ಕಭೀ ತಂಡ ನಿಮ್ಮೊಂದಿಗಿದೆ ಸದುಪಯೋಗವನ್ನು ಪಡೆದುಕೊಳ್ಳಿ : ಡಾ. ಲತಾ ನಾಯಕ್
ಬೆಳ್ವೆ : ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಆಸ್ಪತ್ರೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ) ಆಶ್ರಯದಲ್ಲಿ ೧ ವಾರಗಳ ಕಾಲ ನಡೆದ ವಿಶ್ವ ಮೆದುಳು ದಿನಾಚರಣೆ ಸಮಾರೋಪ ಸಮಾರಂಭ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಬೆಳ್ವೆ ಶ್ರೀಗಣೇಶ್ ಕ್ಯಾಶ್ಯೂ ಉದ್ಯಮ ಸಮೂಹ ಸಂಸ್ಥೆಯಲ್ಲಿ ಬುಧವಾರ ನಡೆಯಿತು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಯಿತು.
ಉಡುಪಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾಗಿರುವ ಕಭೀ ಕಾರ್ಯಕ್ರಮದ ನೂಡಲ್ ಅಧಿಕಾರಿ ಡಾ. ಲತಾ ನಾಯಕ್ ಮಾತನಾಡಿ ಕಭೀ ಕಾರ್ಯಕ್ರಮದಲ್ಲಿ, ನರವೈಜ್ಞಾನಿಕ ಖಾಯಿಲೆಗಳಾದ ತಲೆನೋವು. ಪಾರ್ಶ್ವವಾಯು, ಅಪಸ್ಮಾರ ಹಾಗೂ ಡಿಮೆಂಶಿಯ ಕುರಿತು ವಿಶ್ಲೇಷಿಸಿ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕಭೀ ತಂಡದಲ್ಲಿ ವೈದ್ಯಾಧಿಕಾರಿಗಳು, ಜಿಲ್ಲಾ ಸಂಯೋಜಕರು, ಸ್ಪೀಚ್ ಥೆರಪಿಸ್ಟ್, ಫಿಸಿಯೋ ಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಸ್ಟಾಫ್ ನರ್ಸ್ ಕಾರ್ಯನಿರ್ವಹಿಸುತ್ತಿದ್ದು, ನರವೈಜ್ಞಾನಿಕ ಖಾಯಿಲೆ ಇರುವ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ನಿಂದ ಟೆಲಿ ನ್ಯೂರೋಲಾಜಿ ಸೇವೆಯನ್ನೂ ಸಹ ನೀಡಲಾಗುತ್ತದೆ. ಕಭೀ ಉತ್ತಮವಾದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕಭೀ ತಂಡ ನಿಮ್ಮೊಂದಿಗಿದೆ ಸದುಪಯೋಗವನ್ನು ಪಡೆದುಕೊಂಡು ಜನರಿಗೆ ತಿಳಿಸಿ ಸಹಕರಿಸಿ ಎಂದರು.
ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೂಪಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ. ಲತಾ ನಾಯಕ್ ನಮ್ಮೊಂದಿಗೆ ಮಾಹಿತಿ ನೀಡಿರುವುದು ಅತ್ಯಂತ ಉಪಯುಕ್ತವಾಗಿದೆ. ಮೆದುಳು ಆರೋಗ್ಯ ಉತ್ತಮವಾಗಿಸಿಕೊಳ್ಳಬೇಕಾಗುವುದು ಬಹಳ ಮುಖ್ಯ ಎಂದು ತಿಳಿಸಿದರು.
ಕಭೀ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ ಅವನಿ ಶೆಟ್ಟಿ ಉದ್ದೇಶಿಸಿ ಮಾತನಾಡಿ ಕಭೀ ಕಾರ್ಯಕ್ರಮದ ಮಾಹಿತಿ ನೀಡಿದರು. ಮೆದುಳು ಆರೋಗ್ಯ ದ ಜೊತೆಗೆ ಬಿ. ಪಿ. ಶುಗರ್ ಸ್ಕ್ರೀನಿಂಗ್ ನಡೆಸಲಾಯಿತು.
ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಜಿಲ್ಲಾಸ್ಪತ್ರೆಯ ಬ್ರೈನ್ ಹೆಲ್ತ್ ಕ್ಲಿನಿಕ್ ನಲ್ಲಿರುವ ಸಿಬ್ಬಂದಿಗಳು ನಿರ್ವಹಿಸುವ ಕಾರ್ಯ ಹಾಗೂ ದೊರಕುವ ಸೌಲಭ್ಯದ ಮಾಹಿತಿ ನೀಡಿದರು.
ಕಭೀ ಕಾರ್ಯಕ್ರಮ ದ ಸ್ಪೀಚ್ ಥೆರಪಿಸ್ಟ್ ಹೇಮಾ ಪಿ ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯ ಕುಮಾರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.



