Thursday, September 24, 2026
Homeಹೆಬ್ರಿಭಾರತೀಯ ರೆಡ್ ಕ್ರಾಸ್ ಸಂಸ್ಥೆ- ಹೆಬ್ರಿ ಶಾಖೆಯ ಉದ್ಘಾಟನೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ಹೆಬ್ರಿ ಶಾಖೆಯ ಉದ್ಘಾಟನೆ.

ಹೆಬ್ರಿ ತಾಲೂಕು ಶಾಖೆಯು ಬಲಿಷ್ಠಗೊಂಡು ಸಂಸ್ಥೆಯ ಮೂಲ ತತ್ವಗಳನ್ನು ಪರಿಪಾಲಿಸಿ ಸಮಾಜಕ್ಕೆ ಸೇವೆ ನೀಡಲಿ.- ಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ.

ಹೆಬ್ರಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಹೆಬ್ರಿ ತಾಲೂಕು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾ ಭವನದಲ್ಲಿ
ಬುಧವಾರ ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ. ಮಾತನಾಡಿ ಹೆಬ್ರಿ ಶಾಖೆಯ ಕಾರ್ಯವೈಖರಿ ಯಿಂದಾಗಿ ಹೆಬ್ರಿಯಲ್ಲಿ ತಾಲೂಕು ಶಾಖೆಯು ಬಲಿಷ್ಠಗೊಂಡು ಸಂಸ್ಥೆಯ ಮೂಲ ತತ್ವಗಳನ್ನು ಪರಿಪಾಲಿಸಿ ಸಮಾಜಕ್ಕೆ ಸೇವೆ ಒದಗಿಸುವಲ್ಲಿ ಸ್ವಯಂ ಸೇವಕರಾಗಿ ಸೇವೆ ಮಾಡುವುದರ ಮೂಲಕ ಕಾರ್ಯನಿರ್ವಹಿಸಲು ಸಮರ್ಥವಾಗಲಿ ಎಂದು ಶುಭ ಹಾರೈಸಿ ಪದಾಧಿಕಾರಿಗಳಿಗೆ, ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿ ಪದ ಪ್ರಧಾನ ನೆರವೇರಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯವರು ಮತ್ತು ಕಾರ್ಯದರ್ಶಿಯವರು ಹೆಬ್ರಿ ತಾಲೂಕಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಶಾಖೆಯ ಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ಮಾರ್ಗದರ್ಶನ ನೀಡಿದ ಫಲವಾಗಿ ಅತ್ಯಲ್ಪ ಕಾಲದಲ್ಲಿ 65 ಮಂದಿಗೂ ಮಿಕ್ಕಿ ಈಗಾಗಲೇ ಸದಸ್ಯತನ ಹೊಂದಿ ಆಜೀವ ಸದ್ಯಸ್ಯರಾಗಿ ಹೆಬ್ರಿಯಲ್ಲಿ ಬಲಿಷ್ಠವಾದ ರೆಡ್ ಕ್ರಾಸ್ ಶಾಖೆಯ ಸ್ಥಾಪನೆಯಾಗಿ ಉದ್ಘಾಟನೆಗೊಂಡಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರ್ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯ ಉಗಮ, ವಿಶ್ವ ವ್ಯಾಪಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಗಳ ಸ್ಥಾಪನೆ, ಮೂಲ ತತ್ವಗಳು, ಸೇವಾ ಚಟುವಟಿಕೆಗಳು ರೆಡ್ ಕ್ರಾಸ್ ಲಾಂಛನ, ಯುವ ರೆಡ್ ಕ್ರಾಸ್, ಆಜೀವ ಸದಸ್ಯತನ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಉದ್ಯಮಿ ಯೋಗೀಶ್ ಭಟ್ ಹೆಬ್ರಿ, ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ಕೊಡುಗೈದಾನಿ ವಿದ್ವಾನ್ ರಾಘವೇಂದ್ರ ಭಟ್, ಹೆಬ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಚಂದ್ರ ಎ. ಕೆ ಉಪಸ್ಥಿತರಿದ್ದು ಮಾತನಾಡಿದರು.

