ಹೆಬ್ರಿ : ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗ, ಜೇಸಿಐ ಹೆಬ್ರಿ ಹಾಗೂ ರೋಟರಿ ಗ್ರಾಮೀಣ ದಳ ಹೆಬ್ರಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ದಂತ ತಪಾಸಣಾ ಶಿಬಿರ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಜೇಸಿಐ ಹೆಬ್ರಿ ಅಧ್ಯಕ್ಷ ಸತೀಶ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಬ್ರಿ ರೋಟರಿ ಗ್ರಾಮೀಣ ದಳದ ಗೌರವಾಧ್ಯಕ್ಷ ರಾಮಕೃಷ್ಣ ಆಚಾರ್, “ಪ್ರತಿಯೊಬ್ಬರೂ ದಂತದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದು ಅಗತ್ಯ. ವಿದ್ಯಾರ್ಥಿ ದೆಸೆಯಲ್ಲೇ ಇಂತಹ ಆರೋಗ್ಯಕಾರಿ ಮಾಹಿತಿ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳಿಗೆ ಬಹಳಷ್ಟು ಉಪಯೋಗವಾಗುತ್ತದೆ,” ಎಂದು ಹೇಳಿದರು.
ಉಪಪ್ರಾಂಶುಪಾಲ ದಿವಾಕರ ಎಸ್. ಮರಕಾಲ ಮಾತನಾಡಿ, “ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಆರೋಗ್ಯವೇ ಮೂಲ. ಇಂತಹ ಉಪಯುಕ್ತ ತಪಾಸಣಾ ಹಾಗೂ ಮಾಹಿತಿ ಶಿಬಿರವನ್ನು ಆಯೋಜಿಸಿದ ಜೇಸಿಐ ಹೆಬ್ರಿ ಮತ್ತು ರೋಟರಿ ಗ್ರಾಮೀಣ ದಳದ ಸಂಸ್ಥೆಗಳ ಕಾರ್ಯ ಅಭಿನಂದನಾರ್ಹ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಗ್ರಾಮೀಣ ದಳದ ಗೌರವಾಧ್ಯಕ್ಷ ರಾಮಕೃಷ್ಣ ಆಚಾರ್, ಉಪಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್, ಮಣಿಪಾಲ ದಂತ ಮಹಾವಿದ್ಯಾಲಯ (ಮಾಹೆ) ವೈದ್ಯರಾದ ಡಾ. ಅಂಕಿತಾ, ಎಸ್ಡಿಎಮ್ಸಿ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ,ಗ್ರಾಮೀಣ ರೋಟರಿ ದಳದ ಅಧ್ಯಕ ಕೃಷ್ಣರಾಜ ಭಟ್, ಹಿರಿಯ ಶಿಕ್ಷಕರಾದ ಲಕ್ಷಾಧಿನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಣಿಪಾಲ ದಂತ ಮಹಾವಿದ್ಯಾಲಯ (ಮಾಹೆ )ಯ ವೈದ್ಯರ ತಂಡದಿಂದ ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಲಾಯಿತು ಹಾಗೂ ಹಲ್ಲಿನ ಆರೈಕೆ ಮತ್ತು ಶುಚಿತ್ವದ ಕುರಿತು ಉಪಯುಕ್ತ ಮಾಹಿತಿ ನೀಡಲಾಯಿತು. ಪ್ರಣತಿ ಪಿ.ಶೆಟ್ಟಿ ಜೇಸಿವಾಣಿ ವಾಚಿಸಿದರು. ಮಂಜುನಾಥ್ ಕುಲಾಲ್ ವೇದಿಕೆಗೆ ಆಹ್ವಾನಿಸಿದರು. ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು.


