ಹೆಬ್ರಿ : ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 2026-27ನೇ ಶೈಕ್ಷಣಿಕ ಸಾಲಿನ “ಉಚಿತ ಭರತನಾಟ್ಯ ತರಗತಿಗಳ” ಉದ್ಘಾಟನೆಯು ಸೋಮವಾರ ನಡೆಯಿತು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ವಿಶೇಷ ಉಚಿತ ನೃತ್ಯ ತರಗತಿ ಕಾರ್ಯಕ್ರಮವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೆಬ್ರಿಯ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ್ ಭಟ್ ಹೇಳಿದರು.
“ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಅದ್ಭುತ ಪ್ರಗತಿ ಸಾಧಿಸುತ್ತಿವೆ. ಸರ್ಕಾರಿ ಶಾಲೆಗಳು ಇಂದು ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿರುವುದು ಹೆಮ್ಮೆಯ ವಿಚಾರ” ಎಂದರು. ಕಲೆ ಮತ್ತು ಸಂಸ್ಕಾರ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತದೆ ಎಂದು ತಿಳಿಸುತ್ತಾ, ಹಮ್ಮಿಕೊಂಡಿರುವ ಈ ಭರತನಾಟ್ಯ ತರಗತಿಗೆ ಸಂಪೂರ್ಣ ಯಶಸ್ಸು ಸಿಗಲಿ ಎಂದು ಹಾರೈಸಿದರು.
ತರಗತಿಗಳ ನೃತ್ಯ ನಿರ್ದೇಶಕರಾದ ಪ್ರಸಿದ್ಧ ಭರತನಾಟ್ಯ ಗುರುಗಳಾದ ವಿದ್ವಾನ್ ಉದಯ ಕುಮಾರ್ ಶೆಟ್ಟಿ ಮಾತನಾಡಿ, “ಭಾರತೀಯ ಸಾಂಪ್ರದಾಯಿಕ ನೃತ್ಯ ಕಲೆಗಳಿಗೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಮಹತ್ವ ಹಾಗೂ ಗೌರವವಿದೆ. ಇಂತಹ ಶ್ರೇಷ್ಠ ಕಲೆಗಳು ಮೂಲತಃ ಹಳ್ಳಿಯಿಂದಲೇ ಬೆಳೆಯುತ್ತವೆ ಮತ್ತು ಗ್ರಾಮೀಣ ಪ್ರತಿಭೆಗಳ ಮೂಲಕ ಜೀವಂತವಾಗಿ ಉಳಿಯುತ್ತವೆ” ಎಂದು ನೃತ್ಯ ಕಲೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನೃತ್ಯ ಶಿಕ್ಷಕಿ ವಿದುಷಿ ಮಮತಾ ಮಯೂರಿ ಉಪಸ್ಥಿತರಿದ್ದರು.


