Sunday, August 9, 2026
Homeಪ್ರಮುಖ ಸುದ್ದಿಪಡುಕುತ್ಯಾರಿನಲ್ಲಿ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ : 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಗೆ ಚಾಲನೆ

ಪಡುಕುತ್ಯಾರಿನಲ್ಲಿ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ : 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಗೆ ಚಾಲನೆ

ಶಿರ್ವ: ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಅವರ 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಗೆ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ವಿವಿಧ ಧಾರ್ಮಿಕ,ವೈದಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಚಾಲನೆ ನೀಡಲಾಯಿತು.

ಆನೆಗುಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರೂ ಜೀವನವನ್ನು ಬಿಟ್ಟುಬಿಡುವಂತಿಲ್ಲ. ತಾಳ್ಮೆಯಿಂದ ಯೋಚಿಸಿದಾಗ ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ, ಒಂದು ಮಾರ್ಗ ಖಂಡಿತವಾಗಿ ಸಿಗುತ್ತದೆ. ಆದ್ದರಿಂದ ಚಿಂತೆಯನ್ನು ಬಿಟ್ಟು, ಚಿಂತನೆಯೊಂದಿಗೆ ಬದುಕಿನ ಸರಿಯಾದ ದಾರಿಯನ್ನು ಕಂಡುಕೊಳ್ಳಬೇಕು. ತಾಳ್ಮೆ, ವಿಶ್ವಾಸ ಮತ್ತು ಸತ್ ಚಿಂತನೆಯೇ ಯಶಸ್ವಿ ಜೀವನದ ಮೂಲಮಂತ್ರವಾಗಿದೆ ಎಂದರು.

ನಮ್ಮ ಜೀವನದಲ್ಲಿಯೂ ನಿಜವಾದ ಆನಂದ, ಶಾಂತಿ ಮತ್ತು ದೈವಿಕ ಸಂಪತ್ತು ಹೊರಗಿಲ್ಲ; ಅದು ನಮ್ಮೊಳಗೇ ಅಡಗಿದೆ. ಆದರೆ ಅಜ್ಞಾನದಿಂದ ನಾವು ಅದನ್ನು ಹೊರಗಡೆ ಹುಡುಕುತ್ತಾ ಅಲೆದಾಡುತ್ತೇವೆ. ಸರಿಯಾದ ಮಾರ್ಗದರ್ಶನ ನೀಡುವ ಸದ್ಗುರು ದೊರೆತಾಗ ಮಾತ್ರ ನಮ್ಮೊಳಗಿರುವ ಆನಂದ ಎಂಬ ವಜ್ರವನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.

ಚಾತುರ್ಮಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವದೇರ ಹೋಬಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುತ್ತಾರೆ. ನಮ್ಮ ದೌರ್ಬಲ್ಯಗಳನ್ನು ನಿವಾರಿಸಿ, ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತಾರೆ. ಆದ್ದರಿಂದ ಜೀವನದಲ್ಲಿ ಸದ್ಗುರುವಿನ ಸಾನ್ನಿಧ್ಯ ಮತ್ತು ಮಾರ್ಗದರ್ಶನ ಅತ್ಯಂತ ಅಮೂಲ್ಯವಾಗಿದೆ ಎಂದರು.

ಆನೆಗುಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತಿ ಪೀಠ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವಿವಿಧ ದೇವಸ್ಥಾನಗಳ ಮೊಕ್ತೇಸರರಾದ ಚಂದ್ರಯ್ಯ ಆಚಾರ್ಯ ಕಳಿ, ರವಿ ಆಚಾರ್ಯ ಕಾರ್ಕಳ, ಶಿವರಾಮ ಆಚಾರ್ಯ ಮೂಡುಬಿದಿರೆ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಗಜಾನನ ಎನ್ ಆಚಾರ್ಯ ನೀಲಕಂಠ ಶಿರಾಲಿ, ಗಣೇಶ್ ಆಚಾರ್ಯ ಕಾಪು, ಬಿ. ಎಂ. ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಅರಿಕ್ಕಾಡಿ, ಸಿ ಎ ಶ್ರೀಧರ ಆಚಾರ್ಯ ಪನ್ವೆಲ್, ಪ್ರತಿಷ್ಠಾನ ದ ವಿವಿಧ ಸಮಿತಿ ಅಧ್ಯಕ್ಷ ರಾದ ಹರೀಶ್ಚಂದ್ರ ಎನ್ ಆಚಾರ್ಯ ಬೆಂಗಳೂರು, ಬಿ. ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಂದರ ಆಚಾರ್ಯ ಬೆಳುವಾಯಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಬ್ರಹ್ಮ ಶ್ರೀ ಕೇಶವ ಶರ್ಮ ಇರುವೈಲು, ವೈ. ಧರ್ಮೆಂದ್ರ ಆಚಾರ್ಯ ಕಾಸರಗೋಡು, ಸೋಮಚಾರ್ ಕಡ್ಲಾಸ್ಕರ್, ರಾಜೇಂದ್ರ ಆಚಾರ್ಯ, ನಾಗರಾಜ್ ಆಚಾರ್ಯ ಕಾಡಬೆಟ್ಟು ಉಪಸ್ಥಿತರಿದ್ದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರ್ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಚಾತುರ್ಮಾಸ್ಯ ವ್ರತಾಚರಣೆಯಂಗವಾಗಿ ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಚಾತುರ್ಮಾಸ್ಯ ವ್ರತ ಸಂಕಲ್ಪ, ಶ್ರೀ ಗುರುಪಾದುಕಾ ಪೂಜೆ ನಡೆಯಿತು. ಪ್ರತಿದಿನ ಬೆಳಿಗೆ ಮತ್ತು ಸಂಜೆ ದುರ್ಗಾ ನಮಸ್ಕಾರ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಗುರುಪಾದುಕಾ ಪೂಜೆಯ ನಂತರ ಉಪನ್ಯಾಸ ಮಾಲಿಕೆ, ವಿವಿಧ ದೇವಸ್ಥಾನಗಳು ಮತ್ತು ಸಂಘಸಂಸ್ಥೆಗಳ ವತಿಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ವಿಶೇಷ ಕಾರ್ಯಕ್ರಮಗಳು: ಆ. 9ರಂದು ಶ್ರೀಗುರುಗಳ ಸುವರ್ಣ ಜನ್ಮವರ್ಧಂತಿ ಮಹೋತ್ಸವ, ಆ 23ರಂದು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ, ಸೆ.20ರಂದು ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ ಹಾಗೂ ವಿಶೇಷ ವೈದಿಕ ಕಾರ್ಯಕ್ರಮ, ಸೆ.26 ರಂದು ಸೀಮೋಲ್ಲಂಘನ, ಧಾರ್ಮಿಕ ಸಭೆ ಹಾಗೂ ಚಾತುರ್ಮಾಸ್ಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments