ಜನರ ಕೆಲಸವನ್ನು ತ್ವರಿತವಾಗಿ ಮಾಡುವುದು ಸರ್ಕಾರದ ಉದ್ದೇಶ : ಸುನೀಲ್ ಕುಮಾರ್
ಹೆಬ್ರಿ : ಜನರು ತಮ್ಮ ಕೆಲಸಗಳಿಗಾಗಿ ನಿತ್ಯವೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಪ್ರಜಾಸೇವೆ ಆಂದೋಲನವನ್ನು ಆರಂಭಿಸಿದೆ. ಪ್ರತೀ ಶನಿವಾರ ಪ್ರಜಾಸೇವೆ ನಡೆಯಲಿದೆ. ಜನರಿಗೆ ತಮ್ಮ ಕೆಲಸಗಳು ಅತೀ ಸುಲಭದಲ್ಲಿ ಆಗಬೇಕು ಎಂಬುದು ಸರ್ಕಾರದ ಆಶಯ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಅವರು ಶನಿವಾರ ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಹೆಬ್ರಿಯ ಪ್ರಥಮ ಪ್ರಜಾಸೇವಾ ಆದೋಲನವನ್ನು ಉದ್ಘಾಟಿಸಿ ಮಾತನಾಡಿದರು. ಮೊದಲು ಜನಸಂಪರ್ಕ ಸಭೆ, ಬಳಿಕ ಜನಸ್ಪಂದನ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ, ಈ ಸರ್ಕಾರ ಅದನ್ನು ಪ್ರಜಾಸೇವೆಯಾಗಿ ನಡೆಸುತ್ತಿದೆ. ಜನರ ಸಮಸ್ಯೆಗೆ ತಕ್ಷಣವೇ ಪರಿಹಾರಗಳು ದೊರೆಯಬೇಕು ಎಂಬುದು ನಮ್ಮ ಆಶಯ ಕೂಡ ಆಗಿದೆ. ಅಧಿಕಾರಿಗಳು ವಿಳಂಬ ಮಾಡದೇ ಜನರ ಕೆಲಸಗಳನ್ನು ಸೇವೆಯಂತೆ ಮಾಡಬೇಕು ಎಂದು ಸುನೀಲ್ ಕುಮಾರ್ ಸೂಚಿಸಿದರು. ಹೆಬ್ರಿ ತಾಲ್ಲೂಕು ಆಡಳಿತದ ಮೂಲಕ ನೂತನ ತಹಶೀಲ್ಧಾರ್ ಮತ್ತವರ ತಂಡ ಜನರ ಕೆಲಸದ ಮೂಲಕ ಜನಮನ್ನಣೆ ಪಡೆಯಲಿ. ಹೆಬ್ರಿ ತಾಲ್ಲೂಕಿನ ಸಿಬ್ಬಂದಿ ಕೊರತೆಯನ್ನು ನೀಗಿಸಲು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ, ಜಿಲ್ಲಾಧಿಕಾರಿಯವರಿಗೂ ತಿಳಿಸಿದ್ದೇವೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಪ್ರಜಾಸೇವೆಯ ಮೂಲಕ ಆದ್ಯತೆಯಲ್ಲಿ ಜನರ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಸುನೀಲ್ ಕುಮಾರ್ ಹೇಳಿದರು.
ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಭ್ರೀಟ್ಟೋ ಮಾತನಾಡಿ ಸರ್ಕಾರದ ಆಶಯದಂತೆ ಪ್ರಥಮ ಪ್ರಜಾಸೇವಾ ಆಂದೋಲನವನ್ನು ನಡೆಸಲಾಗುತ್ತಿದೆ. ಜನರ ಅನುಕೂಲಕ್ಕಾಗಿ ಜನರ ಬಾಗಿಲಿಗೆ ಬಂತು ಸರ್ಕಾರ- ಸೇವೆಗೆ ಸಿಗಲಿ ಸಹಕಾರ ಎಂಬ ಮಹತ್ವದ ಧ್ಯೇಯದೊಂದಿಗೆ ಪ್ರಜಾಸೇವಾ ಆಂದೋಲನ ನಡೆಸಲಾಗುತ್ತಿದೆ, ಜನತೆ ಪ್ರಯೋಜನ ಪಡೆಯುವಂತಾಗಲಿ ಎಂದು ಆಶಿಸಿದರು.
ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಂಕರ ಶೇರಿಗಾರ್ ಮಾತನಾಡಿ ಸರ್ಕಾರದ ಮಹತ್ವಕಾಂಕ್ಷೆಯ ಪ್ರಜಾಸೇವಾ ಆಂದೋಲನದ ಪ್ರಯೋಜನವನ್ನು ಜನರು ಪಡೆಯಬೇಕು, ಪ್ರಜಾಸೇವೆಯ ಮೂಲಕ ಜನರ ಕೆಲಸವನ್ನು ಶೀಘ್ರವಾಗಿ ಮಾಡುತ್ತಿರುವ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. 94ಸಿ ಹಕ್ಕುಪತ್ರವನ್ನು ವಿತರಿಸಲಾಯಿತು.
ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್ ಆರ್, ಹೆಬ್ರಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಭ್ರೀಟ್ಟೋ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಿನೇಶ ಡಿ.ಈ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯಕ್ ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಗಳು ಹಾಜರಿದ್ದರು. ೭೦ಕ್ಕೂ ಹೆಚ್ಚು ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದರು. ಹೆಬ್ರಿ ಗ್ರಾಮ ಪಂಚಾಯಿತಿಯ ಪ್ರಸಾದ್ ಶೆಟ್ಟಿ ನಿರೂಪಿಸಿ ತಹಶೀಲ್ಧಾರ್ ರಾಕೇಶ್ ಫ್ರಾನ್ಸಿಸ್ ಭ್ರೀಟ್ಟೋ ಸ್ವಾಗತಿಸಿದರು.




