ಮರದ ರೂಪದಲ್ಲಿ ಕಾಡಿದ ಯಮರಾಯ….
ಹೆಬ್ರಿ : ಹೆಬ್ರಿಯ ಬ್ರಹ್ಮಾವರ ರಸ್ತೆಯ ಮೂರು ರಸ್ತೆ ಹುತ್ತುರ್ಕೆ ಬಳಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಮೃತರಾದ ದುರ್ಧೈವಿ ಬ್ರಹ್ಮಾವರ ತಾಲ್ಲೂಕಿನ 38ನೇ ಕಳ್ತೂರು ಗ್ರಾಮದ ದರ್ಖಾಸು ಮನೆಯ ನಿವಾಸಿ ಸದಾನಂದ ನಾಯಕ್.
ಸದಾನಂದ ನಾಯಕ್ ಯಾವೂದೋ ಪಾರ್ಸೆಲನ್ನು ಬಸ್ಸಿಗೆ ಹಾಕಲು ಹೆಬ್ರಿಗೆ ಬರುವಾಗ ಮರದ ರೂಪದಲ್ಲಿ ಕಾಡಿದ ಯಮರಾಯ ಸದಾನಂದ ನಾಯಕ್ ಅವರನ್ನು ಬಲಿ ತೆಗೆದುಕೊಂಡಿತು.

ಅಜೆಕಾರಿನಲ್ಲಿ ಎಲೆಕ್ಟ್ರಾನಿಕ್ ಶಾಪ್ ನಡೆಸುತ್ತಿದ್ದರು.
ಜನಾನುರಾಗಿಯಾಗಿದ್ದ ಸದಾನಂದ ನಾಯಕ್ ಎಲ್ಲರಿಗೂ ಬೇಕಾದವರಾಗಿದ್ದು. ಹಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಎಲೆಕ್ಟ್ರಾನಿಕ್ ಶಾಪ್ ನಡೆಸುತ್ತಿದ್ದರು.
ಬಳಿಕ ಶಾಪ್ ಬಂದ್ ಮಾಡಿ ಮನೆಯಲ್ಲೇ ಕೃಷಿ ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು.
ಅವರ ಹೈನುಗಾರಿಕೆಯ ವಿಡಿಯೋ ತುಣುಕು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಸದಾನಂದ ನಾಯಕ್.
ತನ್ನ ಇಬ್ಬರೂ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿದ್ದರು ಸದಾನಂದ ನಾಯಕ್. ಪ್ರತಿಭಾವಂತರಾದ ಮಗ ಕಲಿತು ಎಂಜಿನಿಯರ್ ಆಗಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಅಷ್ಟೇ
ಎಲ್ ಎಲ್ ಬಿ ಪದವಿ ಪಡೆದಿರುವ ಮಗಳು ವಕೀಲರಾಗುವ ಸಿದ್ಧತೆಯಲ್ಲಿದ್ದರು.
ಪತ್ನಿ ಮಗಳೊಂದಿಗೆ ಸದಾನಂದ ನಾಯಕ್ ಕಳ್ತೂರಿನಲ್ಲಿ ವಾಸವಿದ್ದರು.
ಇತ್ತೀಚೆಗೆ ಹೊಸ ಕಾರು ಖರೀದಿಸಿದ್ದರು !
ಆಮ್ನಿ ಕಾರು ಹೊಂದಿರುವ ಸದಾನಂದ ನಾಯಕ್ ಮಗ ಎಂಜಿನಿಯರ್ ಆಗಿ ಉದ್ಯೋಗ ಪಡೆದ ಬಳಿಕ ಇತ್ತೀಚೆಗೆ ಮಗನಿಗಾಗಿ ಹೊಸ ಕಾರು ಖರೀದಿಸಿದ್ದರು. ಮಗನ ಕಾರಿನಲ್ಲೇ ಇಂದು ಸದಾನಂದ ನಾಯಕ್ ಹೆಬ್ರಿಗೆ ಬಂದಿದ್ದರು.
ಇಂದು ಸಂಜೆ ಮಗ ಮನೆ ಬರುವವರಿದ್ದರು. ದುರ್ದೈವ ತಂದೆಯ ನೋಡಲು ಬರಬೇಕಾಯಿತು.
ಇಂದು ಅಂತ್ಯ ಕ್ರೀಯೆ.
ಮೃತರಾದ ಸದಾನಂದ ನಾಯಕ್ ಅವರ ಮೃತದೇಹವನ್ನು ಹೆಬ್ರಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಶವಗಾರ ಇರಿಸಲಾಗಿದೆ.
ಇಂದು ಶನಿವಾರ ಮಹಜರು ನಡೆಸಿದ ಬಳಿಕ ಅಂತ್ಯ ಸಂಸ್ಕಾರದ ಕಾರ್ಯಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಗಳು – ಪತ್ನಿ..
ಘಟನೆಯ ಸುದ್ದಿಯನ್ನು ತಿಳಿದ ಕೂಡಲೇ ಪತ್ನಿ ಮತ್ತು ಮಗಳು ಸ್ಥಳಕ್ಕೆ ಧಾವಿಸಿ ಬಂದಿದ್ದರು. ಅವರ ಆಕ್ರಂಧನ ಮನಕಲುಕುವಂತಿತ್ತು.
ಐಎಎಸ್ ಅಧಿಕಾರಿ ಸದಾಶಿವ ಪ್ರಭು ಸಂಬಂಧಿ.
ಮೃತ ಸದಾನಂದ ನಾಯಕ್ ನಿವೃತ್ತ ಐಎಎಸ್ ಅಧಿಕಾರಿ ಎಳ್ಳಾರೆ ಸದಾಶಿವ ಪ್ರಭು ಅವರ ಹತ್ತಿರದ ಸಂಬಂಧಿಯಾಗಿದ್ದು ಸದಾಶಿವ ಪ್ರಭು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ವ್ಯವಸ್ಥೆ ಮಾಡಲು ನೆರವಾಗಿದ್ದಾರೆ.
ಮೃತದೇಹವನ್ನು ಹೊರ ತೆಗೆಯಲು ಸಾಹಸ ಮಾಡಿದ ಯುವಕರ ತಂಡ.
ಮರ ಬಿದ್ದು ನುಜ್ಜುಗುಜ್ಜಾಗಿದ್ದ ಕಾರಿನಿಂದ ಶವವನ್ನು ಹೊರ ತೆಗೆಯಲು ಕುಚ್ಚೂರು ಶ್ರೀಕಾಂತ್ ಪೂಜಾರಿ, ದಿವಾಕರ ಪೂಜಾರಿ ಸಹಿತ ಸ್ಥಳೀಯ ಯುವಕರ ತಂಡ ಮಳೆಯ ನಡುವೆಯೇ ಸಾಹಸ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು, ಪೋಲಿಸರು ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದ್ದರು. ನೂರಾರು ಮಂದಿ ಕ್ಷಣಾರ್ಧದಲ್ಲಿ ಜಮಾಯಿಸಿದ್ದರು.
ಹಲವಾರು ವಿದ್ಯುತ್ ಕಂಬಗಳು ಧರೆಗೆ.
ಬೃಹತ್ ಮರ ವಿದ್ಯುತ್ ಸರಬರಾಜು ಲೈನ್ ಮೇಲೆ ಬಿದ್ದಿದ್ದರಿಂದ ಹಲವಾರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ. ವಿದ್ಯುತ್ ಕಂಬಗಳು ಬೀಳವಾಗ ದೊಡ್ಡ ಮಟ್ಡದ ಬೆಂಕಿ ಕಾಣಿಸಿ ಕೊಂಡಿದೆ.
ತಕ್ಷಣವೇ ಎಲ್ಲರೂ ಸೇರಿ ಮರವನ್ನು ತೆರವು ಗೊಳಿಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮೃತದೇಹ ಸಂಪೂರ್ಣವಾಗಿ ಅಪ್ಪಚ್ಚಿಯಾಗಿ ಕರುಳು ಹಿಂಡುವ ರೀತಿಯಿತ್ತು.
ವಿದ್ಯುತ್ ಕಂಬಗಳು ತುಂಡಾದ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಿದೆ. ದುರಸ್ತಿ ಕಾರ್ಯ ನಡೆಯುತ್ತಿದೆ.
ಘಟನೆಯನ್ನು ವಿವರಿಸಿದ ಪ್ರತ್ತಕ್ಷದರ್ಶಿಗಳು!
ಸಂಜೆಯ ಹೊತ್ತು ಆಗಿದ್ದರಿಂದ ವಾಹನ ಸಂಚಾರ ದಟ್ಟಣೆಯಿತ್ತು. ಸದಾನಂದ ನಾಯಕ್ ಅವರ ಕಾರಿನ ಹಿಂದಿನಿಂದ ಸ್ಕೂಟರ್ ನಲ್ಲಿ ನಾನು ಬರುತ್ತಿದ್ದೆ. ಅವರು ನಿಧಾನವಾಗಿ ಬರುತ್ತಿದ್ದರು. ಅವರ ಕಾರು ಪಾಸ್ ಆಗುವಾಗಲೇ ಮರ ಬಿತ್ತು. ಒಂದು ಅರ್ಧ ಸೆಕುಂಡ್ ಹೆಚ್ಚು ಕಮ್ಮಿ ಆಗುತ್ತಿದ್ದರೆ ನನ್ನ ಮೇಲೆ ಬೀಳುತ್ತಿತ್ತು ಎಂದು ಕಳ್ತೂರು ಕಡೆಯಿಂದ ಹೆಬ್ರಿಗೆ ಬರುತ್ತಿದ್ದಾಗ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯಾಗಿದ್ದ ಶಿಕ್ಷಕರೊರ್ವರು ” ಹೆಬ್ರಿ ನ್ಯೂಸ್ ” ಗೆ ಕರೆ ಮಾಡಿ ಮಾಹಿತಿ ನೀಡಿದರು.
ಮರ ಬಿದ್ದ ಘಟನೆ ನನ್ನ ಕಣ್ಣೇದುರೇ ಆಗಿದೆ ಎಣಿಸುವಾಗ ಮೈ ಜುಮ್ಮೆನ್ನುತ್ತದೆ. ನಾನು ನನ್ನ ಮಗನನ್ನು ಹೆಬ್ರಿ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ಘಟನೆ ಸಂಭವಿಸಿದೆ. ಸದಾನಂದ ನಾಯಕ್ ಅವರ ಮನೆಯ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ನಮ್ಮ ಪರಿಚಯದವರ ಮೂಲಕ ಸದಾನಂದ ನಾಯಕ್ ಅವರ ಮನೆಗೆ ವಿಚಾರ ತಲುಪಿಸಿದ್ದೇನೆ ಎಂದು ಮಾರಾಳಿಯ ವೀಣಾ ಆಚಾರ್ ಘಟನೆ ನೆನೆದು ಕಣ್ಣೀರಾದರು.
ವಿದ್ಯುತ್ ಕಂಬ ತುಂಡಾಗಿ ಬೀಳುವಾಗ ಹಲವರಿಗೆ ವಿದ್ಯುತ್ ವಯರ್ ಬಡಿದಿದೆ ಎಂದು ಘಟನೆಯನ್ನು ವಿವರಿಸಿದರು.
ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ.
ಘಟನೆ ಸಂಭವಿಸುತ್ತಿದ್ದಂತೆ ಅರಣ್ಯ ಇಲಾಖೆಯ ವಿರುದ್ಧ
ಆಕ್ರೋಶ ವ್ಯಕ್ತವಾಗಿದೆ. ರಸ್ತೆಯ ಇಕ್ಕೆಲಗಳ ಅಪಾಯಕಾರಿ ಮರಗಳನ್ನು ತೆರವು ಮಾಡಲು ಲಿಖಿತ ಮನವಿ ನೀಡಿದ್ದರೂ ಅಧಿಕಾರಿಗಳು ಗಮನ ನೀಡದೇ ಮಾರ್ಗದಲ್ಲಿ ಹೋಗುವವರು ಜೀವವನ್ನು ಕಳೆದುಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಿದ್ದಾರೆ.
ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ, ಬೇಳಂಜೆ ರವಿ, ಮುದ್ರಾಡಿ ಪ್ರಶಾಂತ್ ಪೈ ಸಹಿತ ಹಲವರು ಅರಣ್ಯಾಧಿಕಾರಿಗಳಿಗೆ ಅಪಾಯಕಾರಿ ಮರಗಳ ತೆರವಿಗೆ ಮನವಿ ನೀಡಿದ್ದರು. 2 ದಿನಗಳ ಹಿಂದೆಯಷ್ಟೇ ಹೆಬ್ರಿಯ ನೂತನ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ವರಂಗ ವೀಣಾ ಆರ್ ಭಟ್ ನೇತ್ರತ್ವದಲ್ಲಿ ಅಪಾಯಕಾರಿ ಮರಗಳ ತೆರವಿಗೆ ಮನವಿ ನೀಡಲಾಗಿತ್ತು. ಎರಡೇ ದಿನದಲ್ಲಿ ಘಟನೆ ಸಂಭವಿಸಿದೆ. ಅರಣ್ಯಾಧಿಕಾರಿಯವರು ಅಪಾಯಕಾರಿ ಮರಗಳ ಪಟ್ಟಿಯನ್ನು ನೀಡುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲವೆಡೆ ಅಪಾಯಕಾರಿ ಮರಗಳು.
ಹೆಬ್ರಿ ಕಾರ್ಕಳ ರಸ್ತೆ, ಹೆಬ್ರಿ ಕುಂದಾಪುರ ರಸ್ತೆ, ಹೆಬ್ರಿ ಬ್ರಹ್ಮಾವರ ರಸ್ತೆ, ಹೆಬ್ರಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸೇರಿ ಎಲ್ಲಾ ರಸ್ತೆಯ ಇಕ್ಕೆಲಗಳಲ್ಲೂ ಬೀಳುವ ಹಂತದ, ರಸ್ತೆಗೆ ಬಾಗಿರುವ, ಸತ್ತು ಹೋಗಿರುವ ಅಪಾಯಕಾರಿ ಮರಗಳಿದ್ದು ಅರಣ್ಯ ಇಲಾಖೆಯವರೇ ಸ್ವಯಂಪ್ರೇರಿತವಾಗಿ ತೆರವು ಮಾಡುವಂತೆ ಹಲವರು ಒತ್ತಾಯಿಸಿದ್ದಾರೆ.

ಪೈಪ್ ಲೈನ್ ಕಾಲುವೆಯಿಂದ ಸಮಸ್ಯೆ…!
ರಸ್ತೆಯ ಪಕ್ಕದಲ್ಲಿ ಇತ್ತೀಚೆಗೆ ವಾರಾಹಿ ನೀರು ಸರಬರಾಜು ಮತ್ತು ಜಲಜೀವನ್ ಮಿಷನ್ ನೀರಿನ ಯೋಜನೆಗಾಗಿ ದೊಡ್ಡಗಾತ್ರದ ಪೈಪ್ ಲೈನ್ ಮಾಡಲು ಬೃಹತ್ ಕಾಲುವೆ ತೋಡಿ ಪೈಪ್ ಹಾಕಲಾಗಿದೆ. ಇದರಿಂದ ಮರಗಳ ಬುಡಗಳು ಅಗೆದ ಮಣ್ಣಿನಿಂದ ಗಟ್ಟಿಯಾಗಿರದೆ ವಾಲಿದ ಮರಗಳು ಬೀಳುತ್ತಿವೆ ಎಂದು ಹಲವರು ಹೇಳುತ್ತಾರೆ.
ಅರಣ್ಯ ಇಲಾಖೆಯೇ ಸರ್ವೆ ಮಾಡಲಿ.
ವಲಯ ಅರಣ್ಯ ವ್ಯಾಪ್ತಿಯಲ್ಲಿ ವಲಯ ಅರಣ್ಯಾಧಿಕಾರಿಗಳ ಹಂತದಲ್ಲೇ ಅಪಾಯಕಾರಿ ಮರಗಳ ಸರ್ವೆ ನಡೆಸಿ ಸ್ವಯಂಪ್ರೇರಿತವಾಗಿ ಅರಣ್ಯ ಅಧಿಕಾರಿಗಳ ನೇತ್ರತ್ವದಲ್ಲಿಯೇ ಅಪಾಯಕಾರಿ ಮರಗಳ ತೆರವು ಕಾರ್ಯ ಮಾಡಿ ಅಮಾಯಕ ಜೀವಗಳನ್ನು ಉಳಿಸಿ ಎಂದು ಪ್ರಗತಿಪರ ಹೋರಾಟಗಾರ ಮಿಥುನ್ ಶೆಟ್ಟಿ ಚಾರ ಬಾವಿಗದ್ದೆ ಮನೆ ಒತ್ತಾಯಿಸಿದ್ದಾರೆ.


