Wednesday, August 19, 2026
Homeಹೆಬ್ರಿಕಸ್ತೂರಿರಂಗನ್‌ ವರದಿಯಿಂದ 50 ಸಾವಿರ ಮಂದಿಗೆ ಸಮಸ್ಯೆ : ಕೇಂದ್ರ ಸರ್ಕಾರದಿಂದ 7ನೇ ಭಾರಿ ಅಧಿಸೂಚನೆ 

ಕಸ್ತೂರಿರಂಗನ್‌ ವರದಿಯಿಂದ 50 ಸಾವಿರ ಮಂದಿಗೆ ಸಮಸ್ಯೆ : ಕೇಂದ್ರ ಸರ್ಕಾರದಿಂದ 7ನೇ ಭಾರಿ ಅಧಿಸೂಚನೆ 

ಜನರನ್ನು ಆತಂಕದಿಂದ ದೂರ ಮಾಡಿ. : ಉದಯ ಕುಮಾರ್‌ ಶೆಟ್ಟಿ.

ಹೆಬ್ರಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮತ್ತೇ ಚಾಲನೆ ನೀಡಿದೆ. 7ನೇ ಭಾರಿ ಅಧಿಸೂಚನೆ ನೀಡಿದೆ. ಇದರಿಂದಾಗಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ತೊಂದರೆಯಾಗಲಿದೆ. ಕೃಷಿ ಮತ್ತು ಜೀವನಕ್ಕೂ ಬಹುದೊಡ್ಡ ಸಮಸ್ಯೆಯಾಗಲಿದೆ. ರಾಜ್ಯ ಸರ್ಕಾರದ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಪದೇ ಪದೇ ಅಧಿಸೂಚನೆ ಹೊರಡಿಸುವುದು ಜನರಲ್ಲಿ ಆತಂಕ ಮೂಡಿಸಿದೆ. ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯನ್ನು ಕೈ ಬಿಟ್ಟು ಜನರನ್ನು ರಕ್ಷಿಸಬೇಕು ಎಂದು ಕಾರ್ಕಳದ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಅವರು ಸೋಮವಾರ ಹೆಬ್ರಿ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜನರಿಗೆ ಯಾವೂದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಪಕ್ಷದ ವತಿಯಿಂದ ಪ್ರತೀ ಗ್ರಾಮದಲ್ಲೂ ಜನಾಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ತಲುಪಿಸುವ ಕಾರ್ಯವನ್ನು ನಾವು ಕಾಂಗ್ರೆಸ್‌ ಪಕ್ಷದಿಂದ ಮಾಡುತ್ತೇವೆ, ಜನಜಾಗೃತಿ ಮೂಡಿಸುತ್ತೇವೆ, ಸೆಟಲೈಟ್‌ ಸರ್ವೆ ಮಾಡಿದ್ದರಿಂದ ಜನವಸತಿ ಪ್ರದೇಶಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬಂದಿದೆ. ಜನವಸತಿ ಪ್ರದೇಶವನ್ನು ಸಂಪೂರ್ಣವಾಗಿ ಕೈ ಬಿಟ್ಟು ಜನ ನೆಮ್ಮದಿಯ ಜೀವನ ನಡೆಸಲು ಬಿಡಬೇಕು ಎಂದು ಉದಯ ಕುಮಾರ್‌ ಶೆಟ್ಟಿ ಆಗ್ರಹಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇಳಂಜೆ, ನಾಡ್ಪಾಲು, ಕುಚ್ಚೂರು ಚಾರ ಹೆಬ್ರಿ ಕಬ್ಬಿನಾಲೆ ಅಂಡಾರು ಶಿರ್ಲಾಲು ಕೆರ್ವಾಸೆ ದುರ್ಗಾ ಮಾಳ ಈದು ನೂರಾಳ್‌ ಬೆಟ್ಟು ಸೇರಿದಂತೆ ಹಲವು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಲಿದ್ದು ಜನತೆಗೆ ಸಂಕಷ್ಟ ಎದುರಾಗುವ ಅಪಾಯವಿದೆ ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು. ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಜನಪರ ಕಾಳಜಿಯಿದ್ದರೆ ಯೋಜನೆ ಜಾರಿ ಮಾಡುತ್ತಿರಲಿಲ್ಲ. ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಬಾಧಿತ ಪ್ರದೇಶಗಳ ನಕ್ಷೆಯನ್ನು ಬಹಿರಂಗ ಪಡಿಸಬೇಕು ಎಂದು ಉದಯ ಕುಮಾರ್‌ ಶೆಟ್ಟಿ ಒತ್ತಾಯಿಸಿದರು. ಸಾರ್ವಜನಿಕ ಸಭೆಯನ್ನು ನಡೆಸಿ ಜನಾಭಿಪ್ರಾಯ ಪಡಯಬೇಕು, ಜನರಿಗೆ ರಕ್ಷಣೆ ನೀಡಬೇಕು, ಸೂಕ್ತ ಪರಿಹಾರ, ಮೂಲಸೌಕರ್ಯ ಮತ್ತು ಪರ್ಯಾಯ ಜೀವನೋಪಾಯಕ್ಕೆ ವಿಶೇಷ ದೊಡ್ಡ ಮಟ್ಟದ ಪ್ಯಾಕೇಜ್‌ ನೀಡಬೇಕು, ಯಾವೂದೇ ಪೂರ್ವತಯಾರಿ ನಡೆಸದೇ ಕೇಂದ್ರ ಸರ್ಕಾರ ಏಕಾಏಕಿ ಅಧಿಸೂಚನೆ ಹೊರಡಿಸಿರುವುದು ಜನರ ಬದುಕಿನಲ್ಲಿ ಚೆಲ್ಲಾಟ ಆಡಿದಂತೆ ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ನಾಡ್ಪಾಲು ಗ್ರಾಮಕ್ಕೆ 10 ಕೋಟಿ ಅನುದಾನ : ಉದಯ ಕುಮಾರ್‌ ಶೆಟ್ಟಿ.

ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿಗೆ ಅನುದಾನವೇ ನೀಡುತ್ತಿಲ್ಲ ಎಂದು ಕಾರ್ಕಳ ಶಾಸಕರು ಹೇಳುತ್ತ ಬಂದಿದ್ದಾರೆ. ಆದರೆ ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ೧೦ ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು. ಆದರೂ ಸರ್ಕಾರ ದಿವಾಳಿಯಾಗಿದೆ. ಅನುದಾನ ನೀಡುತ್ತಿಲ್ಲ ಎಂದು ಶಾಸಕರು ಹೇಳುವುದು ಹಾಸ್ಯಾಸ್ಪದ ಎಂದು ಎಂದು ಹೇಳಿದ ಉದಯ ಕುಮಾರ್‌ ಶೆಟ್ಟಿ, ನಾಡ್ಪಾಲು ಗ್ರಾಮ ಹಲವಾರು ವರ್ಷಗಳ ಸಮಸ್ಯೆಯನ್ನು ಬಿಜೆಪಿ ಸರ್ಕಾರ ಯಾಕೆ ಬಗೆಹರಿಸಿಲ್ಲ ಎಂದು ಪ್ರಶ್ನಿಸಿದರು. ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುನಿಯಾಲು ಗೋಫಿನಾಥ ಭಟ್‌, ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್‌ ಕೆ ಅಡ್ಯಂತಾಯ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅದ್ಯಕ್ಷ ಶಂಕರ ಶೇರಿಗಾರ್‌, ಹೆಬ್ರಿ ಕಾಂಗ್ರೆಸ್‌ ಅಧ್ಯಕ್ಷ ಸಂದೀಪ್‌ ಆಚಾರ್ಯ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಮಾ ಎನ್‌ ಅಡ್ಯಂತಾಯ, ಯುವ ಕಾಂಗ್ರೆಸ್‌ ಅಧ್ಯಕ್ಷ ಪರೀಕ್ಷಿತ್‌, ಮುಖಂಡ ಮೂರ್ಸಾಲು ಮೋಹನದಾಸ ನಾಯಕ್‌ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments