Saturday, August 8, 2026
Homeಕಾರ್ಕಳಪತ್ರಕರ್ತ ಕವಿ ಸಾಹಿತಿ ಸಂಘಟಕ : ಡಾ. ಶೇಖರ ಅಜೆಕಾರ್ ಮರೆಯಲಾಗದ ವ್ಯಕ್ತಿತ್ವ-...

ಪತ್ರಕರ್ತ ಕವಿ ಸಾಹಿತಿ ಸಂಘಟಕ : ಡಾ. ಶೇಖರ ಅಜೆಕಾರ್ ಮರೆಯಲಾಗದ ವ್ಯಕ್ತಿತ್ವ- ವಿ.ಕೆ. ವಾಲ್ಪಾಡಿ.

ಡಾ. ಶೇಖರ ಅಜೆಕಾರು ಒಬ್ಬ ವಿಭಿನ್ನ ಕಲಾವಂತಿಕೆ ಹಾಗೂ ಚಟುವಟಿಕೆಯ ಸೃಜನಶೀಲ ಪಾದರಸ. ಅವರು ಏನಾದರೊಂದು ಮಾಡಿದರೂ ಅದು ಅಪೂರ್ವವೇ ಆಗುವುದು. ಅವರ ಕಲ್ಪನೆಯ ಪ್ರತಿ ಕೆಲಸವೂ ಕೂಡ ಹೊಸಬೆಳಕಿನಂತೆ ಅರಳುವುದು.

ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳದಿಂಗಳ ತಂಪು ಬೆಳಕಿನಲ್ಲಿಯೂ ಮಾಡಬಹುದೆಂದು “ಬೆಳದಿಂಗಳ ಸಾಹಿತ್ಯ ಸಮ್ಮೇಳನ” ಹುಟ್ಟುಹಾಕಿದವರು. ತುಂಬಾ ಕಡೆಗಳಲ್ಲಿ ಅದನ್ನು ನೆರವೇರಿಸಿದ್ದಾರೆ.
ಅವರ ವಿಚಾರಗಳು, ಕೆಲಸಗಳು ಎಲ್ಲವೂ ಪುರಸ್ಕಾರ ಯೋಗ್ಯವಾದವುಗಳೆ. ಅವರ ಕನಸು,ಕಲ್ಪನೆಗಳಿಗೆ ಬೇರೆಯೇ ಹೆಸರನ್ನಿಟ್ಟು ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡಲಾರಂಭಿಸಿದವರಿದ್ದಾರೆ. ಅದೆಲ್ಲವೂ ಯಶಸ್ವೀಯಾಗುತ್ತಲೇ ಬಂದಿದೆ.

ಕನ್ನಡ ಸ್ನಾತಕೋತ್ತರ ಪದವೀಧರನಾಗಿ,ಪತ್ರಿಕೋದ್ಯಮದಲ್ಲಿ ಪದವೀಧರನಾಗಿ ನಂತರ ಅವರು ‘ಕುಂದಪ್ರಭ’ ವಾರಪತ್ರಿಕೆಯೊಂದಿಗೆ ತಮ್ಮ ಪತ್ರಿಕೋದ್ಯಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಮುಂಬೈನ ‘ಕರ್ನಾಟಕ ಮಲ್ಲ’ ದಿನಪತ್ರಿಕೆಯಲ್ಲಿ ವರ್ಷಗಳ ಕಾಲ ಸೇವೆ ಮಾಡಿ ಮತ್ತೆ ಊರಿಗೆ ಬಂದವರು ‘ಜನವಾಹಿನಿ’, ‘ಕನ್ನಡಪ್ರಭ’, ‘ಉಷಾ ಕಿರಣ’ ಹಾಗೂ ‘ಡೈಜಿವರ್ಲ್ಡ್’ (ಡೈಜಿವರ್ಲ್ಡ್ ವಾರಪತ್ರಿಕೆ ಸೇರಿದಂತೆ) ಮುಂತಾದ ಪ್ರಕಟಣೆಗಳಲ್ಲಿ ಕೆಲಸ ಮಾಡಿದರು.
ಅವರು ಪತ್ರಕರ್ತರ ವೇದಿಕೆಯ ಉಡುಪಿ ಶಾಖೆಯ ಉಪಾಧ್ಯಕ್ಷರಾಗಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಪತ್ರಿಕೋದ್ಯಮದ ಹೊರತಾಗಿ, ಅವರು ಸಾಹಿತಿ,ಕವಿಯಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಹಿತ್ಯ ಸಮ್ಮೇಳನ,ಕವಿಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯವನ್ನು ಪ್ರೀತಿಸಿದವರಾಗಿದ್ದಾರೆ.

