ದಶಕಗಳ ಬಳಿಕ ಮುಂಬೈ ಮಹಾನಗರದಲ್ಲಿ ನಡೆಯಲಿರುವ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಯಕ್ಷಗಾನ ಪ್ರೇಮಿಗಳ ಸೌಭಾಗ್ಯವಾಗಿದ್ದು, ಈ ಸುಸಂದರ್ಭವನ್ನು ಸಮರ್ಪಕವಾಗಿ ಬಳಸಿಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಕರೆ ನೀಡಿದರು.
ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಅ.3 ಮತ್ತು 4ರಂದು ನಡೆಯಲಿರುವ ಯಕ್ಷಗಾನ ಸಮ್ಮೇಳನದ ಯಶಸ್ಸಿನ ಕುರಿತು ಚರ್ಚಿಸಲು ಸೆ.27ರಂದು ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕೇವಲ ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರೊಬ್ಬರ ಶ್ರಮ ಸಾಕಾಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ನೀಡಿ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸ್ವಾಗತ ಸಮಿತಿಯ ಕಾರ್ಯದರ್ಶಿ ಅಶೋಕ್ ಪಕ್ಕಳ, ಸಮ್ಮೇಳನಕ್ಕಾಗಿ ರಚಿಸಲಾದ ವಿವಿಧ ಉಪಸಮಿತಿಗಳ ಸದಸ್ಯರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಯಕ್ಷಗಾನವು ನಮ್ಮೆಲ್ಲರಿಗೂ ಪ್ರಿಯವಾದ ಕಲೆಯಾಗಿದ್ದು, ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಸಂಘಟನೆಯ ಕಾರ್ಯದರ್ಶಿ ನವೀನ್ ಶೆಟ್ಟಿ ಇನ್ನ ಬಾಳಿಕೆ ಕಾರ್ಯಕ್ರಮದ ಯಶಸ್ಸಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸಮ್ಮೇಳನದ ಸಿದ್ಧತೆಗಳ ವಿವರಗಳನ್ನು ಸಭೆಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು.
ಸಭೆಯಲ್ಲಿ ವಿವಿಧ ಉಪಸಮಿತಿಗಳ ಸದಸ್ಯರು ಹಾಗೂ ಯಕ್ಷಗಾನ ಅಭಿಮಾನಿಗಳು ಉಪಸ್ಥಿತರಿದ್ದು ಸಲಹೆ-ಸೂಚನೆಗಳನ್ನು ನೀಡಿದರು.
ವಿವಿಧ ಕಾರ್ಯಕ್ರಮಗಳ ಆಯೋಜನೆ
ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಯಕ್ಷಗಾನ ಪ್ರದರ್ಶನ, ಗೊಂಬೆಯಾಟ, ಕೃತಿ ಬಿಡುಗಡೆ, ಯಕ್ಷಗಾನ ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರೊಂದಿಗೆ ‘ರಜತ ಯಕ್ಷ ರಕ್ಷಾ ಕಲಾ ಪ್ರಶಸ್ತಿ’, ‘ಮಾತೃಶ್ರೀ ರಜತ ಯಕ್ಷ ರಕ್ಷ ಕಲಾ ಪ್ರಶಸ್ತಿ’ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ಜೀವನ ಸಮರ್ಪಿಸಿದ ಗಣ್ಯರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.



