ಗ್ರಾಮಸ್ಥರಿಗೆ ಸೇರಿದ ದೇವಸ್ಥಾನವನ್ನು ಕುಟುಂಬದ ದೇವಸ್ಥಾನ ಎಂದು ಸುಳ್ಳು ಸಾಧನೆ : ವಿಜಯ ಶೆಟ್ಟಿ ಸೀತಾನದಿ.
ಪತ್ರಿಕಾಗೋಷ್ಠಿಯಲ್ಲಿ ನೋವು ಹಂಚಿಕೊಂಡ ನಂದಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತ ಸಮೂಹ.
ಸೀತಾನದಿ (ಹೆಬ್ರಿ ) : ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸೀತಾನದಿ ನಂದಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಗ್ರಾಮಸ್ಥರಿಗೆ ಒಳಪಟ್ಟ ದೇವಸ್ಥಾನವಾಗಿದ್ದರೂ 1 ಕುಟುಂಬಕ್ಕೆ ಸೇರಿದ ದೇವಸ್ಥಾನ ಎಂದು ಹೇಳುತ್ತಾ ತಪ್ಪು ಮಾಹಿತಿ ನೀಡಿ ಸುಳ್ಳು ಸಾಧನೆ ಮಾಡುತ್ತಿದ್ದಾರೆ. ಭಕ್ತರಾದ ನಮ್ಮ ಸಂಕಷ್ಟಗಳಿಗೆ ಹೇಳಿದ ಕಾಣಿಕೆ ಹರಕೆ ದೇವರಿಗೆ ಅರ್ಪಿಸಲು ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯೇ ಇಲ್ಲ, ಮೊದಲು ಇದ್ದ ಕಾಣಿಕೆ ಡಬ್ಬಿಯನ್ನು ಒಡೆದು ಹಾಕಿ ಬೇರೆ ಕಡೆಯಲ್ಲಿ ಮುಚ್ಚಿಡಲಾಗಿದೆ ಎಂದು ಕ್ಷೇತ್ರದ ಭಕ್ತರಾದ ಸ್ಥಳೀಯ ಮುಖಂಡ ವಿಜಯ ಶೆಟ್ಟಿ ಸೀತಾನದಿ ಗಂಭೀರ ಆರೋಪ ಮಾಡಿದ್ದಾರೆ.
ಅವರು ಸೋಮವಾರ ಸೀತಾನದಿ ನಂದಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ನೋವು ತೋಡಿಕೊಂಡು ದೇವಸ್ಥಾನದ ವಿವಿಧ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.
ಕಾಣಿಕೆ ಡಬ್ಬಿ ಒಡೆದು ಹಾಕಿದ್ದರಿಂದ ಭಕ್ತರಿಗೆ ಕಾಣಿಕೆ ಹಾಕಲು ಆಗುತ್ತಿಲ್ಲ. ತುಳುನಾಡಿನಲ್ಲಿ ಭಕ್ತರ ಮನೋಅಪೇಕ್ಷೇ ಈಡೇರಿಸಿದ ದೈವದೇವರಿಗೆ ಕಾಣಿಕೆ ಹರಕೆ ಸಲ್ಲಿಸುವುದು ಪುರಾತನ ಪದ್ಧತಿ, ಆದರೆ ನಮ್ಮ ದೇವಸ್ಥಾನದ ಕಾಣಿಕೆ ಡಬ್ಬಿಯೇ ಇಲ್ಲಿದಿರುವು ದುರಂತ. ಕೇಳಿದರೆ ಕಾಣೀಕೆಯನ್ನು ಬ್ಯಾಂಕ್ ಖಾತೆಗೆ ಹಾಕಿ ಎಂದು ಹೇಳಲಾಗುತ್ತಿದೆ ಎಂದು ವಿಜಯ ಶೆಟ್ಟಿ ಹೇಳಿದರು.
ಕಾರಣೀಕ ಕ್ಷೇತ್ರ : ನಂದಲು ಶ್ರೀ ಕ್ಷೇತ್ರ ಅತ್ಯಂತ ಪುರಾತನದ ಕಾರಣೀಕ ಕ್ಷೇತ್ರವಾಗಿದ್ದು ನಿತ್ಯವೂ ಕ್ಷೇತ್ರಕ್ಕೆ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಕ್ಷೇತ್ರಕ್ಕೆ ಬರುವ ಭಕ್ತರು ಕಾಣಿಕೆ ಹಾಕುತ್ತಿದ್ದರು. ಪ್ರತೀ ತಿಂಗಳು ಸುಮಾರು 50 ಸಾವಿರ ದಷ್ಟು ಕಾಣಿಕೆ ಸಂಗ್ರಹವಾಗುತ್ತಿತ್ತು. ವಿಶೇಷ ಪೂಜಾ ದಿನಗಳು, ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. 3 ಲಕ್ಷಕ್ಕೂ ಹೆಚ್ಚು ಕಾಣಿಕೆಯ ಹಣ ಸಂಗ್ರಹವಾಗುತ್ತಿತ್ತು. ಆ ಪೂರ್ಣ ಹಣವನ್ನು ಎದುರುದಾರ ಕುಟುಂಬದವರು ತೆಗೆದುಕೊಂಡು ಹೋಗಿ ಸ್ವಂತಕ್ಕೆ ಬಳಸುತ್ತಿದ್ದಾರೆ. ಈ ವಿಚಾರ ಭಕ್ತರಾದ ನಮಗೆಲ್ಲ ತಿಳಿದಾಗ ನಾವು ಪ್ರಶ್ನಿಸಿದ್ದೇವೆ. ಕಾಣಿಕೆ ಹುಂಡಿಯ ಹಣವನ್ನು ದೇವಸ್ಥಾನದ ಅಭಿವೃದ್ಧಿ, ಖರ್ಚುಗಳಿಗೆ ಬಳಸಬೇಕು ಎಂದು ಹೇಳಿದ್ದೇವು, ಬಳಿಕ ಕಾಣಿಕೆ ಹುಂಡಿಯನ್ನೇ ಕಿತ್ತು ಹಾಕಲಾಗಿದೆ ಎಂದು ವಿಜಯ ಶೆಟ್ಟಿ ಸೀತಾನದಿ ಹೇಳಿದ್ದಾರೆ.
ಭಕ್ತರು ಇನ್ನು ಮುಂದೆ ಬ್ಯಾಂಕ್ ಖಾತೆಗೆ ಕಾಣಿಕೆ ಹಾಕಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ವಿಜಯ ಶೆಟ್ಟಿ ದೂರಿದ್ದಾರೆ.ನಂದಲು ದೇವಸ್ಥಾನದ ವಿಚಾರವು ನ್ಯಾಯಲಯದಲ್ಲಿರುವಾಗ ದೇವಸ್ಥಾನದ ಕಾಣಿಕೆ ಹುಂಡಿಯನ್ನು ತೆಗೆದಿರುವುದು ಎಷ್ಷು ಸರಿ ಎಂದು ವಿಜಯ ಶೆಟ್ಟಿಯವರು ಪ್ರಶ್ನಿಸಿದ್ದಾರೆ. ಸುಮಾರು 30 ವರ್ಷದ ಹಿಂದೆ ಊರಿನ ಭಕ್ತರೆಲ್ಲರೂ ಸೇರಿ ದೇಣಿಗೆ ನೀಡಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ್ದರು. ಇದೀಗ ದೇವಸ್ಥಾನದಲ್ಲಿ ಅಭಿವೃದ್ಧಿ ಇಲ್ಲ, ಭಕ್ತರಿಗೆ ವ್ಯವಸ್ಥೆಗಳಿಲ್ಲ, ಇವರಿಗೆ ಗ್ರಾಮಸ್ಥರ ಕಾಣಿಕೆ, ಹಣಬೇಕು, ದೇವಸ್ಥಾನ ನಮ್ಮ ಕುಟುಂಬದ್ದು ಎಂದರೆ ಹೇಗೆ, ಈ ಎಲ್ಲಾ ಬೆಳವಣಿಗೆ ನಮಗೆ ಅತ್ಯಂತ ನೋವು