ನವದೆಹಲಿ : ಜೆ ಎನ್ ಯು ಕನ್ನಡ ಪೀಠದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ವ್ಯಾಪ್ತಿಯ ಕನ್ನಡ ಸಂಸ್ಕೃತಿ ಅಧ್ಯಯನ ಎಂಬ ವಿಷಯದ ಮೇಲೆ ಆಳವಾದ ಸಂಶೋಧನೆ ಕೈಗೊಂಡು ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಚಂದ್ರಶೇಖರ್ ಎನ್ ಪಿ ಅವರು ಮಹಾಪ್ರಬಂಧವನ್ನು ಸಾದರ ಪಡಿಸಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
ಚಂದ್ರಶೇಖರ ಎನ್. ಪಿ. ಅವರು ಕರ್ನಾಟಕದ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ನಾಗರಸನಕೋಟೆ ಎಂಬ ಹಳ್ಳಿಯ ಕೃಷಿಕ ದಂಪತಿಗಳಾದ ಪುಟ್ಟಮಲ್ಲಪ್ಪ ಮತ್ತು ಶಿವಲಿಂಗಮ್ಮ ಅವರ ಮಗ. ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಮುಗಿಸಿಕೊಂಡು ಕನಕಪುರದ ರೂರಲ್ ಕಾಲೇಜಿನಿಂದ ಪದವಿ ಪಡೆದ ಅವರು ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾವಿದ್ಯಾಲಯದಿಂದ ಎಂ.ಇಡಿ. ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ.
ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ, (ಬಿ ಎಸ್ ವಿ ಪಿ )
ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಕನಕಪುರದ ರೂರಲ್ ಕಾಲೇಜು ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಚಂದ್ರಶೇಖರ ಅವರು 2004-2006ರವರೆಗೆ ಮಧ್ಯಪ್ರದೇಶದಲ್ಲಿ ಜವಾಹರ್ ನವೋದಯ ವಿದ್ಯಾಲಯ (ಜೆ ಎನ್ ವಿ ) ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ
ಪ್ರಸ್ತುತ ಚಂದ್ರಶೇಖರ್ ಅವರು ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಲ್ಪಡುವ ಭಾರತದ ಸಂಸತ್ತಿನ ಲೋಕಸಭೆಯಲ್ಲಿ ಜಂಟಿ ನಿರ್ದೇಶಕರಾಗಿದ್ದು, ಕಳೆದ ಸುಮಾರು ಎರಡು ದಶಕಗಳಿಂದ ದೆಹಲಿಯಲ್ಲಿ ವಾಸವಾಗಿದ್ದಾರೆ.
ಚಂದ್ರಶೇಖರ್ ತಮ್ಮ ಆಯ್ಕೆಯ ಅಧ್ಯಯನ ವಿಭಾಗದಲ್ಲಿ ಉತ್ತಮ ನೈಪುಣ್ಯತೆ ಹೊಂದಿರುವ ಇವರು ಜೆ ಎನ್ ಯು ಕನ್ನಡ ಪೀಠದ ನ್ದನಿವೃತ್ತ ಪ್ರಾಧ್ಯಾಪಕರಾದ ಪ್ರೊ. ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ವ್ಯಾಪ್ತಿಯ ಕನ್ನಡ ಸಂಸ್ಕೃತಿ ಅಧ್ಯಯನ ಎಂಬ ವಿಷಯದ ಮೇಲೆ ಆಳವಾದ ಸಂಶೋಧನೆ ಕೈಗೊಂಡು ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಮಹಾಪ್ರಬಂಧವನ್ನು ಸಾದರ ಪಡಿಸಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
ದೆಹಲಿಯ ವಿವಿಧ ಸಂಘ ಸಂಸ್ಥೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಚಂದ್ರಶೇಖರ ಅವರು ಪ್ರಸ್ತುತ ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಅಧ್ಯಕ್ಷರಾಗಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸುತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡದ ಹೊಸ ತಲೆಮಾರಿನ ಮಕ್ಕಳು ಹಾಗೂ ಕನ್ನಡೇತರಿಗೂ ಕನ್ನಡವನ್ನು ಕಲಿಯಲು ಪ್ರೋತ್ಸಾಹಿಸುವ ಮೂಲಕ ಕನ್ನಡತಾಯಿಯ ಸೇವೆಗೈಯುತ್ತಾ ಕನ್ನಡ ಕಟ್ಟುವ ಕೈಂಕರ್ಯ ದಲ್ಲಿ ಸಕ್ರಿಯ ರಾಗಿ ತೊಡಗಿಸಿ ಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಗೌರವ ಕಾರ್ಯದರ್ಶಿ ಹಾಗು ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ 2019-22 ರ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೆಹಲಿ ಕರ್ನಾಟಕ ಸಂಘದ ಮುಖ ಪತ್ರಿಕೆ ‘ಅಭಿಮತ’ ಹಾಗೂ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮುಖಪತ್ರಿಕೆಯಾದ ‘ ಅಭಿವ್ಯಕ್ತ’ ಮಾಸ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.
