Wednesday, September 23, 2026
Homeಹೆಬ್ರಿಪಶ್ಚಿಮಘಟ್ಟಗಳ ಸುಡುವಾಸ್ತವ: ಅವನ್ನು ಎದುರಿಸುವ ಧೈರ್ಯ ಸರ್ಕಾರಕ್ಕಿದೆಯೆ?- ನಾಗೇಶ್ ಹೆಗಡೆ

ಪಶ್ಚಿಮಘಟ್ಟಗಳ ಸುಡುವಾಸ್ತವ: ಅವನ್ನು ಎದುರಿಸುವ ಧೈರ್ಯ ಸರ್ಕಾರಕ್ಕಿದೆಯೆ?- ನಾಗೇಶ್ ಹೆಗಡೆ

ಅಂಥ ಬೋಲ್ಡ್‌ ನಿಲುವನ್ನು ಈ ಸರ್ಕಾರ ತಳೆದೀತೆ? ನಾಲ್ಕು ದಿನ ಕಾದು ನೋಡಿ.

ನಾಗೇಶ್ ಹೆಗಡೆ – ಲೇಖಕರು – ಹಿರಿಯ ಪತ್ರಕರ್ತರು.

ಒಂದು ಸುಳ್ಳನ್ನು ಸಾವಿರಾರು ಜನರ ಕಿವಿಯಲ್ಲಿ ತುರುಕಿಬಿಟ್ಟರೆ ಆ ಅಷ್ಟೂ ಜನ ಕೂಗಿದ್ದೇ ಸತ್ಯವಾಗುತ್ತದೆ. ’ಕಸ್ತೂರಿ ರಂಗನ್‌ ವರದಿ ಬೇಡ‘ ಎಂಬ ಒಕ್ಕೊರಲಿನ ಕೂಗು ಹೀಗೇ ಎದ್ದಿದೆ. ಮಾಧ್ಯಮಗಳೂ ಅದಕ್ಕೆ ಲೌಡ್‌ಸ್ಪೀಕರ್‌ ಆಗಿವೆ.

ಮಾಧವ ಗಾಡ್ಗೀಳ್‌ ವರದಿಯನ್ನು ದುರ್ಬಲಗೊಳಿಸಲೆಂದೇ ಕಸ್ತೂರಿ ರಂಗನ್‌ ವರದಿಯನ್ನು ಕೇಂದ್ರ ಸರ್ಕಾರ ರಾಜ್ಯಗಳ ಮುಂದಿಟ್ಟಿದೆ. ಹಾಗಾಗಿ ಈಗಾಗಲೇ ಬಹುಪಾಲು ‘ಸಂರಕ್ಷಿತ ಪ್ರದೇಶ’ ಎಂದು ಗುರುತಿಸಲಾದ ಜಾಗವನ್ನಷ್ಟೇ ಸಂರಕ್ಷಣೆ ಮಾಡಬೇಕೆಂದು ವರದಿ ಹೇಳುತ್ತಿದೆ!

ಅದಕ್ಕೆ ‘ಪರಿಸರ ಸೂಕ್ಷ್ಮ ಪ್ರದೇಶ’ ESA ಎಂಬ ಹೊಸ ಹಣೆಪಟ್ಟಿ ಕಟ್ಟಿ ಅದರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಎಂದು ಹೇಳಿದೆ. ಏನಿದೆ ಸಮಸ್ಯೆ?

‘ಕಟ್ಟುನಿಟ್ಟಿನ ನಿಗಾ’ ಎಂದರೇನು? ಅವೂ ಹಳೆಯ ನಿಬಂಧನೆಗಳೇ! ಅಲ್ಲಿ ಗಣಿಗಾರಿಕೆ ಕೂಡದು. ಮರಳು ಎತ್ತುವ, ಗ್ರಾನೈಟ್‌ ಕ್ವಾರಿ ಇರಕೂಡದು. ಮರಳು ದಂಧೆ ಇರಕೂಡದು. ಈಗಾಗಲೇ ಅವೆಲ್ಲ ನಡೆಯುತ್ತಿದ್ದರೆ ಇನ್ನು ಐದು ವರ್ಷಗಳಲ್ಲಿ ಅವನ್ನೆಲ್ಲ ಬಂದ್‌ ಮಾಡಬೇಕು. ಅಷ್ಟೆ! ಯಾರಿಗೆ ಬಂದಿದೆ ಸಮಸ್ಯೆ?

ಅಲ್ಲಿ ಉಷ್ಣ ವಿದ್ಯುತ್‌ ಸ್ಥಾವರ ಬರುವಂತಿಲ್ಲ. ಅಣೆಕಟ್ಟು ಕಟ್ಟಬಹುದು, ಆದರೆ ಎಲ್ಲ ನೀರನ್ನೂ ಬಂಧಿಸಬಾರದು. ಒಂದಿಷ್ಟು (30%) ಸಹಜ ನೀರು, ಅಣೆಕಟ್ಟೆಯ ಕೆಳಗೂ ಸದಾ ಹರಿಯುತ್ತಿರಬೇಕು. ಏಕೆಂದರೆ ಕಣಿವೆ ಪೂರ್ತಿ ಒಣಗಿದರೆ ಅಲ್ಲಿದ್ದ ಮೀನು, ಕಪ್ಪೆ, ನೀರ್ನಾಯಿ, ನೀರೊಳ್ಳೆ ಹಾವು, ಹಾವಸೆ ಇವೆಲ್ಲ ಸಾಯುತ್ತವೆ. ವನ್ಯಜೀವಿಗಳಿಗೆ ಕುಡಿಯಲು ನೀರಿಲ್ಲದಿದ್ದರೆ ವಲಸೆ ಹೋಗಿ ರೈತರಿಗೆ ಇನ್ನಷ್ಟು ಕಷ್ಟ ಕೊಡುತ್ತವೆ. ಅವೆಲ್ಲ ಆಗದಂತೆ 30% ನೀರು ಅಲ್ಲಿ ಹರಿಯುತ್ತಿರಬೇಕು. ಅಷ್ಟೆ! ಅದಕ್ಕೇಕೆ ಆಕ್ಷೇಪಣೆ?

ಅಲ್ಲಿ ಭಾರೀ ಅನಾಹುತಕಾರಿ ಕೆಮಿಕಲ್‌ ಫ್ಯಾಕ್ಟರಿ, ಇಲೆಕ್ಟ್ರೊಪ್ಲೇಟಿಂಗ್‌, ಚರ್ಮಸಂಸ್ಕರಣೆ ಇಂಥ ‘ಕೆಂಪು’ ಉದ್ಯಮ ಬರಕೂಡದು. ಇದೂ ಒಳ್ಳೆಯದೇ ಅಲ್ಲವೆ?

ಇನ್ನು ಅಲ್ಲಿ ವಾಸಿಸುವವರ ಮೂಲ ಅಗತ್ಯಗಳಿಗೆ ಏನೇನೂ ತೊಂದರೆ ಇರುವುದಿಲ್ಲ. ಸಂಕ, ಸೇತುವೆ, ಬೋರ್‌ವೆಲ್‌, ರಸ್ತೆ ಇತ್ಯಾದಿಗಳಿಗೆ ನಿರ್ಬಂಧ ಇಲ್ಲ. ಮರಳು, ಗ್ರಾನೈಟನ್ನೂ ನೀವು ಮನೆಕಟ್ಟಲು ಬಳಸಬಹುದು. ಆದರೆ ನಗರಕ್ಕೆ ಮಾರುವಂತಿಲ್ಲ.

ತೀರಾ ವಿಶಾಲವಾದ 20 ಸಾವಿರ ಚದರ ಮೀಟರಿಗಿಂತ ದೊಡ್ಡದಾದ (200 ಮೀಟರ್‌ ಉದ್ದ, 100 ಮೀಟರ್‌ ಅಗಲದ) ಗೋದಾಮು, ಸಭಾಭವನ, ಸ್ಟೇಡಿಯಂ ಇತ್ಯಾದಿ ಕಟ್ಟುವಂತಿಲ್ಲ. ಯಾರಿಗೆ, ಯಾಕೆ ಬೇಕು ಅಷ್ಟು ದೊಡ್ಡ ಭವನ?

ಅಲ್ಲಿದ್ದವರ ಬದುಕಿಗೆ ಕಂಟಕ ತರಬಲ್ಲ ಹೊಸ ಯೋಜನೆ ಏನಾದರೂ ಬರಲೇಬೇಕೆಂದಿದ್ದರೆ, ಆಯಾ ಗ್ರಾಮಸಭೆಯ ಜೊತೆ ಸಮಾಲೋಚನೆ ನಡೆಸಿ, ಅವರು ಒಪ್ಪಿದರೆ ಮಾತ್ರ ಜಾರಿಗೆ ತರಬಹುದು. ಅದಕ್ಕೆಂದು ಸ್ಥಳೀಯ ಭಾಷೆಯಲ್ಲಿ ಈ ಹೈಲೆವೆಲ್‌ ಸಮಿತಿಯ ವರದಿಯನ್ನು ಸರಳವಾಗಿ ತರ್ಜುಮೆ ಮಾಡಿ ವಿತರಿಸಿರಬೇಕು. ಇದಕ್ಕೇಕೆ ಆಕ್ಷೇಪಣೆ?

ಇಂಥ ಸರಳ ವಿಷಯಗಳನ್ನು ಜನರ ಮುಂದಿಡುವಲ್ಲಿ ಕಳೆದ 12 ವರ್ಷಗಳಲ್ಲಿ ಎಲ್ಲ ಸರ್ಕಾರಗಳೂ ವಿಫಲ ಆಗಿವೆ. ಕನ್ನಡದಲ್ಲಿ ಇದುವರೆಗೆ ತರ್ಜುಮೆ ಮಾಡಿಸಿಲ್ಲ. ಸ್ವಾರ್ಥ ಗಣಿಧಣಿಗಳು, ಮರಳು ಮಾಫಿಯಾಗಳು, ಎಸ್ಟೇಟ್‌ ಮಾಲಿಕರು, ಅರಣ್ಯಾಧಿಕಾರಿಗಳು ಹಬ್ಬಿಸಿದ ಊಹಾಪೋಹಗಳನ್ನೇ ರೆವಿನ್ಯೂ ಅಧಿಕಾರಿಗಳೂ, ಶಾಸಕರೂ ನಂಬಿದ್ದಲ್ಲದೇ ಮುಗ್ಧ ಜನರ ತಲೆಗೂ ತುಂಬಿದ್ದಾರೆ.

ಅತಿಕ್ರಮಣದಾರರು, ಬೇನಾಮಿ ಜಮೀನ್ದಾರರು, ಅಕ್ರಮ ಬೆಳೆಗಾರರು ಎಲ್ಲರೂ ಜೋರಾಗಿ ’ಹೋ, ಬೇಡವೇ ಬೇಡ!‘ ಎಂದು ಕೂಗೆಬ್ಬಿಸಿದ್ದಾರೆ. ಉಳಿದವರು ನಂಬಿದ್ದಾರೆ.

ವರದಿಯಲ್ಲಿ ಒಂದಿಷ್ಟು ಲೋಪಗಳಿವೆ, ನಿಜ. ಆಗಿನ ಕಾಲದ ಉಪಗ್ರಹ ನಕ್ಷೆಗಳ ಆಧಾರದ ಮೇಲೆ ಗ್ರಾಮಗಳನ್ನು ಗುರುತಿಸುವಲ್ಲಿ ತಪ್ಪಾಗಿರುವ ಸಾಧ್ಯತೆಗಳಿವೆ. ಕೇರಳ ಸರ್ಕಾರದಿಂದ ನಾವು ಕಲಿಯಬೇಕಿದೆ. ಅಲ್ಲಿ ಇಂಗ್ಲಿಷ್‌ ವರದಿಯನ್ನು ಮಲೆಯಾಳಂ ಭಾಷೆಗೆ ತರ್ಜುಮೆ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ರತಿ ತಾಲ್ಲೂಕಿನಲ್ಲೂ ಸಮೀಕ್ಷಾ ಸಮಿತಿಗಳು ಓಡಾಡಿ ಯಾವ ಯಾವ ಗ್ರಾಮಗಳು ತಪ್ಪಾಗಿ ಸೇರ್ಪಡೆ ಆಗಿವೆ ಎಂದು ನೋಡಿದೆ.

ಕರ್ನಾಟಕದ ಜನಪ್ರತಿನಿಧಿಗಳು ಅಂಥ ಯಾವ ಕೆಲಸವನ್ನೂ ಮಾಡಿಲ್ಲ. ಜನರಲ್ಲಿ ಬೆದರಿಕೆಯನ್ನು ಬಿತ್ತುವ ಕೆಲಸವನ್ನಷ್ಟೇ ಮಾಡಿದ್ದಾರೆ. ವರದಿಯನ್ನು ಓದದೆಯೇ ದೂರದ ಬೀದರ್‌ನಿಂದ ಹಿಡಿದು, ಈಚೆ ಕೋಲಾರ್‌ವರೆಗಿನ ಶಾಸಕರೂ ಒಂದೇ ಸ್ವರದಲ್ಲಿ ‘ಬೇಡ’ ಎಂದು ಈಗಾಗಲೇ ಮೂರು ಬಾರಿ ವರದಿಯನ್ನು ತಿರಸ್ಕರಿಸಿದ್ದಾರೆ. ಯಾಕೆ ಅಂತ ಕೇಳಬೇಡಿ! ಮುಗ್ಧ ಜನರ ಭಾವನೆಗಳನ್ನು ಕೆರಳಿಸಿದರೆ ಮತ ಬರುತ್ತದೆ ತಾನೆ?

ಈ ಸರಕಾರಕ್ಕೆ ಅರಣ್ಯ ರಕ್ಷಣೆಯ ಬಗ್ಗೆ, ಜಲಮೂಲಗಳ ಬಗ್ಗೆ, ವನ್ಯಜೀವಿಗಳ ದಾಳಿಯಿಂದ ಹೈರಾಣಾದ ಜನರ ಸಂಕಟಗಳ ಬಗ್ಗೆ, ಮುಂದಿನ ಪೀಳಿಗೆಯ ಬಗ್ಗೆ ಸ್ವಲ್ಪ ಏನಾದರೂ ಕಾಳಜಿ ಇದ್ದರೆ ಅದು ಮುಂದಿನ ವಾರದ ವಿಶೇಷ ಅಧಿವೇಶನದಲ್ಲಿ ಈ ನಿಲುವನ್ನು ತಾಳಬೇಕು:

ಮೂಲ ವರದಿಯ ಕನ್ನಡ ಭಾಷಾಂತರ (ಗೂಗಲ್‌ ಭಾಷಾಂತರವಲ್ಲ, ಸರಳ ಕನ್ನಡದ ಆವೃತ್ತಿ) ಸಿದ್ಧವಾಗಿ ಎಲ್ಲ ಶಾಸಕರ ಹಾಗೂ ಇತರ ಆಸಕ್ತರ ಕೈಸೇರಬೇಕು. ಮತ್ತು ಸರ್ಕಾರಿ ವೆಬ್‌ಸೈಟ್‌ನಲ್ಲಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ರೂಪದಲ್ಲಿ ಬಿಡುಗಡೆ ಆಗಬೇಕು. ಪೂರ್ಣ ಪುಟ ಕೂಡಾ ಬೇಕಾಗಿಲ್ಲ; ಕೇವಲ ಅರ್ಧ ಪುಟದಲ್ಲಿ ಮಹತ್ವದ ಅಂಶಗಳನ್ನು ಹೇಳಲು ಸಾಧ್ಯವಿದೆ. ಅದು ಸಾಧ್ಯವಾಗುವವರೆಗೆ ಈ ವಿಷಯ ಸದನದಲ್ಲಿ ಚರ್ಚೆಗೆ ಬರಕೂಡದು.

