ಹೆಬ್ರಿ: ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಗುರುವಾರ ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಸೇರಿ ಗುರುವಾರ ಶಾಲೆಯಲ್ಲಿ ಪ್ರತಿಭಟನೆ ನಡೆಸಿದರು. ಅತಿಥಿ ಶಿಕ್ಷಕರಿಂದ ಶಾಲೆಯು ನಡೆಯುವುದಿಲ್ಲ. ಸರ್ಕಾರಿ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಖಾಯಂ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಕಲಿಕೆಯ ತೊಂದರೆಯಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ನಮಗೆ ಆತಂಕವಿದೆ ಎಂದು ನಾಡ್ಪಾಲು ಗ್ರಾಮದ ಪ್ರಮುಖರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹೇಳಿದರು.
ಶಿಕ್ಷಣ ಇಲಾಖೆಯು ಖಾಯಂ ಶಿಕ್ಷಕರನ್ನು ನೇಮಿಸುವ ಬಗ್ಗೆ ಯಾವುದೇ ಸ್ಪಂದನೆ ನೀಡದೆ ಇರುವುದರಿಂದ ಪೋಷಕರು ಹಾಗೂ ಹಳೇ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು ಸ್ಥಳಕ್ಕೆ ಶಿಕ್ಷಣಾಧಿಕಾರಿಗಳು ಬರುವಂತೆ ಪಟ್ಟು ಹಿಡಿದು ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಪೋಷಕರ ಮನವೊಲಿಸಿ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು.
ಖಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಸೋಮೇಶ್ವರ ಪೇಟೆ ಶಾಲೆಗೆ ಖಾಯಂ ಶಿಕ್ಷಕರ ನಿಯೋಜನೆಯನ್ನು ಶೀಘ್ರದಲ್ಲಿ ಮಾಡಬೇಕು ಎಂದು ಹಳೇ ವಿದ್ಯಾರ್ಥಿಯಾಗಿರುವ ನಾಡ್ಪಾಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ ಹೆಗ್ಡೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು, ನಾಡ್ಪಾಲು ಗ್ರಾಮ ಪಂಚಾಯತಿ ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಳೆ ವಿದ್ಯಾರ್ಥಿಗಳು ಸ್ಥಳೀಯರು, ನಾಡ್ಪಾಲಿನ ಪ್ರಮುಖರಾದ ದಿನೇಶ ಹೆಗ್ಡೆ, ಜಗದೀಶ ಹೇರಳೆ, ವೆಂಕಟೇಶ ಶೆಟ್ಟಿ, ರಂಗನಾಥ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
…..
ಸೋಮೇಶ್ವರ ಶಾಲೆಯ ಪೋಷಕರನ್ನು ಮನವೋಲಿಸಿದ್ದೇವೆ. ನಾಳೆಯಿಂದ ಮಕ್ಕಳನ್ನು ಶಾಲೆಗೆ ಕಳಿಹಿಸುತ್ತಾರೆ. ಮೇಲಾಧಿಕಾರಿಗಳ ಅನುಮತಿ ಪಡೆದು ವಾರಕ್ಕೆ ೩ ಸಲ ಸರ್ಕಾರಿ ಶಿಕ್ಷಕರ ನಿಯೋಜನೆ ಮಾಡಲಾಗುವುದು. ಗ್ರಾಮಸ್ಥರು ಸಹಕಾರ ನೀಡಬೇಕು. 3 ಜನ ಆತಿಥಿ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
– ಗಿರಿಜಮ್ಮ, ಬಿ.ಇ.ಒ, ಕಾರ್ಕಳ.