ಚಂದ್ರಶೇಖರ್ ಅವರು ಐಎಎಸ್ ಮತ್ತು ಕೆಎಎಸ್ ಆಕಾಂಕ್ಷಿಗಳಿಗೆ ಪರೀಕ್ಷೆಗಳಿಗೆ ತರಬೇತಿ ನೀಡುವುದು ಮತ್ತು ಅಣಕು ಸಂದರ್ಶನ (MOCK INTERVIEW) ಮೂಲಕ ವ್ಯಕ್ತಿತ್ವ ಪರೀಕ್ಷೆಗೆ ತಯಾರಾಗಲು ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಾ ಬಂದಿರುತ್ತಾರೆ.
ಅವರು ಸರ್ಕಾರದ ಉನ್ನತ ಸಂಸ್ಥೆಗಳಲ್ಲಿ ಭಾಷಾತಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಚಂದ್ರಶೇಖರ್ ಅವರು ತಮ್ಮ ಕಾಲೇಜು ದಿನಗಳಿಂದಲೇ ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದು, ಕನ್ನಡ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಬಂಧಗಳನ್ನು ಸಿದ್ದಪಡಿಸಿ ಮಂಡಿಸಿದ್ದಾರೆ. ಮುಖ್ಯವಾಗಿ-ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ, ಜೆ.ಎಸ್.ಎಸ್. ಕಾಲೇಜು ನೋಯ್ಡಾ, ‘ದೆಹಲಿ ಕರ್ನಾಟಕ ಸಂಘ ಮೊದಲಾದ ಕಡೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಕನ್ನಡದಿಂದ ಇಂಗ್ಲಿಷ್ ಗೆ ಹಾಗೆಯೆ ಇಂಗ್ಲಿಷ್ನಿಂದ ಕನ್ನಡಕ್ಕೆ ಮತ್ತು ಹಿಂದಿಯಿಂದ ಕನ್ನಡಕ್ಕೆ ಅನೇಕ ಕಥೆಗಳು ಮತ್ತು ಪುಸ್ತಕಗಳನ್ನು ಅನುವಾದಿಸಿದ್ದಾರೆ. ಅವುಗಳೆಂದರೆ- ‘ದೇಗುಲಶ್ರೀ (ಕನ್ನಡ ದಿಂದ ಇಂಗ್ಲಿಷ್ )’, ‘ಬಕಾಸುರ ದಿ ಕಿಂಗ್ ಆಫ್ ಕರಪ್ಶನ್ (ಇಂಗ್ಲಿಷ್ ನಿಂದ ಕನ್ನಡ ), ‘ಮಂತ್ರ ಮಹರ್ಷಿ ಗುರೂಜಿ'(ಕನ್ನಡ ದಿಂದ ಇಂಗ್ಲಿಷ್) ಮೊದಲಾದವು ಅವರ ಅನುವಾದಗಳು. ಇದಲ್ಲದೆ ಅವರು ಹಲವಾರು ಕಥೆಗಳನ್ನು ಅನುವಾದಿಸಿದ್ದಾರೆ ‘ಅಪ್ಪನಿಗೊಂದು ಪತ್ರ (ಹಿಂದಿ ಯಿಂದ- ಕನ್ನಡ) ‘ಅನುಪಮಾ ಸೌಂದರ್ಯ (ಇಂಗ್ಲಿಷ್ನಿಂದ- ಕನ್ನಡ) ಕೆಲವು ಪ್ರಮುಖ ಕಥೆಗಳು.