ಡಾ।ಶೇಖರ ಅಜೆಕಾರ್ ಅವರು ಮುಂಬೈನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯೂ ಅವರ ಕನ್ನಡದ ಸೇವೆಗಳು ಬಹುವಿಧದಲ್ಲಿ ಇರುತ್ತಿತ್ತು. ‘ಪೋವಾಯಿ ಕನ್ನಡ ಸಂಘ’ ಮತ್ತು ‘ಕುರ್ಪಾಡಿ ಯುವ ವೃಂದ’ ದಂತಹ ಸಂಘಟನೆಗಳನ್ನು ಸ್ಥಾಪಿಸಿದ್ದಾರೆ. ‘ಕರ್ನಾಟಕ ಮಿನಿ ಚಲನಚಿತ್ರೋತ್ಸವ’, ಅಜೆಕಾರಿನಲ್ಲಿ ‘ಆದಿ ಗ್ರಾಮೋತ್ಸವ’ ಹಾಗೂ ಅಜೆಕಾರು,ಕಾರ್ಕಳ,ಮೂಡುಬಿದಿರೆ ಮುಂತಾದೆಡೆ ‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’ ದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಪ್ರೀತಿ ಅಭಿಮಾನ ಗಳಿಸಿದ್ದಾರೆ. ಜೊತೆಗೆ, ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನೂ ಸಂಘಟಿಸಿದ್ದಾರೆ.

ಅವರು ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ .’ಚೆಲುವ ಮೂಡುಬಿದಿರೆ’, ‘ಸೂರ್ಯ ಶಿಕಾರಿಗೆ ಮುನ್ನ’, ‘ಬಾವೈಕ್ಯದ ಕ್ಷೇತ್ರ ಅತ್ತೂರು’ ‘ಕೃಷಿ ಋಷಿ ಡಾ.ಎಲ್.ಸಿ. ಸೋನ್ಸ್’ ‘ಸಾಹಿತ್ಯ ಸಿರಿ’ಮತ್ತು ‘ಕಂಬಳ’ ಅಲ್ಲದೆ ಕೆಲವು ವ್ಯಕ್ತಿ ಪರಿಚಯದ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.
ಊರಿನ ಹಿರಿಯ ವ್ಯಕ್ತಿಗಳನ್ನು ,ನಿವೃತ್ತರನ್ನು ಸಂದರ್ಶನ ಮಾಡಿ ಅದರ ವೀಡಿಯೋ ಹಂಚುವ ಅವರ ಕಾರ್ಯಕ್ರಮ ಜನಪ್ರಿಯಗೊಂಡಿತ್ತು.

“ಕಿನ್ಯ ರಾಮಾಯಣ” ಎನ್ನುವ ಸಣ್ಣ ಪಾಕೆಟ್ ಪುಸ್ತಕ ಹೊರ ತಂದಿರುವ ವಿಶಿಷ್ಟ ಕ್ರಿಯಾಶೀಲತೆ ಅವರದು. ಅದನ್ನು ತುಳು ಭಾಷೆಯಲ್ಲಿ ಬರೆದಿರುವುದು. #ಕಿನ್ಯ ತಳು ಪದ ಕನ್ನಡದಲ್ಲಿ ಚಿಕ್ಕದು ಎಂದರ್ಥ.
ದಶರಥನಿಗೆ ಮಕ್ಕಳಿಲ್ಲದ ಚಿಂತೆಯಿಂದಾರಂಭಿಸಿ ಸೀತೆ ಕಾಡಿಗೆ ಹೋಗಿ ಲವ-ಕುಶರಿಗೆ ಜನ್ಮ ನೀಡುವಲ್ಲಿ ವರೆಗಿನ ಕಥೆ 16 ಪುಟಗಳಲ್ಲಿ ತುಂಬಿಕೊಂಡಿದೆ.ಪುಸ್ತಕದ ಗಾತ್ರ 7×10 ಸೆಂಟಿ ಮೀಟರ್. ಮಕ್ಕಳಿಗಂತೂ ಇದು ಓದುವುದಕ್ಕೆ ಬಹಳ ಖುಶಿ ಕೊಡುವಲ್ಲಿ ಯಶಸ್ಸು ಕಂಡಿತ್ತು.

ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಾ।ಶೇಖರ ಅಜೆಕಾರು ಹೆಸರಿನಲ್ಲಿ ಪ್ರತಿ ವರ್ಷ ಗೌರವ ಸಮ್ಮಾನ ನೀಡಲಾಗುತ್ತದೆ. ಎರಡನೆಯ ವರ್ಷದ ಗೌರವ ಪ್ರಶಸ್ತಿಯನ್ನು ಕಾರ್ಕಳದ ಹಿರಿಯ ಪತ್ರಕರ್ತ ಕುಂಟಾಡಿ ದಯಾನಂದ ಪೈಯವರಿಗೆ ನೀಡಲಾಗುತ್ತಿದೆ.
ದಿನಾಂಕ 06 ಆಗಸ್ಟ್ 2026ರಂದು ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ,ಸಾಣೂರು ಅಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಕರಾಗಿ ಡಾ.ಎಂ. ಮೋಹನ ಆಳ್ವ, ಅಧ್ಯಕ್ಷ,ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆ ಭಾಗವಹಿಸಲಿರುವರು.

ಮುಹಮ್ಮದ್ ಶರೀಫ್,ಅಧ್ಯಕ್ಷ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ, ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಶೇಖರ್ ಅಜೆಕಾರ್ ಅವರು 2023ರ ಅಕ್ಟೋಬರ್ 31ರಂದು ಹೃದಯಾಘಾತದಿಂದ ನಿಧನರಾದರು.
ಅವರ ನೆನಪಿನ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮರೆಯಲಾಗದ ನೆನಪು.
-ವಿ. ಕೆ. ವಾಲ್ಪಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments