ಶಿವಪುರ : ಶಿವಪುರ ಬಿಲ್ಲವರ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಭಾನುವಾರ ಶಿವಪುರದ ಶ್ರೀ ಶಂಕರ ಸಭಾಭವನದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗುರು ಪೂಜೆ, ವಿದ್ಯಾರ್ಥಿ ವೇತನ ವಿತರಣೆ, ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿವಾನಂದ ಸಾಲ್ಯಾನ್ ವಹಿಸಿದ್ದರು.
ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಾರಾಯಣ ಗುರುಗಳ ತತ್ವ ಸಿದ್ಧಾಂತದ ಬಗ್ಗೆ ಮಾತನಾಡಿದರು .
ಹೆಬ್ರಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಸಂಘದ ಗೌರವಾಧ್ಯಕ್ಷ ಶೇಖರ್ ಪೂಜಾರಿ, ಕಾರ್ಯದರ್ಶಿ ರಾಧಾಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ‘ಕನಸಿನ ಉದ್ಯೋಗ ಪಡೆಯಲು ಸಿದ್ಧತೆ ಹೇಗಿರಬೇಕು?’
ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ‘ಐಎಎಸ್ ದರ್ಶನ್’ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅಕಾಡೆಮಿಯ ಸಂಸ್ಥಾಪಕ ದರ್ಶನ್ ಚಂದ್ರಶೇಖರ್ ಅವರು ‘ಕನಸಿನ ಉದ್ಯೋಗ ಪಡೆಯಲು ನಮ್ಮ ಸಿದ್ಧತೆ ಹೇಗಿರಬೇಕು?’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯುವಜನರು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವ್ಯವಸ್ಥಿತವಾಗಿ ಸಿದ್ಧತೆ ನಡೆಸಬೇಕು. ಶಿಕ್ಷಣದ ಜೊತೆಗೆ ಸಮಯದ ಸದ್ಬಳಕೆ, ನಿರಂತರ ಪರಿಶ್ರಮ ಹಾಗೂ ಸೂಕ್ತ ಮಾರ್ಗದರ್ಶನವನ್ನು ಅಳವಡಿಸಿಕೊಂಡರೆ ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯ ಎಂದು ಅವರು ತಿಳಿಸಿದರು.
ಆಶಾ ಕಾರ್ಯಕರ್ತೆ ಬೇಬಿ ಪೂಜಾರಿ ಮತ್ತು ಮೇಘಾ ಅವರನ್ನು ಸನ್ಮಾನಿಸಲಾಯಿತು. ರಾಘವೇಂದ್ರ ಪೂಜಾರಿ ಸ್ವಾಗತಿಸಿ, ಸತೀಶ್ ಪೂಜಾರಿ ವಂದಿಸಿದರು.



