Sunday, August 9, 2026
Homeಹೆಬ್ರಿ ಗ್ರಾಮ ಪಂಚಾಯತ್‌ಹೆಬ್ರಿ : 'ಆನಾಪಾನಸತಿ ಧ್ಯಾನ’ ಶಿಬಿರ : ಸಕ್ರೀಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳು

ಹೆಬ್ರಿ : ‘ಆನಾಪಾನಸತಿ ಧ್ಯಾನ’ ಶಿಬಿರ : ಸಕ್ರೀಯವಾಗಿ ಭಾಗವಹಿಸಿದ ವಿದ್ಯಾರ್ಥಿಗಳು

ಹೆಬ್ರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಶಿವಪುರದ ಧಮ್ಮ ನದಿ ವಿಪಶ್ಯನಾ ಧ್ಯಾನ ಕೇಂದ್ರದ ಜಂಟಿ ಆಶ್ರಯದಲ್ಲಿ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸೋಮವಾರ ಕಾಲೇಜಿನ ಭವ್ಯ ಸಭಾಂಗಣದಲ್ಲಿ ಆಯೋಜಿಸಿದ ವಿಶೇಷ ‘ಆನಾಪಾನಸತಿ ಧ್ಯಾನ’ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಇಂದಿನ ತೀವ್ರ ಪೈಪೋಟಿಯ ಯುಗ ಮತ್ತು ಡಿಜಿಟಲ್ ತಂತ್ರಜ್ಞಾನದ ಆಕರ್ಷಣೆಗಳ ಮಧ್ಯೆ ವಿದ್ಯಾರ್ಥಿಗಳ ಮಾನಸಿಕ ಏಕಾಗ್ರತೆ, ಭಾವನಾತ್ಮಕ ಸ್ಥಿರತೆ, ನೆನಪಿನ ಶಕ್ತಿ ವೃದ್ಧಿ ಮತ್ತು ಒತ್ತಡ ರಹಿತ ಜೀವನಕ್ಕೆ ಧ್ಯಾನ ಅತ್ಯಗತ್ಯ ಎಂಬುದನ್ನು ಮನಗಂಡು ನಡೆಸಿದ ವಿಶೇಷ ಶಿಬಿರದಲ್ಲಿ ಕಾರ್ಯಕ್ರಮವನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಶಿಸ್ತು, ಉತ್ಸಾಹ ಮತ್ತು ಏಕಾಗ್ರತೆಯಿಂದ ಪಾಲ್ಗೊಂಡು ಧ್ಯಾನದ ಸದುಪಯೋಗವನ್ನು ಪಡೆದುಕೊಂಡರು.

ಆಧುನಿಕ ಜೀವನಶೈಲಿಯಲ್ಲಿ ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣವಷ್ಟೇ ಸಾಲದು, ಅದಕ್ಕೆ ಪೂರಕವಾಗಿ ಮಾನಸಿಕ ಸ್ಥಿರತೆಯೂ ಅತ್ಯಗತ್ಯವಾಗಿದೆ. ಆನಾಪಾನಸತಿ ಧ್ಯಾನವು ಚಂಚಲವಾದ ಮನಸ್ಸನ್ನು ನಿಯಂತ್ರಣಕ್ಕೆ ತಂದು, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಉಪ ಪ್ರಾಂಶುಪಾಲ ದಿವಾಕರ ಮರಕಾಲ ತಿಳಿಸಿದರು.

ಧಮ್ಮ ನದಿ ವಿಪಶ್ಯನಾ ಧ್ಯಾನ ಕೇಂದ್ರದ ಅನುಭವಿ ಮಾರ್ಗದರ್ಶಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ಸರಳ ಹಾಗೂ ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಉಸಿರಾಟದ ಮೇಲಿನ ಗಮನ ಹರಿಸುವ ‘ಆನಾಪಾನಸತಿ’ ತಂತ್ರವನ್ನು ಅಭ್ಯಾಸ ಮಾಡಿಸಿದರು.

ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್, ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments