Sunday, October 18, 2026
Homeಹೆಬ್ರಿಯುಕೆ ಬಂಟ್ಸ್‌ ಸಂಘದಿಂದ ಹೆಬ್ರಿ ರೋಹಿತ್‌ ಶೆಟ್ಟಿ ಲಂಡನ್‌ ಅವರಿಗೆ ಗೌರವ ಪ್ರಶಸ್ತಿ.

ಯುಕೆ ಬಂಟ್ಸ್‌ ಸಂಘದಿಂದ ಹೆಬ್ರಿ ರೋಹಿತ್‌ ಶೆಟ್ಟಿ ಲಂಡನ್‌ ಅವರಿಗೆ ಗೌರವ ಪ್ರಶಸ್ತಿ.

ಹೆಬ್ರಿ :  ಯುಕೆ ಬಂಟ್ಸ್‌ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿರುವ ಹೆಬ್ರಿ ಮೂಲದ ರೋಹಿತ್‌ ಶೆಟ್ಟಿ ಲಂಡನ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಹಿತ್ ಅವರು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸಮರ್ಪಣಾ ಮನೋಭಾವದಿಂದ ಓಟದ ಅಭ್ಯಾಸ ಮಾಡುತ್ತಿದ್ದು, ೩ ಪೂರ್ಣ ಮ್ಯಾರಥಾನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವುಗಳಲ್ಲಿ ೨ ಲಂಡನ್ ಮ್ಯಾರಥಾನ್‌ಗಳೂ ಸೇರಿವೆ. ಇಷ್ಟು ದೀರ್ಘಕಾಲ ಓಟದಲ್ಲಿ ತೊಡಗಿಸಿಕೊಂಡಿರುವ ಅವರ ಬದ್ಧತೆಯು ಅಪಾರ ಶಿಸ್ತು, ತಾಳ್ಮೆ, ನಿರಂತರ ಪ್ರಯತ್ನ ಮತ್ತು ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.

ಈ ವರ್ಷ, ತಮ್ಮ ಮ್ಯಾರಥಾನ್ ಪ್ರಯಾಣವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ರೋಹಿತ್ ಅವರು ನ್ಯಾಷನಲ್ ಆಟಿಸ್ಟಿಕ್ ಸೊಸೈಟಿಗಾಗಿ ನಿಧಿ ಸಂಗ್ರಹಿಸಿದ್ದಾರೆ. ಈ ಮೂಲಕ ಆಟಿಸಂ ಹೊಂದಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ನೆರವು ನೀಡಲು ಸಹಕರಿಸಿದ್ದಾರೆ. ಸಮಾಜಸೇವೆ, ಸಂಘಟನೆ, ಸದಸ್ಯತನ ಹೆಚ್ಚಳ, ಕ್ರೀಡೆ ಸಹಿತ ಹಲವು ಸಮಾಜಮುಖಿ ಸೇವೆಯಲ್ಲಿ ರೋಹಿತ್‌ ಶೆಟ್ಟಿ ಸಕ್ರೀಯರಾಗಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ, ಸಮರ್ಪಣೆ ಹಾಗೂ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಬದ್ಧತೆ ಸೇರಿ ಹಲವು ಬಹುಮುಖ ಸಾಧನೆಗಾಗಿ ರೋಹಿತ್ ಶೆಟ್ಟಿ ಅವರನ್ನು ಬಂಟ್ಸ್ ಸಂಘ ಯುಕೆ ಗೌರವಿಸಿದೆ.

ರೋಹಿತ್ ಶೆಟ್ಟಿ ಅವರನ್ನು ಬಂಟ್ಸ್ ಸಂಘ ಯುಕೆ ಸಾಧಕರಾಗಿ ನಾಮನಿರ್ದೇಶನ ಮಾಡಲು ನನಗೆ ಅಪಾರ ಸಂತೋಷವಾಗುತ್ತಿದೆ ಎಂದು ನಾಮನಿರ್ದೇಶನ ಮಾಡಿದ ಅಭಿನಂದನಾ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ಮೂಲದ ಅಮೆರಿಕನ್ ಖ್ಯಾತ ರಕ್ತನಾಳ ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯಕೀಯ ಕ್ಷೇತ್ರದ ನವೀನ ಆವಿಷ್ಕಾರಕರು ಹಾಗೂ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಂಟ ಸಮುದಾಯದ ನಾಯಕರಾದ ನ್ಯೂಯಾರ್ಕ್‌ ನ ಡಾ. ದಿನಕರ ಬೆಳ್ಳೆ ರೈ ಅವರು ಬಂಟ್ಸ್ ಸಂಘ ಯುಕೆ ವಾರ್ಷಿಕ ಸಮಾವೇಶ 2026 ರಲ್ಲಿ ಗೌರವಿಸಿದರು. ರೋಹಿತ್‌ ಶೆಟ್ಟಿ ಅವರು ಜನಪರ ಹೋರಾಟಗಾರ ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರದ ಹಿರಿಯ ಮುಖಂಡ ಹೆಬ್ರಿಯ ನೀರೆ ಕೃಷ್ಣ ಶೆಟ್ಟಿ ಮತ್ತು ಚಾರ ರಮಣಿ ಶೆಟ್ಟಿ ಅವರ ಪ್ರಥಮ ಪುತ್ರ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!