Monday, August 10, 2026
Homeನಾಡ್ಪಾಲು ಗ್ರಾಮ ಪಂಚಾಯತ್‌ಸೋಮೇಶ್ವರ ಪೇಟೆ ಶಾಲೆ : ಖಾಯಂ ಶಿಕ್ಷಕರಿಲ್ಲದೆ ಶಾಲೆಗೆ ಮಕ್ಕಳನ್ನು ಕಳುಹಿಸದ ಪೋಷಕರು; ಕಾಯಂ ಶಿಕ್ಷಕರ...

ಸೋಮೇಶ್ವರ ಪೇಟೆ ಶಾಲೆ : ಖಾಯಂ ಶಿಕ್ಷಕರಿಲ್ಲದೆ ಶಾಲೆಗೆ ಮಕ್ಕಳನ್ನು ಕಳುಹಿಸದ ಪೋಷಕರು; ಕಾಯಂ ಶಿಕ್ಷಕರ ನಿಯೋಜನೆ ಆಗುವ ತನಕ ಶಾಲೆಗೆ ಕಳುಹಿಸದಿರಲು ತೀರ್ಮಾನ

ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸುಮಾರು 123 ವರ್ಷಗಳ ಇತಿಹಾಸವಿರುವ ಸೋಮೇಶ್ವರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ಹೆತ್ತವರು ಹಾಗೂ ಎಸ್. ಡಿ. ಎಂ. ಸಿ ಸದಸ್ಯರೆಲ್ಲ ಸೇರಿ ಬುಧವಾರ ಶಾಲೆಗೆ ಮಕ್ಕಳನ್ನು ಕಳುಹಿಸದೆ, ಬಂದ್ ಮಾಡಿಸಿರುವ ಘಟನೆ ನಡೆದಿದೆ.

ತೀರಾ ಗ್ರಾಮೀಣ ಪ್ರದೇಶವಾದ ನಾಡ್ಪಾಲು ಗ್ರಾಮದ ದೊಡ್ಡ ಶಾಲೆಯಾದ ಸೋಮೇಶ್ವರ ಪೇಟೆ ಶಾಲೆಯು ಉತ್ತಮ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ಮಾದರಿ ಶಾಲೆಯಾಗಿ ಮೂಡಿಬಂದಿರುತ್ತದೆ. ಇಲ್ಲಿ 31 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜೂನ್ 30 ರಂದು ಇದ್ದ ಒಬ್ಬ ಖಾಯಂ ಶಿಕ್ಷಕರು ನಿವೃತ್ತಿಯಾದರು. ನಂತರ ಶಾಲೆಯಲ್ಲಿ 3 ಅತಿಥಿ ಶಿಕ್ಷಕರಿಂದ ಶಾಲೆ ನಡೆಸುವ ಪರಿಸ್ಥಿತಿ ಉಂಟಾಗಿದೆ. ಶಾಲೆ ನಡೆಸುವ ಬಗ್ಗೆ ಯಾವುದೇ ಖಾಯಂ ಶಿಕ್ಷಕರ ನಿಯೋಜನೆ ಆಗಿಲ್ಲ. ಖಾಯಂ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗುವ ಭಯದಲ್ಲಿ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಹೋದರೆ ಶಾಲೆ ಮುಚ್ಚುವ ಭೀತಿ ಉಂಟಾಗಿದೆ.

ಕಾಯಂ ಶಿಕ್ಷಕರ ನೇಮಕಾತಿ ಆಗುವ ತನಕ, ಶಾಲೆಗೆ ಕಳುಹಿಸುವುದಿಲ್ಲ: ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಬಗ್ಗೆ ಆತಂಕಗೊಂಡಿರುವ ಪೋಷಕರು ಹಾಗೂ ಎಸ್ ಡಿ ಎಂ ಸಿ ಯವರು ಶಾಲೆಗೆ ಪರಿಪೂರ್ಣ ಖಾಯಂ ಶಿಕ್ಷಕರ ನೇಮಕಾತಿ ಆಗುವ ತನಕ ಶಾಲೆಗೆ ಕಳಿಸುವುದಿಲ್ಲ ಎಂದು ನಿರ್ಣಯ ಮಾಡಿದ್ದಾರೆ.

