ಕಾರ್ಕಳ : ಇಂದು ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಕಲಿತು ಮುಂದೆ ತಾವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವವರಾಗಬೇಕು. ಇಂದು ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿ ಬೆಳೆಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಾಗಿದೆ. ಸರಕಾರದ ಸವಲತ್ತು ಗಳನ್ನು ಪಡೆದುಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದ್ದಲ್ಲಿ ತಾನು ಸದಾ ಸಿದ್ದ ಎಂದು ಕಾರ್ಕಳದ ಉದ್ಯಮಿ, ಜಾನ್ಸ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಜಾನ್ ಆರ್ ಡಿಸಿಲ್ವ,ತಿಳಿಸಿದರು.

ಅವರು ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು
ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿ ಅಧ್ಯಕ್ಷ ಅಷ್ಪಾಕ್ ಅಹ್ಮದ್ ಮಾತನಾಡಿ ಪೋಷಕರೇ ನಿಮ್ಮ ಅಮೂಲ್ಯವಾದ ಸಮಯವನ್ನು ನಿಮ್ಮ ಮಕ್ಕಳ ಜೊತೆ ಕಳೆಯಿರಿ. ಶಾಲಾ ಕಾಲೇಜುಗಳಲ್ಲಿ ವ್ಯಾಪಕವಾಗಿ ಮಾದಕ ದ್ರವ್ಯ ಜಾಡು ಕಾರ್ಯಾಚರಿಸುತ್ತಿದೆ ನಿಮ್ಮ ಮಕ್ಕಳು ದಾರಿ ತಪ್ಪದಂತೆ ನಿಗಾವಹಿಸಿ ನಿಮ್ಮ ಸಮಯ ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ಇಸ್ಲಾಂನ ಮೂಲ ತತ್ವವೇ ಓದು ಖುರಾನ್ ನ ಮೊದಲು ಪದವೇ ಓದು ಎಂದಾಗಿದೆ ಅದಕ್ಕಾಗಿ ಜಮೀಯ್ಯತುಲ್ ಫಲಾಹ್ ದ ಮೂಲ ದ್ಯೇಯವೇ ಶಿಕ್ಷಣಕ್ಕೆ ಒತ್ತು ನೀಡುವುದಾಗಿದೆ ಈ ನಿಟ್ಟಿನಲ್ಲಿ ಕೆಲಸ ನಡೆಸುತ್ತಿದ್ದೇವೆ ಎಂದರು.

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಜಮೀಯತುಲ್ ಫಲಾಹ್ ಕೋಶಾಧಿಕಾರಿ ಮೊಹಮ್ಮದ್ ಶರೀಫ್ ಮಾತನಾಡಿ, ಮುಸ್ಲಿಮ್ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು ಇಂದು ಪ್ರತಿ ಮನೆ ಮನೆಗಳಲ್ಲಿ ಪದವೀಧರರಿದ್ದಾರೆ, ಆದರೆ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸದಲ್ಲಿ ಗುರುತಿಸಿ ಕೊಂಡವರ ಸಂಖ್ಯೆ ಕಡಿಮೆಯಾದುದರಿಂದ ನಮಗೆ ಅಪವಾದ ಎದುರಾಗಿದೆ. ಸ್ವಾತಂತ್ರ ಪೂರ್ವ ಇದ್ದ ಮುಸ್ಲಿಮರ ಸರಕಾರಿ ನೌಕರರ ಸಂಖ್ಯೆ ಸ್ವಾತಂತ್ರ ನಂತರದ ದಿನಗಳಲ್ಲಿ ಕಮ್ಮಿಯಾಗಿತ್ತು ಇತ್ತೀಚಿನ ದಿನಗಳಲ್ಲಿ ಮತ್ತೆ ಉನ್ನತ ಸರಕಾರಿಕೆಲಸಗಳಲ್ಲಿ ಉತ್ಸಾಹ ತೋರುತ್ತಿರುವುದು ಉತ್ತಮ ಬೆಳವಣಿಗೆ ಎಂದ ಅವರು ಕೆಲಸದಲ್ಲಿ ಇಸ್ಲಾಂ ಪ್ರತಿಪಾದಿಸಿದ ನಿಷ್ಠೆ, ಕಾರ್ಯಪರತೆ, ಮೋಸರಹಿತ, ಭ್ರಷ್ಟಾಚಾರ ರಹಿತ ಆಡಳಿತಾತ್ಮಕ ಕೆಲಸದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು.

ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಮಿಗಳಾದ ಮೊಹಮ್ಮದ್ ಅಸ್ಲಾಂ ಕುಂಟಲ್ಪಾಡಿ, ಕೆ ಪಿ ಶಬ್ಬೀರ್ ಹಸನ್ ಕಾಳಿಕಾಂಬಾ, ಜಮೀಯತುಲ್ ಫಲಾಹ್ ಉಪಾಧ್ಯಕ್ಷರುಗಳಾದ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಸಯ್ಯೇದ್ ಅಬ್ಬಾಸ್ ಅಂಚಿಕಟ್ಟೆ, ಸಂಘಟನಾ ಕಾರ್ಯದರ್ಶಿ ಸಯ್ಯದ್ ಹಸನ್ ಗಾಂಧಿ ಮೈದಾನ್ ಸದಸ್ಯರಾದ ಮೊಹಮ್ಮದ್ ಸಾಹೇಬ್ ಪುಲ್ಕೆರಿ, ಕೆ ಎಸ್ ಮೊಹಮ್ಮದ್ ಕಾಸಿಮ್ ಅಂಚಿಕಟ್ಟೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಕ್ ಬೈಲೂರ್, ಕಾರ್ಯಕ್ರಮ ನಿರೂಪಿಸಿದರು
ಸಮದ್ ಖಾನ್ ಸ್ವಾಗತಿಸಿ, ಅಬ್ದುಲ್ ಮುನೀರ್ ಧನ್ಯವಾದವಿತ್ತರು.



