Monday, October 19, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ ಅಮೃತ ಭಾರತಿಯಲ್ಲಿ ಸಾಹಿತ್ಯ ಸಂಘ ಉದ್ಘಾಟನೆ ಮತ್ತು ಕವಿಗೋಷ್ಠಿ.

ಹೆಬ್ರಿ ಅಮೃತ ಭಾರತಿಯಲ್ಲಿ ಸಾಹಿತ್ಯ ಸಂಘ ಉದ್ಘಾಟನೆ ಮತ್ತು ಕವಿಗೋಷ್ಠಿ.

ಸಾಹಿತ್ಯ ರಚನೆಯಲ್ಲಿ ಕೃತಿ ಚೌರ್ಯ ಸಲ್ಲದು – ನಿರಂತರ ಅಧ್ಯಯನ ಅಗತ್ಯ : ಪಾಂಗಳ ಬಾಬು ಕೊರಗ

ಹೆಬ್ರಿ : ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವವರು ಕೃತಿ ಚೌರ್ಯಕ್ಕೆ ಮುಂದಾಗಬಾರದು. ಸ್ವಂತ ಚಿಂತನೆ, ಅಧ್ಯಯನ ಮತ್ತು ಅನುಭವಗಳ ಆಧಾರದಲ್ಲಿ ಸಾಹಿತ್ಯವನ್ನು ರಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಸಂಶೋಧಕ ಪಾಂಗಳ ಬಾಬು ಕೊರಗ ಹೇಳಿದರು.

ಅವರು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಾಹಿತ್ಯ ಸೃಷ್ಟಿಗೆ ನಿರಂತರ ಅಧ್ಯಯನಶೀಲತೆ ಅತ್ಯಗತ್ಯವಾಗಿದ್ದು, ಓದು ಮತ್ತು ಬರವಣಿಗೆಯ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ಅಜಲು ಪದ್ಧತಿಯ ಹಿನ್ನೆಲೆ ಹಾಗೂ ಅದರ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಕುರಿತು ಅವರು ವಿವರಣೆ ನೀಡಿದರು. ಸಮಾಜದ ವಿವಿಧ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಸಾಹಿತ್ಯ ಮತ್ತು ಸಂಶೋಧನೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಿರಿತನ ಎಂಬುದು ಕೇವಲ ವಯಸ್ಸಿನಿಂದ ಬರುವುದಲ್ಲ; ಅದು ಓದು, ಜ್ಞಾನ ಮತ್ತು ಬರವಣಿಗೆಯ ಮೂಲಕ ರೂಪುಗೊಳ್ಳುತ್ತದೆ ಎಂದು ಬಾಬು ಕೊರಗ ಹೇಳಿದರು.

ಸಾಹಿತ್ಯ ರಚನೆಯ ಮೌಲ್ಯಗಳು, ಅಧ್ಯಯನಶೀಲತೆಯ ಮಹತ್ವ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಪಾಲಿಸಬೇಕಾದ ನೈತಿಕ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮೃತ ಭಾರತಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ ಮಾತನಾಡಿ, ಖ್ಯಾತ ಸಾಹಿತಿ ಭೈರಪ್ಪನವರ ಕೃತಿಗಳ ಶ್ರೇಷ್ಠತೆ ಹಾಗೂ ಅವುಗಳಲ್ಲಿರುವ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಸಾಹಿತ್ಯ ಕೃತಿಗಳು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಬದುಕಿನ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಎಂದು ತಿಳಿಸಿದರು. ಸಾಹಿತಿಗಳು ದೈಹಿಕವಾಗಿ ಅಗಲಿದರೂ ಅವರು ರಚಿಸಿದ ಕೃತಿಗಳು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತವೆ. ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಸಿಕೊಳ್ಳದಿದ್ದರೂ ಓದುವ ಹವ್ಯಾಸವನ್ನು ಎಂದಿಗೂ ಕೈಬಿಡಬಾರದು ಎಂದು ಹೆಬ್ರಿ ಸತೀಶ ಪೈ ಹೇಳಿದರು.


ಜೀವಶಾಸ್ತ್ರ ಉಪನ್ಯಾಸಕರಾದ ಶಯನ್ ಬನ್ನೂರು ಎಸ್. ವೈ. ಅವರು ರಚಿಸಿದ ‘ಅರಿವು’ ಪುಸ್ತಕದ ಪರಿಚಯವನ್ನು ಕನ್ನಡ ಉಪನ್ಯಾಸಕರಾದ ವೀಣೇಶ್ ಅಮೀನ್ ಮಾಡಿದರು. ಇದೇ ಸಂದರ್ಭದಲ್ಲಿ ‘ಅರಿವು’ ಕೃತಿಯ ಲೇಖಕ ಶಯನ್ ಬನ್ನೂರು ಅವರನ್ನು ಗೌರವಿಸಲಾಯಿತು.
ಕವಿಗೋಷ್ಠಿಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳಾದ ತಸ್ವಿ, ಹರ್ಷಿತಾ, ಸಿದ್ದಮ್ಮ, ಮಾನ್ಯ, ಯೋಗೀಶ್, ಸ್ತುತಿ ಹಾಗೂ ಅಂಕಿತ್ ತಮ್ಮ ಕವನಗಳನ್ನು ವಾಚಿಸಿ ಸಾಹಿತ್ಯಾಭಿರುಚಿಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಕವನ ವಾಚನವು ಯುವ ಮನಸ್ಸುಗಳಲ್ಲಿ ಮೂಡಿರುವ ಸೃಜನಶೀಲ ಚಿಂತನೆಗಳಿಗೆ ವೇದಿಕೆಯಾಯಿತು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆ, ಕಲ್ಪನಾಶಕ್ತಿ ಮತ್ತು ಅಭಿವ್ಯಕ್ತಿ ಕೌಶಲಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಹೇಳಿದರು.


ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪೂರ್ವಿ, ಹಂಸಿನಿ ಹಾಗೂ ರಕ್ಷಿತಾ ನಾಡಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿದರು. ಪ್ರತೀಕ್ಷಾ ನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!