ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಮೃತಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆ ಹಾಗೂ ಸ್ವಚ್ಛತಾ ಅಭಿಯಾನದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ ಎಲ್ಲರಿಗೂ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿ ಮಹಾತ್ಮ ಗಾಂಧೀಜಿಯವರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದ ವಿಚಾರಗಳನ್ನು ಪುನರುಚ್ಚರಿಸಿದರು.
“ಸ್ವಚ್ಛತೆ ನಮ್ಮ ನಿತ್ಯದ ಕಾಯಕವಾಗಬೇಕು. ಪ್ರತಿಯೊಬ್ಬರೂ ತಮ್ಮನ್ನು ತಾವೇ ಪೌರಕಾರ್ಮಿಕರೆಂದು ಭಾವಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು” ಎಂದು ಪ್ರಕಾಶ್ ಜೋಗಿ ಕರೆ ನೀಡಿದರು.
ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ಗಾಂಧೀಜಿಯವರ ಆದರ್ಶಗಳು ವಿಶ್ವದ ಅನೇಕ ದೇಶಗಳಿಗೂ ಪ್ರೇರಣೆಯಾಗಿವೆ ಎಂದರು. ನುಡಿದಂತೆ ನಡೆದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಅನುಕರಣೀಯವಾಗಿದ್ದು, ಸರಳತೆ ಮತ್ತು ದೇಶಸೇವೆಯ ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಅನುಸೂಯ ಮಲ್ಯ ಅವರು ಗಾಂಧೀಜಿ ಹಾಗೂ ಶಾಸ್ತ್ರಿಯವರ ನೈತಿಕ ಮೌಲ್ಯಗಳು ಮತ್ತು ಜೀವನಾದರ್ಶಗಳ ಮಹತ್ವವನ್ನು ವಿವರಿಸಿದರು. ಶಾಸ್ತ್ರಿಯವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಯ ಸೇವೆಯ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಸಂಸ್ಥೆಯ ವತಿಯಿಂದ ಸ್ವಚ್ಛತಾ ರಾಯಭಾರಿಗಳಾದ ಸಿಬ್ಬಂದಿಗಳಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಸಲಾಯಿತು. ಶಾಲಾ ಕಾಲೇಜು
ವಿದ್ಯಾರ್ಥಿಗಳು ಗಾಂಧೀಜಿಯವರ ಪ್ರಿಯವಾದ ಭಜನ್ ಗಳ ಮೂಲಕ ಭಕ್ತಿ ಭಾವದಿಂದ ಹಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸತೀಶ್ ಪೈ, ಅಮೃತಭಾರತಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟಿಗಳಾದ ಸುಧೀರ್ ನಾಯಕ್, ಹಾಸ್ಟೆಲ್ ಸಮಿತಿ ಸದಸ್ಯರಾದ ರಾಮಕೃಷ್ಣ ಆಚಾರ್, ಅಮೃತಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ್, ವಿದ್ಯಾಲಯದ ಮುಖ್ಯಶಿಕ್ಷಕಿ ಅಪರ್ಣ ಆಚಾರ್, ಶಕುಂತಲಾ ಹಾಗೂ ಕ್ಯಾಂಪಸ್ ಮೇಲ್ವಿಚಾರಕ ವಿಜಯಕುಮಾರ್ ಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಚಂದ್ರಕಲಾ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ವೇದಿಕೆ ಕಾರ್ಯಕ್ರಮದ ನಂತರ ಸಿಹಿ ವಿತರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು.