ಹೆಬ್ರಿ ರೆಡ್ ಕ್ರಾಸ್ ಶಾಖೆಯ ಉಪಸಭಾಪತಿ ಡಾ. ವಿದ್ಯಾಧರ ಹೆಗ್ಡೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ನೂತನ ಸಭಾಪತಿ ವೀಣಾ ಆರ್. ಭಟ್ ವಹಿಸಿ ಮಾತನಾಡಿ ಹೆಬ್ರಿಯಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶನದಂತೆ ನಾವು ಮೊದಲು ಹೆಬ್ರಿಯಲ್ಲಿ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿಸಲು ಪೂರ್ವಭಾವಿ ಸಭೆ ಜರಗಿಸಿದ್ದು, ಅಪಾರ ಜನ ಬೆಂಬಲ ದೊರೆತ ಕಾರಣ ಸಂಸ್ಥೆ ಸ್ಥಾಪಿಸಲು ಸಾಧ್ಯವಾಯಿತು. ನಮ್ಮ ಗುರಿ 500 ಕ್ಕೂ ಮಿಕ್ಕಿ ಆಜೀವ ಸದಸ್ಯರನ್ನು ಸಂಸ್ಥೆಗೆ ಸೇರ್ಪಡೆಗೊಳಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಮೂಲ ತತ್ವಗಳನ್ನು ಅರಿತು ಸದಸ್ಯರಾಗಿ ಸೇರಲು ಬಯಸಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೆಬ್ರಿ ತಾಲೂಕಿನ ಆಯ್ದ ಬಡ ಕುಟುಂಬಗಳಿಗೆ ಸಂಸ್ಥೆಯಿಂದ 10 ಟಾರ್ಪಲ್ ಮತ್ತು 5 ಸೆಟ್ ಅಡುಗೆ ಪಾತ್ರೆ ಗಳನ್ನು ವಿತರಿಸಲಾಯಿತು.

ಮುದ್ರಾಡಿ ಗ್ರಾಮ ಉಪ್ಪಳದ ಅಶಕ್ತ ಶಾರದ ಶೆಟ್ಟಿಗಾರ್ ರವರಿಗೆ ದಾನಿ ಕಾಡುಹೊಳೆ ರಾಘವೇಂದ್ರ ಭಟ್ ಕೊಡುಗೆಯಾಗಿ ನೀಡಿದ ಸುಮಾರು 8000 ಮೌಲ್ಯದ ವೀಲ್ ಚೈರ್ ನ್ನು ನೀಡಲಾಯಿತು. ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರಕ್ಕೆ 2 ಸೆಟ್ ಒಕ್ಸಿಜನ್ ಮೀಟರ್ ನ್ನು ಕೊಡುಗೆಯಾಗಿ ನೀಡಲಾಯಿತು.

ಭಾರತೀಯ ರೆಡ್ ಕ್ರಾಸ್ ಶಾಖೆಯ ಎಲ್ಲಾ ಪದಾಧಿಕಾರಿಗಳಿಗೆ, 11 ಮಂದಿ ನಿರ್ದೇಶಕರಿಗೆ, ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿ ಲೈಫ್ ಮೆಂಬರ್ ಸರ್ಟಿಫಿಕೇಟ್ ನೀಡಲಾಯಿತು. ನಿರ್ದೇಶಕರಾದ ಪ್ರವೀಣ್ ಶೆಟ್ಟಿ ವೇದಿಕೆಗೆ ಅಹ್ವಾನಿಸಿದರು. ಕಾರ್ಯದರ್ಶಿ ಪ್ರಶಾಂತ್ ಪೈ ಸ್ವಾಗತಿಸಿದರು. ಹೆಬ್ರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ನಾಡ ಗೀತೆ ಹಾಡಿದರು. ನಿರ್ದೇಶಕ ಪ್ರಸಾದ್ ಶೆಟ್ಟಿ ನಿರೂಪಿಸಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ವಂದಿಸಿದರು. ಕಾರ್ಯಕಾರಿ ಮಂಡಳಿ ನಿರ್ದೇಶಕರು ಸದಸ್ಯರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!