ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತಾ ಭಾರತಿ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಬುಧವಾರ ಕಾಲೇಜು ಸಭಾಂಗಣದಲ್ಲಿ “ಹಾವುಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನ” ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.
ಮುಖ್ಯ ಸಂಪನ್ಮೂಲ ವ್ಯಕ್ತಿ ಸರ್ಪ ತಜ್ಞರು ಮತ್ತು ವನ್ಯಜೀವಿ ಸಂರಕ್ಷಣಾವಾದಿ ಗುರುರಾಜ್ ಸನಿಲ್ ಮಾತನಾಡಿ ” ಹಾವುಗಳ ಬಗ್ಗೆ ತಿಳಿದುಕೊಳ್ಳುವುದೇ ಸಂರಕ್ಷಣೆಯ ಮೊದಲ ಹೆಜ್ಜೆ ” ಎಂಬ ವಿಷಯದಲ್ಲಿ ಮಾತನಾಡಿ, ಹಾವುಗಳು ಪರಿಸರದ ಆಹಾರ ಸರಪಳಿಯಲ್ಲಿ ಹೊಂದಿರುವ ಮಹತ್ವದ ಪಾತ್ರದ ಬಗ್ಗೆ ವಿವರಿಸಿದರು. ರೈತರ ಸ್ನೇಹಿತರಾದ ಹಾವುಗಳು ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಬೆಳೆಗಳನ್ನು ರಕ್ಷಿಸುತ್ತವೆ ಎಂದರು.
ಹಾವು ಕಡಿತವಾದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ತರುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಹಾವುಗಳನ್ನು ಗುರುತಿಸುವ ವಿಧಾನಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಹಾವುಗಳನ್ನು ಕಂಡ ತಕ್ಷಣ ಕೊಲ್ಲುವ ಬದಲು ವನ್ಯಜೀವಿ ಇಲಾಖೆ ಅಥವಾ ತಜ್ಞರನ್ನು ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಕರೆ ತಿಳಿಸಿದರು.
ಅಂಧಶ್ರದ್ಧೆ, ಮೂಢನಂಬಿಕೆಗಳಿಂದಾಗಿ ಪ್ರತಿ ವರ್ಷ ಸಾವಿರಾರು ನಿರುಪದ್ರವಿ ಹಾವುಗಳ ಕೊಲೆಯಾಗುತ್ತಿವೆ. ಪರಿಸರ ಸಮತೋಲನ ಕಾಪಾಡಲು ಹಾವುಗಳ ಸಂರಕ್ಷಣೆ ಅತ್ಯಗತ್ಯ ಎಂದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಜೋಗಿ ಗುರುರಾಜ್ ಸನಿಲ್ ಅವರನ್ನು ಗೌರವಿಸಿದರು. ಇಕೋ ಕ್ಲಬ್ ಸಂಯೋಜಕಿ ಚಿತ್ರಾ ಕೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದರು.
ತಸ್ವಿ ಡಿ ಶೆಟ್ಟಿ ಸ್ವಾಗತಿಸಿ ಪರಿಚಯ ಮಾಡಿದರು. ಅವನಿ ನಿರೂಪಿಸಿದರು. ರಚಿತಾ ವಂದಿಸಿದರು.





