ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ, ಜನರ ಭಾವನೆ ತಿಳಿದು, ಪರಿಹಾರ ನೀಡಲು ಬಂದಿರುವೆ.: ಡಿಕೆ
ಕೇರಳ ಮಾದರಿಯಲ್ಲಿ ತಜ್ಞರ ಸಮಿತಿ, ಭೌತಿಕ ಸಮೀಕ್ಷೆಗೆ ಸಂಘಟನೆಗಳು, ಜನಪ್ರತಿನಿಧಿಗಳ ಒತ್ತಾಯ.
ಹೆಬ್ರಿ : ಕಸ್ತೂರಿ ರಂಗನ್ ವರದಿಗೆ ಸಂಬಂಧಿದಂತೆ ಈ ಭಾಗದ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಭೌತಿಕ ಸಮೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ಹೆಬ್ರಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಸಾಧಕ ಬಾಧಕಗಳ ಕುರಿತು ಶಿವಕುಮಾರ್ ಅವರು ಸ್ಥಳೀಯ ಜನರ ಜೊತೆ ಶುಕ್ರವಾರ ಸಂವಾದ ಸಭೆ ನಡೆಸಿ, ಮಾತನಾಡಿದರು.
“ನೀವು ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯದ ಬಗ್ಗೆ ತಿಳಿಸಿದ್ದೀರಿ. ನಿಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಗಮನ ಸೆಳೆದಿದ್ದೀರಿ. ನಾವು 27ರ ಒಳಗೆ ನಮ್ಮ ತೀರ್ಮಾನ ಕೇಂದ್ರಕ್ಕೆ ಕಳುಹಿಸಬೇಕು. ನಿಮ್ಮ ಅಭಿಪ್ರಾಯ ನಮ್ಮ ಅಭಿಪ್ರಾಯ ಆಗಬೇಕು ಎಂದು ನಾವು ಇಲ್ಲಿಗೆ ಬಂದಿದ್ದೇವೆ. ನೀವೆಲ್ಲರೂ ಕೇರಳ ಮಾದರಿ ಪ್ರಸ್ತಾಪಿಸಿ, ತಜ್ಞರ ಸಮಿತಿಗೆ ಶಿಫಾರಸ್ಸು ಮಾಡಿದ್ದೀರಿ. ನಿಮ್ಮ ಸಲಹೆಗಳನ್ನು ನಾವು ಸ್ವೀಕರಿಸಿದ್ದು, ಈ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ” ಎಂದರು.
“ನಾವು 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು, ರೈತರು, ಬರಗಾಲ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲಾಗುವುದು. ಸೋಮವಾರ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ವಿಚಾರ ಚರ್ಚೆ ಮಾಡಲಾಗುವುದು. ನಾನು ಶಿವಮೊಗ್ಗ, ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಅಲ್ಲಿನ ಜನರ ಭಾವನೆಯನ್ನು ಆಲಿಸುವೆ” ಎಂದು ಹೇಳಿದರು.
“ಅರಣ್ಯ ಹಕ್ಕು ಕಾಯ್ದೆಯಲ್ಲಿ ಕೆಲವರಿಗೆ 25 ವರ್ಷ ಹಾಗೂ ಉಳಿದವರಿಗೆ 75 ವರ್ಷ ಆಗಿರಬೇಕು ಎಂದು ನಿಯಮವಿದೆ. ಎಲ್ಲರಿಗೂ 25 ವರ್ಷಗಳ ಮಿತಿಯನ್ನು ನಿಗದಿ ಮಾಡಲು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ನೀಡಬೇಡಿ ಎಂದು ನಾನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವೆ. ಬಗರ್ ಹುಕ್ಕುಂ ಸಾಗುವಳಿ, ಉಳುವವನಿಗೆ ಭೂಮಿ ನೀಡಿರುವುದು ನಮ್ಮ ಸರ್ಕಾರ” ಎಂದು ತಿಳಿಸಿದರು.
“ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ನಿಮ್ಮ ಬದುಕಿನ ಮೇಲೆ ನಮಗೆ ಕಾಳಜಿ ಇದೆ. ಮೀನುಗಾರಿಕೆ ಸಂಬಂಧ ಸಚಿವ ಸಂಪುಟದಲ್ಲಿ ಪ್ರಮುಖ ತೀರ್ಮಾನ ಮಾಡಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ವಲಯ ನಿರ್ವಹಣೆ ಯೋಜನೆ, ಹೆಬ್ರಿಯಲ್ಲಿ ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ನಿಮ್ಮ ಮುಂದೆ ಸುಮ್ಮನೆ ಘೋಷಣೆ ಮಾಡಿ, ನಂತರ ಅದನ್ನು ಮರೆಯುವಂತೆ ಆಗಬಾರದು. ಸಿಕ್ಕ ಅವಕಾಶದಲ್ಲಿ ನಿಮಗೆ ಕೈಲಾದಷ್ಟು ಸೇವೆ ಮಾಡುವೆ. ಮುಂದಿನ ದಿನಗಳಲ್ಲಿ ಉಡುಪಿಗೂ ಬಂದು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡುವೆ” ಎಂದು ಭರವಸೆ ನೀಡಿದರು.
ತುಳುನಾಡಿನ ಜನ ದೇಶದ ಆಸ್ತಿ : ತುಳುನಾಡಿನ ಜನ ದೇಶದ ಆಸ್ತಿ. ಮುಂದಿನ ದಿನಗಳಲ್ಲಿ ಮತ್ತೆ ಬಂದು ನಿಮ್ಮ ಸಲಹೆ ಕೇಳುತ್ತೇನೆ. ಅಧಿವೇಶನದಲ್ಲಿ ನಿಮ್ಮ ಪ್ರತಿನಿಧಿಗಳ ಸಲಹೆ ಆಲಿಸುತ್ತೇನೆ. ಈ ಸರ್ಕಾರ ನಿಮ್ಮ ಜೊತೆ ಇದೆ” ಎಂದರು.
“ಈ ಭಾಗದ ಎಲ್ಲಾ ಪಕ್ಷಗಳ ಶಾಸಕರು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮಾಡಿದ್ದೇವೆ. ಈ ಸಂಪುಟ ಸಭೆಯಲ್ಲಿ 60 ತೀರ್ಮಾನ ಮಾಡಿದ್ದು, ಅದರಲ್ಲಿ 40 ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ” ಎಂದರು.
“ನಿಮ್ಮ ಮಾತೃಭಾಷೆ ತುಳುವನ್ನು ಎರಡು ಜಿಲ್ಲೆಗಳಲ್ಲಿ ೨ನೇ ಅಧಿಕೃತ ಭಾಷೆ ಎಂದು ತೀರ್ಮಾನ ಮಾಡಿದ್ದೇವೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ, ಅಭಿವೃದ್ಧಿಗೆ ನೀತಿ ರೂಪಿಸಿ ಅನೇಕ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಇದರಿಂದ ಹೂಡಿಕೆ ಆಕರ್ಷಸಿ, ಇಲ್ಲಿನ ಜನ ವಲಸೆ ಹೋಗುವುದನ್ನು ತಪ್ಪಿಸಬೇಕು.
“ಇದು ಐತಿಹಾಸಿಕ ಭೂಮಿ. ಈ ಭಾಗದ ಜನ ವಿದ್ಯಾವಂತರು, ಪ್ರಜ್ಞಾವಂತರು. ಈ ಭಾಗದ ಜನ ಧಾರ್ಮಿಕ ಜನ. ನಾವು ಈ ಭಾಗಕ್ಕೆ ತೀರ್ಥಯಾತ್ರೆಗೆ ಬರುತ್ತೇವೆ. ಈ ಭಾಗದಲ್ಲಿ ಆರಂಭವಾದ ಐದಾರು ಬ್ಯಾಂಕ್ ಗಳು ದೇಶಕ್ಕೆ ಮಾದರಿಯಾಗಿ ಬೆಳೆದವು. ಇಡೀ ದೇಶದಲ್ಲಿ ಅತಿ ಹೆಚ್ಚು ವೈದ್ಯರು ತಯಾರಾಗುವುದು, ಈ ತುಳುನಾಡಿನಲ್ಲಿ. ಸುಮಾರು 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ನಿಂಬೆಗಿಂತ ಶ್ರೇಷ್ಠ ಹುಳಿ, ದುಂಬಿಯ ಕರಿಬಣ್ಣ, ಶಿವನಿಂಗಿಂತ ದೊಡ್ಡ ದೇವರು, ಮನುಷ್ಯನಲ್ಲಿ ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದು ಸರ್ವಜ್ಞ ಹೇಳಿದ್ದಾರೆ. ನೀವು ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಮನಗಳು. ದೇವರು ವರ, ಶಾಪ ನೀಡುವುದಿಲ್ಲ ಕೇವಲ ಅವಕಾಶ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಹೀಗಾಗಿ ನನಗೆ ಸಿಕ್ಕ ಅವಕಾಶದಲ್ಲಿ ಜನರ ಸೇವೆ ಮಾಡಲು ಬಂದಿರುವೆ” ಎಂದು ತಿಳಿಸಿದರು.
