ಹೆಬ್ರಿಯಲ್ಲಿ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಸುದ್ದಿಗೋಷ್ಠಿ: ಹೆಬ್ರಿಯಿಂದ ಆಗುಂಬೆ ಘಾಟಿ ಸೇರಿ ಶೀಘ್ರವಾಗಿ ಹೆದ್ದಾರಿ ಕಾಮಗಾರಿ ಆರಂಭಿಸಲು ಒತ್ತಾಯ.
ಹೆಬ್ರಿ : ಮಲ್ಪೆ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಮಂಜೂರುಗೊಂಡು 13 ವರ್ಷಗಳ ಕಳೆದರೂ ಇನ್ನೂ ಹಲವೆಡೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೆಬ್ರಿಯ ಕೆಳಪೇಟೆಯಿಂದ ಆಗುಂಬೆ ಘಾಟಿಯ ಕೆಲಸ ಇನ್ನೂ ಆರಂಭವೇ ಆಗಿಲ್ಲ, ಯಾವೂದೇ ಸಮಸ್ಯೆಗಳಿಲ್ಲದಿದ್ದರೂ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸಲು ವಿಳಂಬ ಯಾಕೆ, ಹೆಬ್ರಿಯಿಂದ ಆಗುಂಬೆ ಘಾಟಿ ಸೇರಿ ಶೀಘ್ರವಾಗಿ ಹೆದ್ದಾರಿ ಕಾಮಗಾರಿ ಆರಂಭಿಸಿ
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ. ಅವರು ಹುತ್ತುರ್ಕೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2013ರಲ್ಲಿ ಅಂದಿನ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ, ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್, ಸಂಸದ ಕೆ. ಜಯಪ್ರಕಾಶ ಹೆಗ್ಡೆಯವರ ವಿಶೇಷ ಮನವಿಯ ಹಿನ್ನಲೆಯಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಂಪುಟದಲ್ಲಿ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮತ್ತು ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಡಾ. ಎಂ.ವೀರಪ್ಪ ಮೊಯಿಲಿಯವರು ಸತತ 1ವಾರಗಳ ಕಾಲ ವಿಶೇಷ ಸಭೆ ನಡೆಸಿ ಅರಣ್ಯ ಇಲಾಖೆಯ ಸಹಿತ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಸಾಕಷ್ಟು ಅನುದಾನವನ್ನೂ ಮಿಸಲೀರಿಸಿ ಮಲ್ಪೆ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಮಂಜೂರು ಮಾಡಿಸಿದ್ದರು. ಆದರೂ ಹೆದ್ದಾರಿ ಪೂರ್ಣಗೊಳ್ಳದಿರುವುದು ನೋವು ತಂದಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.
ಶಿವಮೊಗ್ಗ ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಶೃಂಗೇರಿ ಮಠದ ಸಮೀಪದಲ್ಲಿ ಹಾದುಹೋಗುವ ಬದಲಿ ವ್ಯವಸ್ಥೆ ನಡೆದಿದ್ದರಿಂದ ಹೆಬ್ರಿ ಗೋಪಾಲ ಭಂಡಾರಿ, ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಕರಾವಳಿ ಜಿಲ್ಲೆ ಮತ್ತು ಮಲೆನಾಡಿನ ಹೆದ್ದಾರಿಗೆ ಸಂಪರ್ಕವನ್ನು ಕಲ್ಪಿಸಿ ಮಲೆನಾಡು ಮತ್ತು ಕರಾವಳಿಯನ್ನು ಬೆಳೆಸಲು ಬೇಸುಗೆಯಾಗಿ ಮಲ್ಪೆ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಮಂಜೂರು ಮಾಡಿಸಿದ್ದರು ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಅತೀ ವಿಳಂಬ : ಮಲ್ಪೆ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ ಯ ಕಾಮಗಾರಿಯು ಕಳೆದ 13 ವರ್ಷಗಳಿಂದಲೂ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿರುವುದು ವಿಷಾದನೀಯ. ಆಗುಂಬೆ ಘಾಟಿಯಲ್ಲಿ ಯಾವೂದೇ ಕಾಮಗಾರಿ ನಡೆಯುತ್ತಿಲ್ಲ. ಆಗುಂಭೆ ಘಾಟಿ ಅಗಲವಾಗಬೇಕು ಆಗ ಮಾತ್ರ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು ಬೆಳೆಯುತ್ತವೆ. ಅತೀ ಬೇಗ ತಲುಪಲು ಸಾಧ್ಯವಾಗುತ್ತದೆ ಎಂಬ ಪ್ರಮುಖ ಉದ್ದೇಶದಿಂದಲೇ ಹೆದ್ದಾರಿಯನ್ನು ಮಂಜೂರು ಮಾಡಿಸಲಾಗಿದೆ. ಕಳೆದ 100 ವರ್ಷದಿಂದಲೂ ಆಗುಂಬೆ ಘಾಟಿಯಲ್ಲಿ ಕೇವಲ ಲಘು ವಾಹನಗಳು ಮಾತ್ರ ಸಂಚರಿಸುತ್ತಿವೆ. ಆಗುಂಬೆ ಘಾಟಿ ಅಗಲ, ವಿಸ್ತರಣೆಯಾಗಿದ್ದರೆ ಉಡುಪಿ ಹೆಬ್ರಿ ತೀರ್ಥಹಳ್ಳಿ ಹೆದ್ದಾರಿ ಯಾವೂದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಿರುವ ನೀರೆ ಕೃಷ್ಣ ಶೆಟ್ಟಿಯವರು ಆಗುಂಬೆ ಘಾಟಿಯ 5ಕೀಮಿ ರಸ್ತೆಯು 4೦ ಮೀಟರ್ ಅಗಲ ರಾಜ್ಯ ಹೆದ್ದಾರಿ ಇರುವಾಗಲೇ ರಾಜ್ಯ ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳ ಎಂದು ಕಂದಾಯ ಇಲಾಖೆಯಲ್ಲಿ ದಾಖಲೆ ಇದೆ. ಲೋಕೋಪಯೋಗಿ ಇಲಾಖೆಯ ಹೆಸರಿನಲ್ಲಿ 51ಎಕರೆ ಜಾಗ ಆಗುಂಬೆ ಘಾಟಿ ರಸ್ತೆ ಎಂಬುದಾಗಿ ಪಹಣಿ ಕೂಡ ಇದೆ. ಅಂದೇ ಬ್ರಿಟೀಷ್ ಸರ್ಕಾರವು 40 ಅಡಿ ಜಾಗವನ್ನು ಮೀಸಲಿರಿಸೆ. ಈ ಎಲ್ಲಾ ದಾಖಲೆಗಳನ್ನು ಅಂದೇ ಆಸ್ಕರ್ ಫೆರ್ನಾಂಡಿಸ್ ಮತ್ತು ಡಾ. ಎಂ.ವೀರಪ್ಪ ಮೊಯಿಲಿಯವರು ಪರಿಶೀಲಿಸಿ ಅರಣ್ಯ ಇಲಾಖೆಯ ತಕರಾರು ಇಲ್ಲ ಎಂದು ಮನಗಂಡು ಹೆದ್ದಾರಿಯನ್ನು ಮಂಜೂರುಗೊಳಿಸಿದ್ದರು ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ಇಷ್ಟೆಲ್ಲ ದಾಖಲೆಗಳು, ವ್ಯವಸ್ಥೆಗಳಿದ್ದರೂ ಹೆದ್ದಾರಿ ಕಾಮಗಾರಿ ವಿಳಂಬ ಯಾಕೆ ಎಂದು ತಿಳಿಯುತ್ತಿಲ್ಲ, ಹೆದ್ದಾರಿ ಕಾರ್ಯ ಬೇಗ ಮುಗಿಸಿದರೆ ಉಡುಪಿ ಜಿಲ್ಲೆಯ ಜನತೆ ಅತ್ಯಂತ ಬೇಗವಾಗಿ ಬೆಂಗಳೂರು ತಲುಪಲು ಸಾಧ್ಯವಾಗುತ್ತದೆ. ಈಗಾಗಲೇ ಭದ್ರಾವತಿ, ತರಿಕೆರೆ, ಬಿರೂರು, ಕಡೂರು, ಅರಸಿಕೆರೆ ಹೆದ್ದಾರಿಯ ದುರಸ್ತಿ ಕಾರ್ಯ ಮುಗಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಭಯವನ್ನು ಬಿಟ್ಟು ಆಗುಂಬೆ ಘಾಟಿಯಲ್ಲಿ ವಿಸ್ತರಣೆ ಮಾಡಿ ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ನೀರೆ ಕೃಷ್ಣ ಶೆಟ್ಟಿಯವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದೀಪಾ ಭಂಡಾರಿ, ಕೋಶಾಧಿಕಾರಿ ಎಚ್. ಜನಾರ್ಧನ್, ನಿರ್ದೇಶಕರಾದ ಮುನಿಯಾಲು ಗೋಪಿನಾಥ ಭಟ್, ಮೂರ್ಸಾಲು ಮೋಹನದಾಸ ನಾಯಕ್, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್ ಶಿವಪುರ, ಚಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ ಶೆಟ್ಟಿ, ಶ್ವೇತ ಕುಮಾರ್, ನಿಲೇಶ್ ಮುಂತಾದವರು ಉಪಸ್ಥಿತರಿದ್ದರು.




