ನಾಡ್ಪಾಲು ಹೆಬ್ರಿ : ಹೆಬ್ರಿ ತಾಲ್ಲೂಕು ನಾಡ್ಪಾಲು ನಂದಲ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ನವರಾತ್ರಿಯ ಕಾಲದಲ್ಲಿ ವಿಶೇಷ ಪೂಜೆ ನಡೆದು, ಬುಧವಾರ ವಿಜಯ ದಶಮಿಯಂದು ಚಂಡಿಕಾ ಯಾಗ, ದೇವರಿಗೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.

ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಆಚಾರ್ಯ ನೇತೃತ್ವದಲ್ಲಿ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೌರೋಹಿತ್ಯದಲ್ಲಿ ಚಂಡಿಕಾ ಯಾಗ ನಡೆಯಿತು. ಶರನ್ನವರಾತ್ರಿಯ ಪರ್ವಕಾಲದಲ್ಲಿ ದೇವಿ ದುಷ್ಟರ ನಿಗ್ರಹವನ್ನು ಮಾಡಿ ಸಜ್ಜನರನ್ನು ರಕ್ಷಣೆ ಮಾಡಲು ಭೂಮಿಗೆ ಬಂದ ಕಾಲವಾಗಿದೆ. ಈ ಸಂದರ್ಭದಲ್ಲಿ ಭೂಮಿಯಲ್ಲಿ ದೇವಿಯನ್ನು ಆರಾಧಿಸುವ ಸರ್ವರಿಗೂ ಅನುಗ್ರಹವನ್ನು ಪಡೆಯುವ ಕ್ಷಣವಾಗಿದೆ. ಆದ್ದರಿಂದ ನವರಾತ್ರಿಯ ವೈಭವವನ್ನು ಎಲ್ಲರೂ ಆಚರಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ ಎಂದು ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ತಿಳಿಸಿದರು.
ಈ ಸಂದರ್ಭದಲ್ಲಿ ಚಂಡಿಕಾಯಾಗ ಸೇವಾಕರ್ತರಾದ ಧೀರಜ್ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ತಿಂಗಳೆ ಮನೋರಮಾ ಶೇಖರ ಶೆಟ್ಟಿ, ಅರ್ಚಕ ಶ್ರೀನಿವಾಸ ಆಚಾರ್ಯ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.