ಜುಲೈ 02 ಇಂದು ಪ್ರತಿಭಟನೆ : ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿ ವಿಚಾರ ಬಗ್ಗೆ ಜುಲೈ 02 ರ ಗುರುವಾರ ಸಾರ್ವಜನಿಕರೆಲ್ಲ ಸೇರಿ ಬೃಹತ್ ಪ್ರತಿಭಟನೆಯನ್ನು ನಡೆಸುವುದಾಗಿ ತೀರ್ಮಾನಿಸಿದ್ದಾರೆ.

ವಾರಕ್ಕೆ ಒಂದು ದಿನ ಬೇಡ : ವಾರದಲ್ಲಿ ಒಂದು ದಿನ ಬಂದು ಖಾಯಂ ಶಿಕ್ಷಕರು ನಮ್ಮಲ್ಲಿ ಬೇಡ. ನಮಗೆ ವಾರದ 6 ದಿನ ಕೂಡ ಶಿಕ್ಷಕರ ಇರಬೇಕು.

ಗ್ರಾಮೀಣ ಭಾಗದ ಶಾಲೆಯನ್ನು ಉಳಿಸಲು ಊರಿನವರೆಲ್ಲ ಪಣತೊಟ್ಟಿದ್ದಾರೆ. ನಮ್ಮ ಬೇಡಿಕೆಯನ್ನು ಮನ್ನಿಸಬೇಕು ಎಂದು ಎಸ್‍ಡಿಎಂಸಿ ಅಧ್ಯಕ್ಷೆ ನಾಗಲಕ್ಷ್ಮಿ ಮನವಿ ಮಾಡಿದ್ದಾರೆ.

….

ಖಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಸೋಮೇಶ್ವರ ಪೇಟೆ ಶಾಲೆಗೆ ಖಾಯಂ ಶಿಕ್ಷಕರ ನಿಯೋಜನೆಯನ್ನು ಶೀಘ್ರದಲ್ಲಿ ಮಾಡಬೇಕು. ಇದು ನಾಡ್ಪಾಲು ಗ್ರಾಮಸ್ಥರ ಹಕ್ಕೊತ್ತಾಯವಾಗಿದೆ. ಶತಮಾನದ ಇತಿಹಾಸ ಇರುವ ಶಾಲೆಯಲ್ಲಿ 31 ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ ಕುಂಠಿತವಾಗಲು ಇಲಾಖೆಯವರು ಕಾರಣರಾಗಬಾರದು. ನಮ್ಮ ಮನವಿಯನ್ನು ಮನ್ನಿಸಿ ಸೂಕ್ತ ಕ್ರಮವನ್ನು ಜರುಗಿಸಬೇಕು.

ದಿನೇಶ ಹೆಗ್ಡೆ.

ಹಳೆ ವಿದ್ಯಾರ್ಥಿ ಹಾಗೂ ಮಾಜಿ ಅಧ್ಯಕ್ಷರು, ನಾಡ್ಪಾಲು ಗ್ರಾಮ ಪಂಚಾಯತಿ

 

…..

ಖಾಯಂ ಶಿಕ್ಷಕರು ನಿವೃತ್ತಿಯಾದ ಹಿನ್ನೆಲೆಯಲ್ಲಿ, ಒಬ್ಬ ಕಾಯಂ ಶಿಕ್ಷಕರನ್ನು ನಿಯೋಜನೆ ಮಾಡಿ ಅಲ್ಲಿ ನಡೆದ ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸಲು ವಾರಕ್ಕೆ ಒಂದು ಸಲ ಬರಲು ತಿಳಿಸಲಾಗಿದೆ. ಖಾಯಂ ಶಿಕ್ಷಕರನ್ನು ತಕ್ಷಣವೇ ನಿಯೋಜನೆ ಮಾಡಲು ನಮಗೆ ಅಧಿಕಾರವಿಲ್ಲ. ಈಗಾಗಲೇ 3 ಜನ ಆತಿಥಿ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರು ಸಹಕಾರ ನೀಡಬೇಕು.

ಗಿರಿಜಮ್ಮ, ಬಿ.ಇ.ಒ, ಕಾರ್ಕಳ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments