳೆಹಣ್ಣಿನ ಸೇವೆಯನ್ನು ದೇವರಿಗೆ ಸಲ್ಲಿಸುತ್ತಾರೆ.

ಮಧ್ಯಾಹ್ನ ದೇವರ ಬಲಿ ಮೂರ್ತಿ ಉತ್ಸವ ನಡೆಯಿತು. 6000ಕ್ಕಿಂತ ಅಧಿಕ ಮಂದಿ ಭೋಜನ ಸವಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶಾಂತಾರಾಮ ಸೂಡ, ಪ್ರಧಾನ‌ಕಾರ್ಯದರ್ಶಿ ಸಂತೋಷ ಕುಲಾಲ್ ಪಕ್ಕಾಲು, ಸಮಿತಿಯ ಸದಸ್ಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments