Wednesday, September 23, 2026
Homeಹೆಬ್ರಿಮಂಗಳೂರಿನಲ್ಲಿ ಸರ್ಕಾರದ ಸಚಿವ ಸಂಪುಟ ಸಭೆ: ಕರಾವಳಿ ಜಿಲ್ಲೆಯ ಜನರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನವಾಗಲಿ-...

ಮಂಗಳೂರಿನಲ್ಲಿ ಸರ್ಕಾರದ ಸಚಿವ ಸಂಪುಟ ಸಭೆ: ಕರಾವಳಿ ಜಿಲ್ಲೆಯ ಜನರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನವಾಗಲಿ- ನೀರೆ ಕೃಷ್ಣ ಶೆಟ್ಟಿ

ಡೀಮ್ಡ್‌ ಫಾರೆಸ್ಟ್‌, ಅರಣ್ಯ ಸಮಸ್ಯೆ, ಹಕ್ಕುಪತ್ರ, ಆಗುಂಬೆಘಾಟಿ ಸೇರಿ ಹಲವು ವಿಚಾರಗಳ ಬಗ್ಗೆ ನಿರ್ಧಾರ ಆಗಲಿ.

ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರದ ಸಚಿವ ಸಂಪುಟ ಸಭೆಯನ್ನು ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ನಡೆಸುವ ಐತಿಹಾಸಿಕ ತೀರ್ಮಾನವನ್ನು ಕೈಗೊಂಡು ಜನಮೆಚ್ಚುಗೆ ಪಡೆದಿದ್ದಾರೆ. ಇದರಿಂದ ಕರಾವಳಿ ಜಿಲ್ಲೆಯ ಜನರ ಬಹುದಿನಗಳ ಸಮಸ್ಯೆ, ಮೂಲ ಸೌಕರ್ಯಗಳನ್ನು ಪಡೆಯುವ ಹಕ್ಕಿಗೆ ಆದ್ಯತೆ ನೀಡಿ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಪ್ರಗತಿಪರ ಹೋರಾಟಗಾರರು, ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿಯವರು ಇಂಗ್ಲೆಂಡ್‌ ನಿಂದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಟುಂಬದೊಂದಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿರುವ ನೀರೆ ಕೃಷ್ಣ ಶೆಟ್ಟಿಯವರು “ಹೆಬ್ರಿ ನ್ಯೂಸ್”‌ ಜೊತೆ ಮಾತನಾಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಮ್ಕಿ ಹಕ್ಕು ಸಮಸ್ಯೆ: ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಕುಟುಂಬಗಳು ಕುಮ್ಕಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ತಾವು ವಾಸಿಸುವ ಮನೆ ಜಮೀನಿಗೆ ಕಾನೂನು ರಕ್ಷಣೆ, ಭೂದಾಖಲಾತಿ ಇಲ್ಲ, ಕುಮ್ಮಿ ಕಾನೂನು ಅವರಿಗೆ ತೊಡಕಾಗುತ್ತಿದೆ. ಇದರಿಂದ ನಿರಂತರ ಸಮಸ್ಯೆಗಳಾಗುತ್ತಿದೆ. ಕುಮ್ಕಿ ಕಾನೂನು ಸಡಿಲಗೊಳಿಸಿ ಕುಮ್ಕಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ. 30 ಸಾವಿರಕ್ಕೂ ಹೆಚ್ಚಿನ ಕುಟುಂಬಗಳಿಗೆ ಮನೆಮಂದಿಗೆ ನ್ಯಾಯ ದೊರಕಿಸಿಕೊಡಬೇಕು, ಹಕ್ಕುಪತ್ರಗಳು ದೊರೆಯುವಂತೆ ಮಾಡಬೇಕು ಎಂದು ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.

ಅಕ್ರಮಸಕ್ರಮ ಹಕ್ಕುಪತ್ರ ಗೊಂದಲ ನಿವಾರಿಸಿ : ಅಕ್ರಮಸಕ್ರಮ ಯೋಜನೆ 50, 53 ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಜಮೀನಿನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಅಂತಹ ಪ್ರಕರಣಗಳು ಕೂಡ ಸಾಕಷ್ಟು ವಿಲೇವಾರಿಗೆ ಬಾಕಿ ಇವೆ. ಅಕ್ರಸಕ್ರಮ ಸಮಿತಿಯ ಸಭೆಗಳೇ ನಡೆಯುತ್ತಿಲ್ಲ. ಫಲಾನುಭವಿಗಳಿಗೆ ಹಿಂದಿನ ದಾಖಲೆ ಒದಗಿಸಲು ಸಮಸ್ಯೆಯಾಗುತ್ತಿದೆ. ಕೃಷಿಯನ್ನು ಹೊರತುಪಡಿಸಿ ಮನೆಯನ್ನೇ ಮೂಲ ದಾಖಲೆಯಾಗಿ ಪರಿಗಣಿಸಿ ಈ ತನಕ ಬಾಕಿಯಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಅಕ್ರಮಸಕ್ರಮ ಫಲಾನುಭವಿಗಳಿಗೆ ನ್ಯಾಯ ನೀಡಿ ತಮ್ಮ ಜಮೀನಿನ ಹಕ್ಕುಪತ್ರ ನೀಡುವಂತೆ ನೀರೆ ಕೃಷ್ಣ ಶೆಟ್ಟಿಯವರು ಒತ್ತಾಯಿಸಿದ್ದಾರೆ.

94ಸಿ ಹಕ್ಕುಪತ್ರ ನೀಡಿ : ಕರಾವಳಿ ಜಿಲ್ಲೆಯಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ 94ಸಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಕುಟುಂಬಗಳು ಕೂಡ ತಮ್ಮ ಜಮೀನಿನ ಹಕ್ಕುಪತ್ರಕ್ಕಾಗಿ ಕಾಯುತ್ತಿವೆ, ಅವರಿಗೂ ಕಾನೂನು ತೊಡಕಾಗುತ್ತಿದೆ. ಇದಕ್ಕೂ ಕೂಡ ಐತಿಹಾಸಿಕ ತೀರ್ಮಾನ ಕೈಗೊಂಡು ಬಡಜನತೆಗೆ ನ್ಯಾಯ ದೊರಕಿಸಿಕೊಡುಬೇಕು.

ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ : ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಯಿಂದಾಗಿ ಕರಾವಳಿ ಜಿಲ್ಲೆ ಬಹುತೇಕ ಮಂದಿಗೆ ಜಮೀನಿನ ಹಕ್ಕುಪತ್ರಗಳನ್ನು ಪಡೆಯಲು ದೊಡ್ಡ ಸಮಸ್ಯೆಯಾಗುತ್ತಿದೆ. ಆ ಸಮಸ್ಯೆಯು ನಿರಂತರವಾಗಿ ಕಾಡುತ್ತಿದೆ. ಇದರಿಂದ ಅಭಿವೃದ್ದೀಗೂ ತೊಡಕಾಗುತ್ತಿದೆ. ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಯ ನಿವಾರಣೆಗೂ ತೀರ್ಮಾನ ಕೈಗೊಳ್ಳಬೇಕು.

ಮನೆಗಳಿಗೆ ವಿದ್ಯುತ್‌ ಸಂಪರ್ಕ : ಅಕ್ರಮಸರ್ಕ, 94ಸಿ ಯೋಜನೆ ಸಹಿತ ಹಲವು ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ಮನೆಯನ್ನು ಕಟ್ಟಿಕೊಂಡು ಕುಳಿತು ಇನ್ನೂ ಕೂಡ ವಿದ್ಯುತ್‌ ಸಂಪರ್ಕ ಪಡೆಯಲು ಭಾಕಿಯಿರುವ ನೂರಾರು ಕುಟುಂಬಗಳಿವೆ. ಅವರಿಗೆ ದಾಖಲೆಗಳ ಕೊರತೆಯಿಂದ ವಿದ್ಯುತ್‌ ಸಂಪರ್ಕ ದೊರೆಯುತ್ತಿಲ್ಲ. ಅಂತಹ ಕುಟುಂಗಳಿಗೆ ಒಂದು ಹಂತದಲ್ಲಿ ವಿದ್ಯುತ್‌ ಸಂಪರ್ಕ ಪಡೆಯಲು ತೀರ್ಮಾನವನ್ನು ಕೈಗೊಳ್ಳುಬೇಕು ಎಂದು ನೀರೆ ಕೃಷ್ಣ ಶೆಟ್ಟಿಯವರು ಮನವಿ ಮಾಡಿದ್ದಾರೆ.

ಅರಣ್ಯ ಕಂದಾಯ ಜಂಟಿ ಸರ್ವೆ ಸಮಗ್ರ ತೀರ್ಮಾನವಾಗಲಿ : 94ಸಿ, ಅಕ್ರಮಸಕ್ರಮ ಯೋಜನೆಯಲ್ಲಿ ಅರಣ್ಯ ಇಲಾಖೆಯ ಕಾನೂನಿನ ಹಲವು ಕಠಿಣ ನಿರ್ಧಾರಗಳಿಂದ ಹಲವಾರು ವರ್ಷಗಳಿಂದಲೂ ವಾಸವಿದ್ದರೂ, ಸಾಕಷ್ಟು ದಾಖಲೆ ಇದ್ದರೂ ಹಕ್ಕಪತ್ರಗಳು ಜನತೆಗೆ ದೊರೆಯುತ್ತಿಲ್ಲ. ಆರ್‌ ಟಿಸಿ ಯಲ್ಲಿ ಅರಣ್ಯ ಜಮೀನು ಇತ್ಯಾದಿ ನಮೂದು ಆಗಿರುವುದು ದೊಡ್ಡ ಸಮಸ್ಯೆಯಾಗಿದೆ. ಕಂದಾಯ ಜಮೀನು ಆಗಿದ್ದರೂ ಇದೇ ಸಮಸ್ಯೆ ಕಾಡುತ್ತಿದೆ. ಇದು ಜಿಲ್ಲೆಯ ಹೆಚ್ಚಿನ ಗ್ರಾಮಗಳಲ್ಲಿ ಇದೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಮೂಲಕ ಜಂಟಿ ಸರ್ವೆ ನಡೆಸಿ ಅರಣ್ಯ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ವಿರಹಿತಗೊಳಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ದೊರಕಿಸಬೇಕು.

ಕರಾವಳಿ ಜಿಲ್ಲೆಗೆ ರೈಲ್ವೇ ಯೋಜನೆ ರೂಪಿಸಿ : ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಪ್ರವಾಸೋಧ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಕ್ಷೇತ್ರಗಳ ಸಂದರ್ಶನಕ್ಕಾಗಿ ಉಡುಪಿ ಮಂಗಳೂರು ಜಿಲ್ಲೆಗೆ ಪ್ರತ್ಯೇಕ ರೈಲ್ವೆ ಯೋಜನೆಯನ್ನು ರೂಪಿಸಿ ರೈಲು ಸಂಚಾರ ಆಗುವಂತೆ ಮಾಡಿದರೆ, ಕರಾವಳಿ ಜಿಲ್ಲೆಯ ಜನ ಅತೀ ಸುಲಭದ ಸಂಚಾರ ಮಾಡಬಹುದು, ಅಂತರ್‌ ಜಿಲ್ಲಾ ಸಂಚಾರ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಕರಾವಳಿ ಜಿಲ್ಲೆಯು ಮತ್ತಷ್ಟು ಅಭಿವೃದ್ಧಿಯಾಗಲಿದೆ. ಪ್ರವಾಸೋಧ್ಯಮವೂ ಅಭಿವೃದ್ಧಿಯಾಗಲಿದೆ. ಉದ್ಯಮವೂ ಬೆಳೆದು ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.

ಕಸ್ತೂರಿ ರಂಗನ್‌ ವಿಚಾರ : ಕಸ್ತೂರಿರಂಗನ್‌ ವಿಚಾರವನ್ನೂ ಕೂಡ ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಜನರ ಆತಂಕವನ್ನು ದೂರಮಾಡಬೇಕು, ಜನರನ್ನು ಈಗಿನ ಹಾಗೇಯ ಬದುಕಲು ಬಿಡಬೇಕು, ಕೇರಳಂ ರಾಜ್ಯದ ಮಾದರಿಯಲ್ಲಿ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಿ ಮುಂದೆ ಜನತೆಗೆ ಯಾವೂದೇ ಯಾವೂದೇ ತೊಂದರೆ ಆಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು.

ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿ ಸಮಸ್ಯೆ ನಿವಾರಿಸಿ : ಅಂದು ಯುಪಿಎ ಸರ್ಕಾರ ಎಲ್ಲಾ ಗೊಂದಲಗಳನ್ನು ನಿವಾರಿಸಿ 169ಎ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಾಕಷ್ಟು ಅನುದಾನ ಮೀಸಲಿಟ್ಟು ಘೋಷಣೆ ಮಾಡಿದೆ. ಆದರೂ ಈ ತನಕ ರಾಷ್ಟ್ರೀಯ ಹೆದ್ದಾರಿ ಯೋಜನೆ ಪೂರ್ಣಗೊಂಡಿಲ್ಲ. ಆಗುಂಬೆ ಘಾಟಿಯ ವಿಚಾರವೇ ಎಲ್ಲಿಯೂ ಚರ್ಚೆಗೆ ಬರುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯನ್ನು ಮಾಡಿ ಉಡುಪಿಯಿಂದ ಆಗುಂಬೆ ಘಾಟಿಯ ಬುಡದ ತನಕ ಮತ್ತು ಘಾಟಿಯ ನಂತರದ ರಸ್ತೆಯನ್ನು ಹೆದ್ದಾರಿ ಮಾಡಿದರೇ ಅದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಇದರಿಂದಾ ಹೆದ್ದಾರಿಯಾಗಿ ಯಾವೂದೇ ಪ್ರಯೋಜನ ಆಗುವುದಿಲ್ಲ.

ಆಗುಂಬೆ ಘಾಟಿ ವಿಸ್ತರಣೆಯಾಗಬೇಕು, ಘನವಾಹನಗಳು ಆಗುಂಬೆ ಘಾಟಿಯಲ್ಲಿ ಸಂಚಾರ ಮಾಡುವಂತಾದರೆ ಮಾತ್ರ ಮಲೆನಾಡು ಮತ್ತು ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತಿದೆ. ಅತೀ ಸುಲಭವಾಗಿ ರಾಜಧಾನಿ ಬೆಂಗಳೂರು ಮತ್ತು ಮಲೆನಾಡು ಕರಾವಳಿ ಜಿಲ್ಲೆಯ ಸಂಕರ್ಪ ಸಾಧಿಸಲು ಸಾಧ್ಯವಾಗುತ್ತದೆ. ಪ್ರಸಾಸೋಧ್ಯಮವೂ ಬೆಳೆಯುತ್ತದೆ. ಅರಣ್ಯ ಇಲಾಖೆ ಸೇರಿ ಯಾವೂದೇ ಸಣ್ಣ ತೊಡಕುಗಳಿದ್ದರೂ ಎಲ್ಲವನ್ನೂ ನಿವಾರಸಿ ಆಗುಂಬೆ ಘಾಟಿಯನ್ನು ವಿಸ್ತರಿಸಿ ರಾಷ್ಟ್ರೀಯ ಹೆದ್ದಾರಿ ಮಾಡಿದಾಗ ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ಸಾರ್ಥಕವಾಗುತ್ತದೆ. ಈ ಬಗ್ಗೆ ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ತುರ್ತು ತೀರ್ಮಾನ ಕೈಗೊಳ್ಳಬೇಕು ಎಂದು ನೀರೆ ಕೃಷ್ಣ ಶೆಟ್ಟಿಯವರು ಮನವಿ ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹೆದ್ದಾರಿಗಾಗಿ ಬಿಡುಗಡೆ ಮಾಡಿದ ಅನುದಾನದಲ್ಲಿ ಆಗುಂಬೆ ಘಾಟಿಯ ವಿಚಾರ ಇಲ್ಲ. ಹೆಬ್ರಿಯಿಂದ ಆಗುಂಬೆ ಘಾಟಿಯ ತನಕದ ವಿಚಾರ ಮಾತ್ರ ಇದೆ. ಮುಖ್ಯಮಂತ್ರಿಗಳು ಕರಾವಳಿ ಜಿಲ್ಲೆಯ ಜನೋಪಯೋಗಿ ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಕರಾವಳಿ ಜಿಲ್ಲೆಗೆ ಸಚಿವ ಸಂಪುಟ ಸಭೆಯ ಮೂಲಕ ಅತ್ಯಂತ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು, ಆ ಮೂಲಕ ಕರಾವಳಿ ಜಿಲ್ಲೆ ಜನರ ಬಹುಕಾಲ ಬಹುನಿರೀಕ್ಷೆ ಬೇಡಿಕೆಯನ್ನು ಈಡೇರಿಸುವಂತೆ ಮಾಡಬೇಕು ಎಂದು ನೀರೆ ಕೃಷ್ಣ ಶೆಟ್ಟಿಯವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!