ಮಾಧ್ಯಮಕ್ಕೆ ಪ್ರತಿಕ್ರಿಯೆ : ಜನರ ಭಾವನೆ ತಿಳಿದು, ಪರಿಹಾರ ನೀಡಲು ಬಂದಿರುವೆ. ಸಂವಾದ ಸಭೆಗೂ ಮುನ್ನ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. “ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಭಾವನೆ ತಿಳಿದು, ಅವರಿಂದಲೇ ವಿಚಾರಧಾರೆ ಆಲಿಸಿ ಪರಿಹಾರ ನೀಡಲು ಬಂದಿರುವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ತುಳುನಾಡಿನ ಜನರ ಬಯಕೆಯಂತೆ ಸಂಪುಟದಲ್ಲಿ ತೀರ್ಮಾನ, ನಿಮ್ಮ ನಿರೀಕ್ಷೆಯಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆಯೇ ಎಂದು ಕೇಳಿದಾಗ, “ತುಳುನಾಡಿನ ಜನತೆ ಬಯಕೆಯಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ” ಎಂದರು.
ಕೇರಳ ಮಾದರಿಯಲ್ಲಿ ತಜ್ಞರ ಸಮಿತಿ, ಭೌತಿಕ ಸಮೀಕ್ಷೆಗೆ ಒತ್ತಾಯ:
ಸಂವಾದ ಸಭೆಯಲ್ಲಿ ಈ ಭಾಗದ ವಿವಿಧ ಸಂಘನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಮಾತನಾಡಿದರು. ಹಿರಿಯ ವಕೀಲರಾದ ಟಿ ಬಿ ಶೆಟ್ಟಿ, ಮಲೆಕುಡಿಯ ಸಮುದಾಯದ ರಾಜ್ಯಾಧ್ಯಕ್ಷರಾದ ಶ್ರೀಧರ್ ಗೌಡ, ಉಡುಪಿ ರೈತ ಸಂಘದ ಉದಯ ಕುಮಾರ್ ವಂಡ್ಸೆ, ಹೆಬ್ರಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನವೀನ್ ಕೆ ಅಡ್ಯಂತಾಯ, ನಾಡ್ಪಾಲು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ದಿನೇಶ್ ಹೆಗ್ಡೆ, ಕೈಗಾರಿಕೋದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ಕುಮಾರ್ ಅವರು ಮಾತನಾಡಿದರು.
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಜನರಿಗೆ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಸರ್ಕಾರದ ಮುಂದೆ ವಿವಿಧ ಬೇಡಿಕೆಗಳು ಹೀಗಿವೆ:
ಕಸ್ತೂರಿ ರಂಗನ್ ವರದಿಯಲ್ಲಿ ಕೇರಳದ 13,000 ಚ.ಕಿ. ಮೀ. ಪ್ರದೇಶ ಒಳಗೊಂಡಿದ್ದು, ಕರ್ನಾಟಕದಲ್ಲಿ ಸುಮಾರು 20,000 ಚ. ಕಿ. ಮೀ. ಕೇರಳ ರಾಜ್ಯದಲ್ಲಿ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಲಾಗಿದೆ. ಇದರಿಂದ ನಾಡು ಹಾಗೂ ಕಾಡನ್ನು ಬೇರ್ಪಡಿಸಿ ಗಡಿ ರಚಿಸಲಾಗಿದೆ. ಆ ಮೂಲಕ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯನ್ನು 9,000 ಚ.ಕಿ.ಮೀಗೆ ಇಳಿಸಲಾಗಿದೆ. ಆಮೂಲಕ 3200 ಚ.ಕಿ.ಮೀ ಪ್ರದೇಶವನ್ನು ವರದಿಯಿಂದ ಮುಕ್ತಗೊಳಿಸಲಾಗಿದೆ. ನಮ್ಮ ರಾಜ್ಯದಲ್ಲಿ ಇದೇ ರೀತಿ ಮಾಡಿದರೆ 5 ಸಾವಿರ ಚ.ಕಿ.ಮೀ ಪ್ರದೇಶ ಮುಕ್ತವಾಗಲಿದೆ.
