ಸಮುದಾಯದ ಪ್ರತಿಯೊಬ್ಬರೂ ಅಭಿವೃದ್ಧಿಗೊಂಡಾಗ ಸಮಾಜದ ಉನ್ನತಿ : ಮುದ್ರಾಡಿ ಮಂಜುನಾಥ ಪೂಜಾರಿ.
ಹೆಬ್ರಿ : ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ಉದ್ಯಮಿಗಳಾಗಿ ಉ ದ್ಯೋಗದಾತರಾಗಬೇಕು, ಆ ಮೂಲಕ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಿದರೆ ಸಮಾಜವು ಉನ್ನತಿ ಯಾಗುತ್ತದೆ. ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜನ್ಮ ದಿನಾಚರಣೆ. ಗುರುಪೂಜೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನನಗೆ ತಂದೆ ತಾಯಿ ಗುರುಗಳು ಮತ್ತು ಸಮಾಜದ ಋಣವಿದೆ, ಜನಸೇವೆಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಸಮಾಜದ ಋಣವನ್ನು ತೀರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಹೆಬ್ರಿ ಸಮುದಾಯ ಭವನ ನಿರ್ಮಾಣದ ಕಾರ್ಯಕ್ಕೆ ಸರ್ವ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಮಂಜುನಾಥ ಪೂಜಾರಿ ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ದೇಶದಾದ್ಯಂತ ನಡೆಯುತ್ತಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯಾಗುತ್ತದೆ. ಒಂದು ಕಾಲದಲ್ಲಿ ಅಸ್ಪೃಶ್ಯತೆಯಿಂದ ಸಮಾಜದಿಂದ ದೂರವಾಗಿದ್ದ ನಮ್ಮ ಸಮಾಜ ಇಂದು ಗುರುಗಳು ಸಂಘಟನೆಯ ಶಕ್ತಿಯಿಂದ ಈ ಹಂತಕ್ಕೆ ಬೆಳೆದಿರುವುದು ಕಾಣುವಾಗ ಅತ್ಯಂತ ಹೆಮ್ಮೆ ಯಾಗುತ್ತದೆ.
ಶೇಂದಿ ತೆಗೆಯುವ ನಮ್ಮ ಸಮುದಾಯದಲ್ಲಿ ಇಂದು ಎಂಜಿನಿಯರ್ ಡಾಕ್ಟರ್ ಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಕಾಣುತ್ತಿದ್ದೇವೆ. ಅದು ಶ್ರೀನಾರಾಯಣ ಗುರುಗಳ ಸ್ಪಷ್ಟ ಸಂದೇಶದಿಂದ ಸಾಧ್ಯವಾಗಿದೆ. ಸಮಾಜವು ಸರ್ಕಾರವನ್ನೇ ನಂಬಿಕೊಂಡು ಇರಬಾರದು, ಎಲ್ಲರೂ ಸೇರಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು, ಹೆಬ್ರಿ ಸಂಘದ ಅಭಿವೃದ್ಧಿಗಾಗಿ ಸಹಕಾರ ನೀಡುತ್ತೇವೆ ಎಂದರು.
ಶಾಸಕ ಸುನೀಲ್ ಕುಮಾರ್ ಮಾತನಾಡಿ ರಾಜ್ಯದ ನೂತನ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಮುಂದಿನ ಹಲವಾರು ವರ್ಷಗಳಿಗಾಗಿ ಮುದ್ರಾಡಿ ಮಂಜುನಾಥ ಪೂಜಾರಿಯವರು ಭದ್ರ ಬುನಾದಿ ಹಾಕಿದ್ದಾರೆ. ಅವರೊಂದಿಗೆ ನಾವೆಲ್ಲರೂ ಇದ್ದೇವೆ.
ಸಮುದಾಯದ ಅಭಿವೃದ್ಧಿಗೆ ನಿಗಮಕ್ಕೆ ಕನಿಷ್ಠ 100 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ನೀಡಬೇಕಿದೆ. ಹೆಬ್ರಿ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ. ಮುಂದಿನ ಗುರುಪೂಜಾ ಮಹೋತ್ಸವ ನೂತನ ಭವನದಲ್ಲೇ ಆಗಲಿ ಎಂದು ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿ, ಮುನಿಯಾಲು ಕೆಪಿಎಸ್ ಶಿಕ್ಷಕ ಪ್ರಕಾಶ ಪೂಜಾರಿ ಮಾತಿಬೆಟ್ಟು ವಿಶೇಷ ಉಪನ್ಯಾಸ ನೀಡಿದರು.
ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಬ್ರಿ ನಮ್ಮ ಸಂಘದ ಅಭಿವೃದ್ಧಿ ಮತ್ತು ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿ ಹೆಬ್ರಿಯಲ್ಲಿ ಸಮುದಾಯದ ಸಹಕಾರ ಬ್ಯಾಂಕ್ ಸ್ಥಾಪನೆಯು ಶೀಘ್ರದಲ್ಲೇ ನಡೆಯಲಿದೆ ಎಂದು ತಿಳಿಸಿದರು. ಹೆಬ್ರಿಯ ಪ್ರಮುಖ ರಸ್ತೆಯಲ್ಲಿ ಶ್ರೀಗುರುಗಳ ಭಾವಚಿತ್ರದೊಂದಿಗೆ ಬೃಹತ್ ವಾಹನ ಜಾಥ ನಡೆಯಿತು. ಶ್ರೀ ಗುರುಪೂಜೆ, ಸಂಘದ ಮಹಿಳಾ ಭಜನಾ ಮಂಡಳಿಯ ತಂಡದವರಿಂದ ಮತ್ತು ಸಮಾಜ ಬಾಂಧವರಿಂದ ಭಜನೆ ನಡೆಯಿತು.
ನಿವೃತ್ತ ಯೋಧರು, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸೂರ್ಯಕಾಂತ್ ಜಯ ಸುವರ್ಣ, ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮೂಲ್ಕಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಸೂರತ್ ಉದ್ಯಮಿ ಮುದ್ರಾಡಿ ಮನೋಜ್ ಸಿ ಪೂಜಾರಿ, ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಹೆಬ್ರಿ ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ತಾರನಾಥ ಬಂಗೇರ, ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಾರಾಯಣ ಪೂಜಾರಿ, ಪೂರ್ವಾಧ್ಯಕ್ಷರಾದ ಜರ್ವತ್ತು ಭೋಜ ಪೂಜಾರಿ, ಬೈದರಬೆಟ್ಟು ಭೋಜ ಪೂಜಾರಿ, ಗೌರವಾಧ್ಯಕ್ಷ ಎಚ್.ಎಸ್. ಅಣ್ಣಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಬಲ್ಲಾಡಿ, ಕೋಶಾಧಿಕಾರಿ ರತ್ನಾಕರ ಪೂಜಾರಿ ಕುಚ್ಚೂರು, ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ ಪೂಜಾರಿ ಅರೆಕಲ್ಲುಮನೆ, ಕಾರ್ಯದರ್ಶಿ ಹೇಮಾವತಿ ಪೂಜಾರಿ ಬಲ್ಲಾಡಿ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಪೂಜಾರಿ ತೆಂಕೋಡು, ಕಾರ್ಯದರ್ಶಿ ಸುನೀಲ್ ಪೂಜಾರಿ ಕನ್ಯಾನ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸಮಾಜ ಭಾಂದವರು ಭಾಗವಹಿಸಿದ್ದರು.
ಶೈಲಜಾ ಪೂಜಾರಿ ಮುದ್ರಾಡಿ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರತೀಕ್ಷಾ ಬಹುಮಾನಿತರ ಪಟ್ಟಿ ವಾಚಿಸಿದರು. ಚೈತ್ರ ಕಬ್ಬಿನಾಲೆ ಮತ್ತು ವಿನಾಯಕ್ ಮುದ್ರಾಡಿ ನಿರೂಪಿಸಿದರು. ಪ್ರಭಾಕರ ಪೂಜಾರಿ ಕುಚ್ಚೂರು ವಂದಿಸಿದರು. ಸಂತೋಷ ಪೂಜಾರಿ ಬಲ್ಲಾಡಿ ವರದಿ ಮಂಡಿಸಿದರು.




