Sunday, August 9, 2026
Homeಹೆಬ್ರಿದೌರ್ಬಲ್ಯ ತೊರೆಯಿರಿ - ಸಾಮರ್ಥ್ಯ ಅರಿಯಿರಿ : ಸಂತೋಷ್ ಕುಮಾರ್

ದೌರ್ಬಲ್ಯ ತೊರೆಯಿರಿ – ಸಾಮರ್ಥ್ಯ ಅರಿಯಿರಿ : ಸಂತೋಷ್ ಕುಮಾರ್

ನಿಮ್ಮೊಳಗಿನ ಸಾಮರ್ಥ್ಯ, ದೌರ್ಬಲ್ಯ ಅರಿಯಬೇಕು. ಸಿಕ್ಕ ಅವಕಾಶವನ್ನು ದೌರ್ಬಲ್ಯದ ಬದಲು ಸಾಮರ್ಥ್ಯ ತೋರಿ ಸದ್ಭಳಕೆ ಮಾಡಬೇಕು ಎಂದು ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ತಂತ್ರಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಎಸ್. ಎಚ್. ಸಂತೋಷ್ ಕುಮಾರ್ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆ ಸಹಯೋಗದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಬುಧವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರ ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ವಿಷಯವಾಗಿ ದಿಕ್ಸೂಚಿ ಭಾಷಣ ಮಾಡಿದರು.

ಬೆಳಗ್ಗೆ ಹಾಸಿಗೆಯಿಂದ ಚಿಂತೆಯ ಬದಲು ಧನಾತ್ಮಕ ಚಿಂತನೆಯೊಂದಿಗೆ ಎದ್ದೇಳಿ. ದೌರ್ಬಲ್ಯವೇ ನಿಮ್ಮ ಸಾಧನೆಗೆ ತಡೆಗೋಡೆ. ಬೇರೆಯವರ ಹೋಲಿಕೆ ಬದಲು ಸ್ವ ಪ್ರೀತಿ, ಗೌರವ ಬಲು ಮುಖ್ಯ. ಯಾರೂ ಏನೇ ಅಂದರೂ ಒತ್ತಡಕ್ಕೆ ಒಳಗಾಗಬಾರದು. ಬದುಕಿನಲ್ಲಿ ಕುತೂಹಲ, ಆಸಕ್ತಿ ಇಲ್ಲದವರು ನಿರ್ಜೀವಿಗಳಂತೆ.

ಸಾಮರ್ಥ್ಯ, ಗುರಿ, ಕೌಶಲ್ಯ, ಕ್ರಿಯಾಶೀಲತೆ, ನಿಸ್ವಾರ್ಥತೆ, ತಂಡಸ್ಛೂರ್ತಿ, ಬಹುಸಂಸ್ಕೃತಿ, ಪರಿಸರ, ಉತ್ತೇಜನ ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಾದಿಯಲ್ಲಿ ಅತಿ ಮುಖ್ಯ. ಕೀಳರಿಮೆ, ಅಭದ್ರತೆ, ಭಯ, ಭಾಷೆ ಹಾಗೂ ಮಾತಿನ ತೊಡಕು, ಹೊಂದಾಣಿಕೆ ಕೊರತೆ, ಆತಂಕದ ಚಿಂತೆ ಬೇಡ.

ಕಲಿಕಾ ನಡವಳಿಕೆಯಲ್ಲಿ ಪರಿಸರ, ಶಿಕ್ಷಣ, ತರಬೇತಿ, ಕೌಶಲ್ಯ ಮಹತ್ವ ಪಡೆದಿದೆ. ಭಾಷೆ, ತಂತ್ರಜ್ಞಾನ, ಸ್ಪರ್ಧೆ ಹಾಗೂ ಆಧುನಿಕ ಬೇಡಿಕೆ ಸವಾಲೊಡ್ಡಿದರೂ ಅದನ್ನು ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸದಿಂದ ಎದುರಿಸಬೇಕು. ಮನದಲ್ಲಿ ಧನಾತ್ಮಕ ಚಿಂತನೆ, ಮೊಗದಲ್ಲಿ ನಗುವಿದ್ದವನ ಕೆಲಸ ಸಲೀಸು ಎಂದರು.
….
ಮಗ, ಮಡದಿಯೂ ಕ್ಲಾಸ್‌ಮೇಟ್ !
ವಿಜ್ಞಾನದ ಬಳಿಕ ಕಲಾ ವಿಭಾಗದಲ್ಲಿ ಪಿಯುಸಿ ಉತ್ತೀರ್ಣನಾಗಲು ಐದು ವರ್ಷ ತೆಗೆದುಕೊಂಡಿದ್ದರೂ ಕಲಿಕೆ, ಜ್ಞಾನ ಗಳಿಕೆಯ ಅದಮ್ಯ ಉತ್ಸಾಹದಿಂದ ಹಲವು ಪದವಿ ಪಡೆವಾಗ ನನ್ನ ಮಡದಿ, ಮಗನೂ ನನ್ನ ಸಹಪಾಠಿಗಳಾಗಿದ್ದರು. ಸರಕಾರಿ ಇಲಾಖೆಯಿಂದ ನಿವೃತ್ತಿ ಬಳಿಕವೂ ಪದವಿ ಪಡೆದಿದ್ದೇನೆ. ಸಾಧನೆ ಅಸಾಧ್ಯವೆನ್ನುವ ಮಾತೇ ಇಲ್ಲ. ಬದುಕನ್ನು ಎಂಜಾಯ್ ಮಾಡಿ ಎಂದು ಎಸ್. ಎಚ್. ಸಂತೋಷ್ ಕುಮಾರ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments