ಮುದ್ರಾಡಿ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಹೆಸರಿದೆ: ಮುದ್ರಾಡಿ ಮಂಜುನಾಥ ಪೂಜಾರಿ.
ಮುದ್ರಾಡಿ : ಮುದ್ರಾಡಿ ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಮುದ್ರಾಡಿ ಗ್ರಾಮ ಪಂ.ಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಆಡಳಿತಾಧಿಕಾರಿ ಮಿಥುನ್ ಕೆ.ಜಿ. ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಸಿಆರ್ಪಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಗ್ರಾಮ ಸಭೆಯಲ್ಲಿ ನಾರಾಯಣಗುರು ಅಭಿವೃಧ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಭಾಗವಹಿಸಿ ಮುದ್ರಾಡಿ ಗ್ರಾಮ ಪಂಚಾಯಿತಿಯು ಉತ್ತಮ ಪಂಚಾಯಿತಿಯಾಗಿ ಹೆಸರು ಪಡೆದಿದ್ದು, ಈ ಹೆಗ್ಗಳಿಕೆಯನ್ನು ಮುಂದುವರಿಸಿಕೊಂಡು ಗ್ರಾಮೀಣ ಭಾಗದ ಸಮಗ್ರ ಅಭಿವೃಧ್ಧಿಗೆ ಪೂರಕವಾಗಿ ಲಭ್ಯ ಅನುದಾನಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠನಾ ಮಾಡಬೇಕಾಗಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪರ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಸೌಕರ್ಯಗಳ ಸುಧಾರಣೆ, ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ, ಚರಂಡಿಗಳ ದುರಸ್ತಿ ಮತ್ತು ಸ್ವಚ್ಛತೆ, ಬೀದಿದೀಪಗಳ ಅಳವಡಿಕೆ ಹಾಗೂ ಸಮರ್ಪಕ ನಿರ್ವಹಣೆ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾಷ್ ಖಾರ್ವಿ ಮಾಹಿತಿ ನೀಡಿದರು.
ನೀರಿನ ಅಭಾವ ಹೆಚ್ಚಾಗುವುದರಿಂದ ನೀರು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು ‘ಸ್ವಚ್ಛ ಇ-ಸೇವಾ’ ಅನುಷ್ಠಾನಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಗ್ರಾಮ ಆಡಳಿತಾಧಿಕಾರಿ ಗಿರೀಶ್ ರೈ ಆಧಾರ್ ಸೀಡಿಂಗ್ ಕುರಿತು ಮಾಹಿತಿ ನೀಡಿ, ಗ್ರಾಮದಲ್ಲಿ ಬಾಕಿ ಇರುವ ಅಕ್ರಮ-ಸಕ್ರಮದಡಿ 53, 57, 50ರ ಅರ್ಜಿಗಳ ಸ್ಥಳ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ಅರಣ್ಯ ಇಲಾಖೆಯ ಅಧಿಕಾರಿ ಗೋವಿಂದ್ ಪಠಾಗಾರ ಇಲಾಖಾ ಮಾಹಿತಿ ನೀಡಿದರು. ಈ ವೇಳೆ ಗ್ರಾಮಸ್ಥರು, ಕಬ್ಬಿನಾಲೆ ಭಾಗದಲ್ಲಿ ಅರಣ್ಯ ಇಲಾಖೆಯು ಎಲ್ಲೆಂದರಲ್ಲಿ ಬೆತ್ತದ ಗಿಡಗಳನ್ನು ನೆಡುತ್ತಿದ್ದು ಇದರಿಂದ ಯಾರಿಗೂ ಉಪಯೋಗವಿಲ್ಲ; ಅದರ ಬದಲು ಹಣ್ಣು ಬಿಡುವ ಗಿಡಗಳನ್ನು ನೆಟ್ಟರೆ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿ ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗುತ್ತದೆ ಎಂದು ರಘುರಾಮ ಗೌಡ ಸಲಹೆ ನೀಡಿದರು. ಮುದ್ರಾಡಿಯಲ್ಲಿ ಅಪಾಯಕಾರಿ ಮರಗಳನ್ನು ಕಡಿಯಲಾಗಿದ್ದು, ಕಡಿದ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಸನ್ನ ಭಟ್ ಮಾಹಿತಿ ನೀಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವಕ್ಕೆ ಕೈಗೊಂಡ ಕ್ರಮಗಳನ್ನು ತಿಳಿಸಿದರು. ಬೋರ್ವೆಲ್ ರಿಚಾರ್ಜ್ ಕುರಿತು ಮಾಹಿತಿ ನೀಡಿ, ಜನರಿಗೆ ನೀರಿನ ಮಿತಬಳಕೆಯ ಅರಿವು ಮೂಡಿಸಬೇಕು ಎಂದರು. ಸಭೆಯಲ್ಲಿ ನಿವೃತ್ತ ಪಶು ವೈದ್ಯ ನಾಗೇಶ್ ಪೈ, ಯೂನಿಯನ್ ಬ್ಯಾಂಕ್ ಪ್ರಬಂಧಕ ರವಿರಾಜ್, ಆರೋಗ್ಯ ಇಲಾಖೆಯ ಉಷಾ ಹೆಗ್ಡೆ ಹಾಗೂ ಕೃಷಿ ಇಲಾಖೆಯ ಅಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಗ್ರಾಮಸ್ಥರ ವಿವಿಧ ಅಹವಾಲುಗಳನ್ನು ಈ ಸಂದರ್ಭದಲ್ಲಿ ಸ್ವೀಕರಿಸಲಾಯಿತು.
ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ ಇಲಾಖೆಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ಗ್ರಾಮಸ್ಥರಾದ ಸಂತೋಷ ಶೆಟ್ಟಿ ಹುಣ್ಸೆಜೆಡ್ಡು ಒತ್ತಾಯಿಸಿದರು.
ಗ್ರಾಮ ಸಭೆಯಲ್ಲಿ 2026-27ನೇ ಸಾಲಿನ ಸ್ವಂತ ಸಂಪನ್ಮೂಲ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಶೇ 25ರ ನಿಧಿಯಡಿ ಶೈಕ್ಷಣಿಕ ಸಹಾಯಧನ ಚೆಕ್ವಿತರಿಸಿದರು. ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಮಾಜಿ ಜನ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರುʼ
ಸಭೆಯನ್ನು ಪಂಚಾಯಿತಿ ಸಿಬ್ಬಂದಿ ಪದ್ಮನಾಭ ಕುಲಾಲ್ ನಿರೂಪಿಸಿ ವರದಿ ಮಂಡಿಸಿದರು, ಪಿಡಿಒ ಸುಭಾಷ್ ಖಾರ್ವಿ ಸ್ವಾಗತಿಸಿದರು.