ತಂದಿದೆ. ದೇವಸ್ಥಾನ ಊರಿಗೆ ಸೇರಿದ್ದಾದರೆ ಭಕ್ತರ ಅಪೇಕ್ಷೇಗೆ ಸರಿಯಾಗಿ ವ್ಯವಸ್ಥೆಗಳು, ಸಕಲ ಸೌಕರ್ಯಗಳು ಇರಬೇಕು, ಅವರ ಕುಟುಂಬದ್ದೇ ಎಂದು ಸಾಭೀತಾದರೆ ಅವರಿಗೆ ಇರಲಿ ಎಂದು ವಿಜಯ ಶೆಟ್ಟಿ ಹೇಳಿದರು. ಎದುರುದಾರರು ಸ್ವಾರ್ಥ ಸಾಧನೆ ಮಾಡುವುದು ಸರಿಯಲ್ಲ, ಧಾರ್ಮಿಕ ಧತ್ತಿ ಇಲಾಖೆಯ ನಾಮಫಲಕವನ್ನು ಕೂಡ ಕಿತ್ತು ಹಾಕಿದ್ದಾರೆ, ನಮಗೆ ನ್ಯಾಯ ಬೇಕು, ನಾವು ಭಕ್ತರು ಸೇರಿ ಹೆಬ್ರಿ ಪೋಲಿಸರು, ಕುಂದಾಪುರ ಸಹಾಯಕ ಕಮೀಷನರ್, ಉಡುಪಿ ಜಿಲ್ಲಾಧಿಕಾರಿಯವರಿಗೆ, ರಾಜ್ಯ ಸರ್ಕಾರ ಮತ್ತು ರಾಜ್ಯದ ಧಾರ್ಮಿಕ ಧತ್ತಿ ಇಲಾಖೆಯ ಆಯುಕ್ತರಿಗೂ ದೂರು ನೀಡಿದ್ದೇವೆ ವಿಜಯ ಶೆಟ್ಟಿ ಸೀತಾನದಿ ತಿಳಿಸಿದರು.
ಕಳೆದ ಕಳೆದ 30 ವರ್ಷಗಳಿಂದ ದೇವಸ್ಥಾನ ಅಭಿವೃದ್ಧಿಯಾಗದೆ ಸೊರಗಿದೆ. ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಇತರೆ ಖರ್ಚು ವೆಚ್ಚಗಳ ನಿರ್ವಹಣೆಗೋಸ್ಕರ ಕಾಣಿಕ ಡಬ್ಬಕ್ಕೆ ಹಣವನ್ನು ಇರಿಸಿರುವುದು. ಕುಟುಂಬದವರು ಅವರ ಸ್ವಂತಕ್ಕೆ ಬಳಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು, ನ್ಯಾಯ ಒದಗಿಸಿಕೊಡಬೇಕಾಗಿ ನೆರೆದಿದ್ದ ಗ್ರಾಮದ ಭಕ್ತರು ಕೇಳಿಕೊಂಡರು.
ನಾಡ್ಪಾಲಿಗೆ ಶಾಪವೇ : ನಮ್ಮ ನಂದಲು ದೇವಸ್ಥಾನದ ಕತೆ ಹೀಗಾದರೆ ಮೇಗದ್ದೆ ಹನುಮಂತ ದೇವಸ್ಥಾನದ ಕಥೆಯೂ ಹೀಗೆಯೇ ಆಗಿದೆ. ಪೂಜೆ ಸಲ್ಲಿಸಿದ ಭಕ್ತರಿಗೆ ಪ್ರಸಾದವನ್ನೇ ನೀಡುತ್ತಿಲ್ಲ, ಇದು ನಮ್ಮ ನಾಡ್ಪಾಲು ಗ್ರಾಮಕ್ಕೆ ಶಾಪವೇ ಎಂದು ಹಿರಿಯರಾದ ಗುಳ್ಕಾಡು ಭಾಸ್ಕರ ಶೆಟ್ಟಿ ಹೇಳಿದರು. ಸ್ಥಳೀಯರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಸುಧಾಕರ ಗೌಡ, ದಿನೇಶ ಹೆಗ್ಡೆ, ನವೀನ್ ಪೂಜಾರಿ, ಪ್ರಶಾಂತ್ ಹಾಂಡ, ಸುಧೀರ ಪೂಜಾರಿ, ಜಗನ್ನಾಥ ಶೆಟ್ಟಿ, ರಾಘವೇಂದ್ರ ಶೆಟ್ಟಿ ಸೇರಿದಂತೆ ಹಲವು ಭಕ್ತ ಸಮೂಹ ಸೇರಿದ್ದರು.



