ಉದ್ಯಮದ ಲಾಭದಿಂದ ಸಿಗದ ಸಂತೃಪ್ತಿ ಸೇವೆಯಿಂದ ದೊರೆಯುತ್ತದೆ : ಸಂಪತ್ ಕುಮಾರ್ ಶೆಟ್ಟಿ.
ಮುದ್ರಾಡಿ : ನಾವು ಕಷ್ಟ ಪಟ್ಟು ಹತ್ತಾರು ವರ್ಷಗಳಿಂದ ದುಡಿದು ಸಂಪಾದನೆ ಮಾಡಿ ಉದ್ಯಮದಲ್ಲಿ ಲಾಭ ಮಾಡಿರಬಹುದು, ಆದರೆ ನಾವು ಬಡವರು, ನಮ್ಮ ಸಂಸ್ಥೆಯನ್ನು ಬೆಳೆಸಿದ ನೌಕರರ ಸಂಕಷ್ಟ, ಎದುರಾಗುವ ಆರೋಗ್ಯ ಸಮಸ್ಯೆಯ ಸಮಯದಲ್ಲಿ ಮಾಡುವ ಸಹಾಯ ನೆರವಿಗೆ ಅವರು ಪ್ರತಿಯಾಗಿ ನೀಡುವ ಕೃತಜ್ಞತೆ, ಅವರ ಆ ಮುಖದಲ್ಲಿ ಮೂಡುವ ನಗುವಿನಿಂದ ನಮಗೆ ಸಿಗುವ ಸಂತೃಪ್ತಿಯೇ ನಮ್ಮ ಜೀವನ ಖುಷಿ, ಉದ್ಯಮದ ಲಾಂಭಾಂಶ ಎಂದು ದೇಶದ ಪ್ರತಿಷ್ಠಿತ ಉದ್ಯಮಿ ಶ್ರೀಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ ಮನದಾಳದ ಮಾತು ಹಂಚಿಕೊಂಡರು.
ಅವರು ಭಾನುವಾರ ಮುದ್ರಾಡಿ ಶ್ರೀ ಅಭಯಹಸ್ತೆ ಆದಿಶಕ್ತಿ ಹಾಗೂ ನಂದಿಕೇಶ್ವರ ದೇವಸ್ಥಾನದಲ್ಲಿ ಧರ್ಮಯೋಗಿ ಮೋಹನ್ ಸ್ವಾಮೀಜಿಯವರ ೫ನೇ ಆರಾಧನಾ ಮಹೋತ್ಸವದಲ್ಲಿ ” ಧರ್ಮಯೋಗಿ ಸನ್ಮಾನ ” ಸ್ವೀಕರಿಸಿ ಮಾತನಾಡಿದರು.
ನಮ್ಮ ಸಂಸ್ಥೆಯ ನೌಕರ ವೃಂದದ ಕ್ಷೇಮಾಭಿವೃದ್ಧಿಯ ಜೊತೆಗೆ ಆರೋಗ್ಯ ಶಿಕ್ಷಣ ಮತ್ತು ಕಲೆಹೆ ವಿಶೇಷ ಆದ್ಯತೆಯ ನೆಲೆಯಲ್ಲಿ ಸಹಾಯವನ್ನು ಮಾಡುತ್ತೇವೆ. ವರ್ಷಕ್ಕೆ ೧ ಕೋಟಿ ರೂಪಾಯಿಯನ್ನು ಜನರ ಸೇವೆಗಾಗಿ ನೀಡುತ್ತೀದ್ದೇವೆ. ಸಮಾಜದಿಂದ ಪಡೆದದ್ದು ಸಮಾಜಕ್ಕೆ ನೀಡಬೇಕು ಎಂಬ ಪ್ರಮುಖ ಉದ್ದೇಶದಿಂದ ಸೇವೆಯೇ ಸಂತೃಪ್ತಿ ಎಂದು ಮಾಡುತ್ತೇವೆ. ನಮ್ಮೂರಿನ ಯುವಸಮುದಾಯಕ್ಕೆ ಉದ್ಯೋಗವನ್ನು ನೀಡಿ ಅವರ ಬದುಕು ಬೆಳಗಿಸಬೇಕು ಎಂಬುದು ಕೂಡ ನನ್ನ ಕನಸು ಎಂದು ಸಂಪತ್ ಕುಮಾರ್ ಶೆಟ್ಟಿ ಆಶಯ ವ್ಯಕ್ತಪಡಿಸಿ, ಮುದ್ರಾಡಿ ಕ್ಷೇತ್ರದ ಜತೆಗೆ ಇರುವುದಾಗಿ ತಿಳಿಸಿದರು.
ಶ್ರೀ ಕ್ಷೇತ್ರ ಮುದ್ರಾಡಿಯ ಅಧ್ಯಕ್ಷರಾದ ಡಾ. ಬಜಗೋಳಿ ರವೀಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾನ್ ಶಕ್ತಿಗಳ ಪ್ರೇರಣೆಯಿಂದಾಗಿ ಇಂದು ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರ ಬೆಳಗುತ್ತಿದೆ. ಮೋಹನ್ ಸ್ವಾಮೀಜಿ ಭಕ್ತರ ಮನದಲ್ಲಿ ನೆಲೆಯಾಗಿದ್ದಾರೆ. ತುಳುನಾಡಿನ ಅಪರೂಪದ ಶ್ರೀ ಕ್ಷೇತ್ರ ಮುದ್ರಾಡಿಯು ಬೆಳಗಲಿದೆ ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ ಇಚ್ಛಾಶಕ್ತಿ ಇದ್ದರೆ ಸಾಧನೆಗೆ ಪ್ರೇರಣೆಯಾಗುತ್ತದೆ ಎನ್ನುವುದಕ್ಕೆ ಮೋಹನ್ ಸ್ವಾಮೀಜಿಯವರೇ ಸಾಕ್ಷಿಯಾಗಿದ್ದಾರೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ನೀಡುವ ಸಹಾಯ ಎಲ್ಲಕ್ಕಿಂತ ಮಿಗಿಲಾದುದು ಎಂದು ಸಂಪತ್ ಕುಮಾರ್ ಶೆಟ್ಟಿಯವರ ಜನಸೇವೆಯನ್ನು ಸ್ಮರಿಸಿದರು.
ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗಣಪತಿ ಮುದ್ರಾಡಿ ಮಾತನಾಡಿ ಧರ್ಮಭೂಮಿಗೆ ನೀಡಬೇಕಾದ ಸರ್ವಸೇವೆಯನ್ನೂ ಮೋಹನ್ ಸ್ವಾಮೀಜಿ ನೀಡಿ ಸರ್ವರ ಮನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ.ಶ್ರೀ ಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ಧರ್ಮಯೋಗಿ ಸುಕುಮಾರ್ ಮೋಹನ್ ಆಶೀರ್ವಚನ ನೀಡಿದರು.
ಮುದ್ರಾಡಿ ಶ್ರೀ ಅಭಯಹಸ್ತೆ ಆದಿಶಕ್ತಿ ಹಾಗೂ ನಂದಿಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಧರ್ಮಯೋಗಿ ಮೋಹನ್ ಸ್ವಾಮೀಜಿಯವರ ೫ನೇ ಆರಾಧನಾ ಮಹೋತ್ಸವದಲ್ಲಿ ದೇಶದ ಪ್ರತಿಷ್ಠಿತ ಕ್ಯಾಶ್ಯೂ ಉದ್ಯಮಿ ಮಂದಾರ್ತಿ ಸಂಪತ್ ಕುಮಾರ್ ಶೆಟ್ಟಿ ಅವರಿಗೆ ” ಧರ್ಮಯೋಗಿ ಸನ್ಮಾನ ” ಪ್ರಧಾನ ಮಾಡಲಾಯಿತು.
ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಮುದ್ರಾಡಿ, ರಂಗ ನಿರ್ದೇಶಕರಾದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಗದೀಶ ಜಾಲ ಬೆಂಗಳೂರು, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್ ಸಹಿತ ವಿವಿಧ ಗಣ್ಯರು, ಪ್ರಮುಖರು, ಭಕ್ತ ಸಮೂಹದವರು ಉಪಸ್ಥಿತರಿದ್ದರು.
ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಶ್ರೀಕ್ಷೇತ್ರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದರು.
ಜಗದೀಶ ಜಾಲ ನಿರೂಪಿಸಿ ಸ್ವಾಗತಿಸಿದರು.