ಶತಮಾನಗಳಿಂದ ಲಕ್ಷಾಂತರ ಜನ ಬದುಕು ಕಟ್ಟಿಕೊಂಡಿದ್ದಾರೆ. ಕಸ್ತೂರಿ ರಂಗನ್ ಸಮಿತಿ ಉಪಗ್ರಹಗಳ ಮೂಲಕ ಜಿಪಿಎಸ್ ಸಮೀಕ್ಷೆ ಮಾಡಿದ್ದು, ಭೌತಿಕ ಸಮೀಕ್ಷೆ ಮಾಡಿಲ್ಲ. ಹೀಗಾಗಿ ನಮ್ಮ ರಾಜ್ಯ ಸರ್ಕಾರ ಇದನ್ನು ಮಾಡಿದರೆ ಬಹಳ ಸಂತೋಷ.
ಕಸ್ತೂರಿ ರಂಗನ್ ವರದಿಯಲ್ಲಿ ಒಂದು ಹಳ್ಳಿಯಲ್ಲಿ 100ಕ್ಕಿಂತ ಕಡಿಮೆ ಜನರು ಇದ್ದರೆ ಮಾತ್ರ ಇದನ್ನು ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕು ಎಂದು ಹೇಳಲಾಗಿದೆ. ಆದರೆ ಈಗ ಜಿಪಿಎಸ್ ಸಮೀಕ್ಷೆಯಿಂದ 100ಕ್ಕೂ ಹೆಚ್ಚು ಜನ ಇರುವ ಪ್ರದೇಶವನ್ನು ಸೇರಿಸಿಕೊಂಡಿದ್ದಾರೆ.
ಇನ್ನು 20% ಸಂರಕ್ಷಿತ ಅರಣ್ಯ ಪ್ರದೇಶ ಇದ್ದರೆ ಮಾತ್ರ ಪರಿಗಣಿಸಬೇಕು ಎಂದು ವರದಿಯಲ್ಲಿ ಹೇಳಿದ್ದು, ನಮ್ಮ ಭಾಗದಲ್ಲಿ 5% ಸಂರಕ್ಷಿತ ಅರಣ್ಯವಿರುವ ಪ್ರದೇಶವನ್ನು ವರದಿಯ ವ್ಯಾಪ್ತಿಗೆ ಸೇರಿಸಲಾಗಿದೆ.
ಕಸ್ತೂರಿ ರಂಗನ್ ವರದಿಯಿಂದ ನಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ಆತಂಕ ಜನರಲ್ಲಿ ಮೂಡಿದೆ. ವಾಸ್ತವಾಂಶ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ನಾವು ಅರಣ್ಯವಾಸಿಗಳು, ಅರಣ್ಯ ಸಂರಕ್ಷಣೆ ಆಗುವುದು ನಮ್ಮಿಂದಲೇ. ಹೀಗಾಗಿ ಅರಣ್ಯ ಸಂರಕ್ಷಣೆ ಕಾನೂನು ನಮಗೆ ತೊಂದರೆ ಆಗಬಾರದು. ಈ ಎಲ್ಲಾ ಕಾರಣಗಳಿಂದಾಗಿ ತಜ್ಞರ ಸಮಿತಿ ರಚಿಸಿ. ಭೌತಿಕ ಸಮೀಕ್ಷೆ ಮಾಡಿಸಬೇಕು. ನಂತರ ಆ ವರದಿಯನ್ನು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಹಾಗೂ ಹಸಿರು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ.
