ಹೆಬ್ರಿ ನ್ಯೂಸ್ ಫಾಲೋಅಪ್ ವರದಿ
ಹೆಬ್ರಿ : ಪಶ್ಚಿಮಘಟ್ಟ ಹಾಗೂ ಆಗುಂಬೆಯಲ್ಲಿ ರಾತ್ರಿ ಹೊತ್ತಿನಲ್ಲಿ ಕಾಡಿನಲ್ಲಿ ಸಂಚಾರ ಮಾಡಿಕೊಂಡು ಕಪ್ಪೆ ಹಾವು ತೋರಿಸುತ್ತೇವೆ ಎಂದು ಜಾಹಿರಾತು ಪ್ರದರ್ಶಿಸಿ ಬೆಂಗಳೂರಿನ ಜನರನ್ನು ಆಕರ್ಷಿಸುತ್ತಿದ್ದವರ ವಿರುದ್ಧ ಅರಣ್ಯ ಇಲಾಖೆಯು ಎಚ್ಚರಿಕೆ ನೀಡಿದೆ. ಅರಣ್ಯ ಅಕ್ರಮ ಪ್ರವೇಶದ ವಿರುದ್ಧ ಎಚ್ಚರಿಕೆ ಬ್ಯಾನರ್ ಅಳವಡಿಸಿದೆ.
ಮಲೆನಾಡಿನಲ್ಲಿ ಮಾನ್ಸೂನ್ ವಾರಂತ್ಯಗಳಲ್ಲಿ ಹರ್ಪಿಂಗ್, ನೈಟ್ ಟ್ರಾವೆಲ್ಸ್, ಫ್ರಾಗ್ ವಾಕ್, ಫೋಟೋಗ್ರಾಫಿ ಮೊದಲಾದ ಅನಧಿಕೃತ ಕಾರ್ಯಗಾರಗಳು ಹೆಬ್ರಿ ತಾಲ್ಲೂಕಿನ ಸೋಮೇಶ್ವರ ವನ್ಯಜೀವಿ ವಲಯಗಳಲ್ಲಿ ಹೋಂ ಸ್ಟೇ ರೆಸಾರ್ಟ್ ಗಳಲ್ಲಿ ಆಯೋಜಿಸಿ ವನ್ಯಜೀವಿಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದವರಿಗೆ ಅರಣ್ಯ ಇಲಾಖೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಬಗ್ಗೆ ಹೆಬ್ರಿ ನ್ಯೂಸ್ ವರದಿಯನ್ನು ಪ್ರಕಟಿಸಿತ್ತು.
ರೈನಥಾನ್ ಮಳೆ ನಡಿಗೆಗೆ ಬ್ರೇಕ್ : ಆಗಸ್ಟ್ 01 ರಂದು ಹೆಬ್ರಿ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ನಡೆಯಬೇಕಾಗಿದ್ದ ಮಳೆ ನಡಿಗೆ ರೈನಥಾನ್ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಅನುಮತಿಯನ್ನು ನಿರಾಕರಿಸಿದೆ. ದಟ್ಟ ಮಳೆಕಾಡು, ಜಲಪಾತ, ಹೊಳೆಗಳು ಹಾಗೂ ಅಪರೂಪದ ಜೀವವೈವಿದ್ಯ ಹೊಂದಿರುವ ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ತಾಜ್ಯ, ವಾಹನಗಳ ಗದ್ದಲ, ವನ್ಯಜೀವಿಗಳಿಗೆ ತೊಂದರೆ, ಪರಿಸರ ಮಾಲಿನ್ಯ ಹೆಚ್ಚುವ ಅಪಾಯವಿದೆ ಎದು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
….
ಎಲ್ಲೆಡೆಯೂ ಅರಣ್ಯ ಇಲಾಖೆ ಜಾಗೃತಿ ಮೂಡಿಸಲಿ : ಸೋಮೇಶ್ವರ ವನ್ಯಜೀವಿ ಅರಣ್ಯ ವಲಯದ ವತಿಯಿಂದ ಮೂಡಿರುವ ಅರಣ್ಯ ಇಲಾಖೆಯ ಎಚ್ಚರಿಕೆ ಮತ್ತು ಜಾಗೃತಿ ರಾಜ್ಯದಾದ್ಯಂತ ಮಾಡಬೇಕಿದೆ. ಅರಣ್ಯದ ಒಳಗೆ ನಡೆಯುವ ಎಲ್ಲಾ ಅನಧಿಕೃತ ಚಟುವಟಿಕೆಗಳನ್ನು ನಿಲ್ಲಿಸುವಲ್ಲಿ ಇಲಾಖೆಯವರು ಕೆಲಸ ಮಾಡಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
…..
ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಹರ್ಫಿಂಗ್ ನಿಷೇಧ ಸ್ವಾಗತಾರ್ಹ ಕ್ರಮ. ಈ ನಿಷೇಧವನ್ನು ಉಳಿದ ಅರಣ್ಯಗಳು ಮತ್ತು ಖಾಸಗಿ ಜಾಗಕ್ಕೂ ಅರಣ್ಯ ಇಲಾಖೆ ವಿಸ್ತರಿಸಬೇಕು.
ಸಂಶೋಧನಾ ಕೇಂದ್ರ, ರೆಸಾರ್ಟ್, ಹೋಂಸ್ಟೇ ಇತ್ಯಾದಿ ಇರುವುದು ಖಾಸಗಿ ಜಮೀನುಗಳಲ್ಲಿ ಇರಬಹುದು. ಆದರೆ ಅಲ್ಲಿರುವ ಕಪ್ಪೆ, ಜೇಡ, ಹಾವು ಇತ್ಯಾದಿ ವನ್ಯಜೀವಿಗಳು ಭಾರತ ಸರ್ಕಾರದ ಆಸ್ತಿ ಅಲ್ಲವೇ? ಹಣ ಮಾಡಲು, ಮನರಂಜನೆಗಾಗಿ ಆ ವನ್ಯಜೀವಿಗಳ ಮೇಲೆ ಶೋಷಣೆ ನಡೆಸುವ ಹಕ್ಕನ್ನು ಖಾಸಗಿಯವರಿಗೆ ಯಾರು ಕೊಟ್ಟಿದ್ದಾರೆ?
– ನಾಗರಾಜ ಕೂವೆ, ಪರಿಸರಾಸಕ್ತ
……..
ಅನಧಿಕೃತವಾಗಿ ವನ್ಯಜೀವಿ ವಲಯದ ಅರಣ್ಯಕ್ಕೆ ಯಾರಿಗೂ ಪ್ರವೇಶಿಸಲು ಅವಕಾಶವಿಲ್ಲ. ಒಂದು ವೇಳೆ ನಿಯಮ ಮೀರಿ ಪ್ರವೇಶಿಸಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ಕಾಡು ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ.
– ರುಥ್ರೀನ್, ಪ್ರಭಾರ ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ.



