Wednesday, September 23, 2026
Homeಹೆಬ್ರಿಎಸ್ ಆರ್ ಪದವಿ ಪೂರ್ವ ಕಾಲೇಜು: ಹಿಂದಿ ದಿವಸ್ ಆಚರಣೆ

ಎಸ್ ಆರ್ ಪದವಿ ಪೂರ್ವ ಕಾಲೇಜು: ಹಿಂದಿ ದಿವಸ್ ಆಚರಣೆ

ಹೆಬ್ರಿ: ಎಸ್. ಆರ್. ಪಿಯು ಕಾಲೇಜು, ಹೆಬ್ರಿಯಲ್ಲಿ ಸೆಪ್ಟೆಂಬರ್ 11ರಂದು ಹಿಂದಿ ದಿವಸ್ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಎಚ್. ನಾಗರಾಜ್ ಶೆಟ್ಟಿ ಮಾತನಾಡಿ, “ಕನ್ನಡ ನಮ್ಮ ಮಾತೃಭಾಷೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ನಮ್ಮನ್ನು ಜಗತ್ತಿಗೆ ತೆರೆದುಕೊಳ್ಳಲು ಸಹಾಯ ಮಾಡುವ ವ್ಯವಹಾರಿಕ ಭಾಷೆಗಳಾಗಿವೆ. ಮಾತೃಭಾಷೆ ನಮ್ಮ ಹೃದಯದ ಭಾಷೆಯಾಗಿದ್ದು, ಅದರೊಂದಿಗೆ ಕೆಲವು ವ್ಯವಹಾರಿಕ ಭಾಷೆಗಳ ಕಲಿಕೆಯೂ ಮುಖ್ಯ” ಎಂದು ಹೇಳಿದರು. ಕನ್ನಡ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಉದ್ಘಾಟಕಿ, ಹೆರ್ಗಾ ವಿಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆ, ಕುಚ್ಚೂರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ ಮಾತನಾಡಿ, “ಕನ್ನಡ ನಮ್ಮ ಮಾತೃಭಾಷೆ ಎಂಬುದನ್ನು ಯಾವಾಗಲೂ ಮರೆಯಬಾರದು. ಅದರೊಂದಿಗೆ ಹಿಂದಿ ಭಾಷೆಯ ಕಲಿಕೆ ದೇಶದಾದ್ಯಂತ ಸಂವಹನ ನಡೆಸಲು ಸಹಕಾರಿಯಾಗಿದೆ. ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ಸದಾ ಉನ್ನತವಾಗಿರುತ್ತದೆ. ನೀವು ಉತ್ತಮ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದೀರಿ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನೀವು ಎಲ್ಲೇ ಇದ್ದರೂ ನೀವು ಕಲಿತ ಸಂಸ್ಥೆಯನ್ನು ಮರೆಯಬಾರದು” ಎಂದು ಸಲಹೆ ನೀಡಿದರು.

ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಸಪ್ನಾ ಎನ್. ಶೆಟ್ಟಿ ಮಾತನಾಡಿ, “ಭಾಷೆಯ ಅಧ್ಯಯನದ ಮೂಲಕ ಇಡೀ ಪ್ರಪಂಚದೊಂದಿಗೆ ಉತ್ತಮವಾಗಿ ವ್ಯವಹರಿಸಲು ಸಾಧ್ಯ. ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯುವ ಮೂಲಕ ತಮ್ಮ ಜ್ಞಾನ ಹಾಗೂ ಸಂವಹನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬೇಕು” ಎಂದರು.

ಕಾರ್ಯಕ್ರಮದಲ್ಲಿ ಎಸ್. ಆರ್. ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ ಎಚ್. ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ವನಿತಾ ತೋಳಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ದೀಪ್ತಿ ಆಚಾರ್ಯ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಣತಿ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!