ಘೋಷಣೆ ಮಾಡುವುದು ಮುಖ್ಯವಲ್ಲ; ಸಹಿ ಹಾಕಿದ ಬಳಿಕ ಅದು ಕಾರ್ಯರೂಪಕ್ಕೆ ಬರಬೇಕು. : ಡಿಕೆ. ಶಿವಕುಮಾರ್
‘ಇದು ಕೇವಲ ನನ್ನೊಬ್ಬನ ಅಭಿಪ್ರಾಯವಾಗಬಾರದು. ಜನರ ಅಭಿಪ್ರಾಯವಾಗಬೇಕು. ಸುಮ್ಮನೆ ಘೋಷಣೆ ಮಾಡುವುದು ಮುಖ್ಯವಲ್ಲ; ಸಹಿ ಹಾಕಿದ ಬಳಿಕ ಅದು ಕಾರ್ಯರೂಪಕ್ಕೆ ಬರಬೇಕು. ನಿಮ್ಮ ಪ್ರತಿನಿಧಿಗಳ ಮಾತುಗಳನ್ನು ವಿಧಾನಸಭೆಯಲ್ಲಿ ಕೇಳುತ್ತೇನೆ. ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕಸ್ತೂರಿರಂಗನ್ ವರದಿ ಕುರಿತು ವಿಧಾನಸಭೆಯಲ್ಲಿ ಪ್ರತ್ಯೇಕ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರ ಅಭಿಪ್ರಾಯ ಹಾಗೂ ಭಾವನೆಗಳನ್ನು ಪಡೆಯುವುದಾಗಿ ಹೇಳಿದರು.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಜನರಿಗೆ ತೊಂದರೆ ನೀಡದಂತೆ ಸೂಚಿಸಿರುವುದಾಗಿ ತಿಳಿಸಿದ ಅವರು, ಬಗರ್‌ಹುಕುಂ ಸಾಗುವಳಿ ಹಾಗೂ ಭೂ ಸುಧಾರಣಾ ಕಾಯ್ದೆಯಂತಹ ಕ್ರಮಗಳನ್ನು ಜಾರಿಗೆ ತಂದಿರುವುದು ತಮ್ಮ ಸರ್ಕಾರ ಎಂದು ಹೇಳಿದರು.
‘ಭಾವನೆಗಳ ಮೇಲೆ ನಮ್ಮ ರಾಜಕಾರಣ ಇಲ್ಲ; ಜನರ ಬದುಕಿನ ಮೇಲೆ ನಮ್ಮ ರಾಜಕಾರಣ. ನಿಮ್ಮೆಲ್ಲರ ಬದುಕು ನಮಗೆ ಮುಖ್ಯ. ಅಕ್ರಮ–ಸಕ್ರಮ ಹಾಗೂ ಪರಿಸರ ಸೂಕ್ಷ್ಮ ವಲಯದ ವಿಚಾರ ನನಗೆ ಅರಿವಿದೆ. ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿಯೂ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
ಕರಾವಳಿಯ ಅರಣ್ಯ, ಸಮುದ್ರ, ಪರಿಸರ, ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ಇಲ್ಲಿನ ಜನರ ಪರಿಶ್ರಮವನ್ನು ಕೊಂಡಾಡಿದ ಅವರು, ‘ತುಳುನಾಡು ದೇಶದ ದೊಡ್ಡ ಆಸ್ತಿ’ ಎಂದರು.
‘ಜನವಸತಿ ಪ್ರದೇಶ ಕೈಬಿಡಬೇಕು’: ಮಲೆಕುಡಿಯ ಮುಖಂಡ ಶ್ರೀಧರ ಗೌಡ ಮಾತನಾಡಿ, ಜನನಿಬಿಡ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
‘ಕಾಡು, ನದಿ ಹಾಗೂ ಪರಿಸರವನ್ನು ಉಳಿಸಿಕೊಂಡು ಬಂದವರು ಮಲೆಕುಡಿಯರು. ನಮ್ಮ ಹಿತ ಕಾಪಾಡಬೇಕು. ಉಪಗ್ರಹ ಸರ್ವೇಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಭೌತಿಕ ಸರ್ವೇ ನಡೆಸಬೇಕು. ರಸ್ತೆ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳಿಗೂ ಸಮಸ್ಯೆಯಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಗೆ ಯಾವುದೇ ಚ್ಯುತಿ ಬರಬಾರದು’ ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ : ಸಹಕಾರಿ ಸಂಘಗಳಿಗೆ ಕಂಟಕ : ಕಸ್ತೂರಿರಂಗನ್ ವರದಿಯ ವ್ಯಾಪ್ತಿಯ ಬಹುತೇಕ ೪೦% ಮಂದಿ ವ್ಯವಸಾಯ ಸೇವಾ ಸಂಘಗಳ ಸದಸ್ಯರು, ಅವರಿಗೆ ಸಹಕಾರಿ ಸಂಘಗಳ ಮೂಲಕ ಸಾಲಸೌಲಭ್ಯ ನೀಡಲು ಆಗುತ್ತಿಲ್ಲ. ಕೊಟ್ಟ ಸಾಲದ ವಸೂಲಾತಿಯು ಕಷ್ಟ. ಇದರಿಂದ ಸಹಕಾರ ಸಂಘಗಳು ಮತ್ತು ಜನತೆಯ ಜೀವನಕ್ಕೆ ಕಷ್ಟವಾಗುತ್ತದೆ. ಭೌತಿಕ ಸಮೀಕ್ಷೆಯನ್ನು ನಡೆಸಿ ಜನರನ್ನು ಕಸ್ತೂರಿರಂಗನ್ ವರದಿಯ ಆತಂಕದಿಂದ ದೂರ ಮಾಡಿ ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಕೆ ಅಡ್ಯಂತಾಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ಮನವಿ ಆಲಿಸಿದ ಮುಖ್ಯಮಂತ್ರಿ ನವೀನ್ ಅಡ್ಯಂತಾಯ ಅವರನ್ನು ಸನಿಹಕ್ಕೆ ಕರೆದು ವಿಚಾರ ತಿಳಿದು ಮನವಿಯನ್ನು ಪಡೆದರು.
‘ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಿ’: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಕಸ್ತೂರಿರಂಗನ್ ವರದಿ ಕುರಿತು ಕಳೆದ ಹತ್ತು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಈಗಾಗಲೇ ವಿವಿಧ ಅರಣ್ಯ ಕಾನೂನುಗಳಿಂದ ಸಮಸ್ಯೆ ಎದುರಿಸುತ್ತಿದ್ದು, ಕಸ್ತೂರಿರಂಗನ್ ವರದಿ ಮತ್ತಷ್ಟು ಆತಂಕ ಮೂಡಿಸಿದೆ ಎಂದರು.
‘ಅರಣ್ಯ ಪ್ರದೇಶವನ್ನು ಕಸ್ತೂರಿರಂಗನ್ ವ್ಯಾಪ್ತಿಗೆ ತರಬಹುದು. ಆದರೆ ಜನವಸತಿ ಪ್ರದೇಶಗಳನ್ನು ಕೈಬಿಡಬೇಕು. ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಿ ಭೌತಿಕ ಸರ್ವೇ ನಡೆಸಬೇಕು. ಜೋನಲ್ ಮ್ಯಾನೇಜ್‌ಮೆಂಟ್ ಪ್ಲಾನ್ ರೂಪಿಸಬೇಕು. ರೈಲ್ವೆ, ಕುಡಿಯುವ ನೀರು ಸೇರಿದಂತೆ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಪುನರ್ವಸತಿಗಾಗಿ ಸ್ಥಳಾಂತರಗೊಂಡವರಿಗೆ ಕಳೆದ ನಾಲ್ಕು ವರ್ಷಗಳಿಂದ ಆರ್ಥಿಕ ನೆರವು ಸಿಕ್ಕಿಲ್ಲ. ಇದು ಲಕ್ಷಾಂತರ ಜನರ ಸಮಸ್ಯೆಯಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು. ಹೆಬ್ರಿಗೆ ತಾಲೂಕು ಆಸ್ಪತ್ರೆ ಅಗತ್ಯವಿದ್ದು, ಅದನ್ನು ಮೇಲ್ದರ್ಜೆಗೇರಿಸುವಂತೆಯೂ ಮನವಿ ಮಾಡಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟಿಹೊಳಿ, ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ನಾರಾಯಣಗುರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ವಾಗತಿಸಿದರು.