ಮುಂದೆಂದಾದರೂ ಈ ವಿಷಯವನ್ನು ಸದನದಲ್ಲಿ ಚರ್ಚೆಗೆ ಎತ್ತಿಕೊಳ್ಳುವ ಮೊದಲು (ಶಾಸಕರಲ್ಲದ) ಇಬ್ಬರು ಪರಿಣತರ ಕನ್ನಡ ಉಪನ್ಯಾಸವನ್ನು ಸದನದಲ್ಲಿ ಏರ್ಪಡಿಸಬೇಕು. ಕಸ್ತೂರಿ ರಂಗನ್‌ ಸಮಿತಿಯಲ್ಲಿದ್ದ ಪದ್ಮಶ್ರೀ ದರ್ಶನ್‌ ಶಂಕರ್‌ ಇದ್ದಾರೆ. ಅವರಿಗೆ ಕನ್ನಡದಲ್ಲಿ ಮಾತಾಡಲು ಕಷ್ಟವಾದರೆ ಮೂಲ ಗಾಡ್ಗೀಳ್‌ ಸಮಿತಿಯ ಸದಸ್ಯರಾಗಿದ್ದ ಡಾ. ಕೆ.ಎನ್‌ ಗಣೇಶಯ್ಯ ಇದ್ದಾರೆ.

ಒಂದು ಮಾತನ್ನು ನೆನಪಿಡೋಣ. ಕಸ್ತೂರಿ ರಂಗನ್‌ ಮತ್ತು ಆ ಸಮಿತಿಯ 9 ಸದಸ್ಯರಲ್ಲಿ ಯಾರೊಬ್ಬರೂ ಜನವಿರೋಧಿ ಅಲ್ಲ. ಅರಣ್ಯ ಮತ್ತು ಜನರ ಕ್ಷೇಮಚಿಂತನೆ ಮಾಡುವಲ್ಲಿ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಪರಿಣತರು. ನನಗೆ ಸ್ವಂತ ಪರಿಚಯ ಇರುವ ಪದ್ಮಶ್ರೀ ಸುನೀತಾ ನಾರಾಯಣ್‌ (ಡೌನ್‌ ಟು ಅರ್ಥ್ ಸಂಪಾದಕಿ) ಪಟ್ಟಭದ್ರರ ವಿರುದ್ಧ ಅದೆಷ್ಟೊ ದೊಡ್ಡ ದೊಡ್ಡ ಸಮರ ಸಾರಿ ಜಯಿಸಿದ್ದಾರೆ.

ಕಸ್ತೂರಿ ರಂಗನ್‌ ಸಮಿತಿಯ ವರದಿ ಜಾರಿಗೆ ಬಂದರೆ ಅಪಾಯಗಳೇನೇನು ಎಂಬುದನ್ನು ಹೇಳಬಲ್ಲ ಇನ್ನೊಬ್ಬರನ್ನು ಸರ್ಕಾರವೇ ಆಯ್ಕೆ ಮಾಡಬಹುದು. ಅವರಿಗೆ ವರದಿಯನ್ನು ಅಧ್ಯಯನ ಮಾಡಲು ಮತ್ತು ಜನರ ಆಕ್ರೋಶವನ್ನು ಅಳೆದು ವಾಸ್ತವ ಏನೆಂಬುದನ್ನು ಅರಿಯಲು ಕೊಂಚ ಸಮಯ ಬೇಕಾಗಬಹುದು. ಪಶ್ಚಿಮಘಟ್ಟಗಳಿಗೆ ಅಷ್ಟರಮಟ್ಟಿಗೆ ತಾಳ್ಮೆ ಇದ್ದೀತು.

ವರದಿ ಜಾರಿಗೆ ಬಂದರೆ ಅಪಾಯ ಅಲ್ಲಿನ ಜನರಿಗಲ್ಲ, ಅರಣ್ಯ ಇಲಾಖೆಗೆ ದೊಡ್ಡ ಹೊಸ ಹೊಣೆಗಾರಿಕೆ ಬರಲಿದೆ. ಇದುವರೆಗಂತೂ ಅರಣ್ಯ ಇಲಾಖೆಯ ದಾಖಲೆಗಳೆಲ್ಲ ಅಸ್ತವ್ಯಸ್ತ ಇವೆ. ಇಲಾಖೆಯ ಧೋರಣೆಯಿಂದಾಗಿ ಪಶ್ಚಿಮಘಟ್ಟಗಳ ಮೂಲನಿವಾಸಿಗಳು ಏನೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಕಾನೂನು ಬಂದರೆ ಈ ಅಧಿಕಾರಶಾಹಿಯಿಂದ ಇನ್ನೇನೇನು ಸಂಕಟ ಬಂದೀತೊ ಎಂದು ಕಂಗಾಲಾಗಿದೆ. ಹಾಗಾಗಿ ಜನಸಾಮಾನ್ಯರ ಈಗಿನ ಪ್ರತಿರೋಧ ಅರಣ್ಯ ಇಲಾಖೆಯ ದಬ್ಬಾಳಿಕೆಯ ವಿರುದ್ಧ ಇದೆಯೇ ವಿನಾ ಕಸ್ತೂರಿ ರಂಗನ್‌ ಸಮಿತಿಯ ವರದಿಯ ವಿರುದ್ಧ ಇರಲು ಕಾರಣವೇ ಇಲ್ಲ. ವರದಿ ಕನ್ನಡದಲ್ಲಿ ಬಂದಿದ್ದರೆ ತಾನೆ? ಬರದಂತೆ ನೋಡಿಕೊಳ್ಳುವ ವ್ಯವಸ್ಥೆ ಗಟ್ಟಿಯಾಗಿದೆ!

ಸ್ಥಳೀಯ ಜನರು ಇತ್ತ ಸಂಕಷ್ಟ ಅನುಭವಿಸುತ್ತಿದ್ದರೆ ಅತ್ತ ಏನೆಲ್ಲ ಬಗೆ ಅಕ್ರಮ ನಡೆಸುವ ಪಟ್ಟಭದ್ರ ಹಿತಾಸಕ್ತಿಗಳೆಲ್ಲ ಸೂಕ್ಷ್ಮ ವಲಯದ ಆಸುಪಾಸಿನಲ್ಲಿ ಠಿಕಾಣಿ ಹೂಡಿವೆ. ಈ ಕಟುವಾಸ್ತವಗಳೆಲ್ಲ ಹಿಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಗೊತ್ತಿದೆ.

ಪಶ್ಚಿಮ ಘಟ್ಟಗಳ ಗುಡ್ಡ ಕಣಿವೆಗಳಲ್ಲಿ ಗೆದ್ದಲುಗಳಂತೆ ಹೊಕ್ಕು ಕೂತ ಪಟ್ಟಭದ್ರರನ್ನೆಲ್ಲ ಹೊರಕ್ಕಿಟ್ಟ ನಂತರವೂ ಈ ವರದಿಯಿಂದ ಜನಸಾಮಾನ್ಯರ ಸಹಜ ಬದುಕಿಗೆ ಏನಾದರೂ ತೊಂದರೆ ಇದ್ದರೆ ಆಗ ಶಾಸಕರ ಜವಾಬ್ದಾರಿ ಹೆಚ್ಚುತ್ತದೆ. ತೊಂದರೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಶಾಸಕರು ಚರ್ಚೆ ಮಾಡಬಹದು.

ಅಂಥ ಬೋಲ್ಡ್‌ ನಿಲುವನ್ನು ಈ ಸರ್ಕಾರ ತಳೆದೀತೆ? ನಾಲ್ಕು ದಿನ ಕಾದು ನೋಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!