ಹೆಬ್ರಿ : ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಐಕ್ಯುಎಸಿ ಮತ್ತು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ 1 ವಾರದ ಜೀವನ ಕೌಶಲ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭ ಶನಿವಾರ ಕಾಲೇಜಿನಲ್ಲಿ ಜರಗಿತು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ರಾಜೇಂದ್ರ ಕಿಣಿ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ‘ಬದಲಾವಣೆಯತ್ತ ಒಂದು ಹೆಜ್ಜೆ’ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಲಯನ್ಸ್ ಕ್ಲಬ್ ಸದಸ್ಯರ ಮತ್ತು ಕಾಲೇಜಿನ ಸಹಕಾರವನ್ನು ಸ್ಮರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್. ಮಾತನಾಡಿ, ವಿದ್ಯಾರ್ಥಿಗಳು ತಾವು ಪಡೆದ ಜ್ಞಾನ ಮತ್ತು ಕೌಶಲ್ಯವನ್ನು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹಳೆ ವಿದ್ಯಾರ್ಥಿ ಮಿಥುನ್ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು.
1 ವಾರದ ಕಾಲ 12 ವಿವಿಧ ವಿಷಯದ ಪರಿಣಿತರು ಇಂದಿನ ಜೀವನ ಕೌಶಲ್ಯಕ್ಕೆ ಬೇಕಾಗುವ ತರಬೇತಿ ಮತ್ತು ಉಪನ್ಯಾಸವನ್ನು ನೀಡಿದರು. ಕಾಲೇಜಿನ ವಿದ್ಯಾರ್ಥಿ ವೇದಿಕೆಯ ಸಂಚಾಲಕಿ ಸುಷ್ಮಾ ರಾವ್, ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಜ್ಯೋತಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಾಲಿನಿ, ಖಜಾಂಚಿ ಭಾರ್ಗವಿ ಭಟ್, ಪೂರ್ವಾಧ್ಯಕ್ಷ ಪಟ್ಟಾಭಿರಾಮ್, ಸದಸ್ಯರಾದ ಸಂಜೀವ ಆರ್ಡಿ, ಲಿಯೋ ಕ್ಲಬ್ ವಿದ್ಯಾರ್ಥಿ ನಾಯಕ ಆಕರ್ಷ, ಕಾರ್ಯದರ್ಶಿ ಪ್ರಜ್ಞಾ, ಖಜಾಂಚಿ ಕಾರ್ತಿಕ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಪ್ರವೀಣ ಶೆಟ್ಟಿ ಸ್ವಾಗತಿಸಿ, ಐಕ್ಯುಎಸಿ ಸಂಚಾಲಕ ಡಾ. ಗಣೇಶ್ ಎಸ್. ವಂದಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ನಿರೂಪಿಸಿದರು.


