ಮುದ್ರಾಡಿ : ಹದಿಹರೆಯ ಮಕ್ಕಳ ಬದುಕಿನಲ್ಲಿ ಒಂದು ಮಹತ್ವಪೂರ್ಣ ಕಾಲಘಟ್ಟ. ಇಲ್ಲಿಯೇ ಅವರಿಗೆ ಸೂಕ್ತ ಮಾರ್ಗದರ್ಶನ ದೊರೆತರೆ, ಅವರ ಬದುಕು ಹಸನಾಗುತ್ತದೆ. ವಿದ್ಯಾರ್ಥಿಗಳ ಗುರಿ ಕೇವಲ ವಿದ್ಯಾರ್ಜನೆ ಮತ್ತು ಪಠ್ಯಪೂರಕವಾಗಿರುವ ಸಕರಾತ್ಮಕ ಚಟುವಟಿಕೆಯೇ ಆಗಿರಬೇಕು. ಮಕ್ಕಳು ತಮ್ಮ ವರ್ತನೆಯಲ್ಲಿ ಬದಲಾಗುತ್ತಿದ್ದಾರೆ ಎಂಬ ಅರಿವು ಪೋಷಕರಿಗೆ ಬರುತ್ತಿದ್ದಂತೆ ಸಚೇತನಗೊಳ್ಳಬೇಕು. ಮಕ್ಕಳ ವರ್ತನಾ ವ್ಯತ್ಯಾಸಕ್ಕೆ ಹದಿಹರೆಯ ಒಂದೇ ಕಾರಣವಲ್ಲ. ಮಿತಿಮೀರಿದ ಮೊಬೈಲ್ ಬಳಕೆ, ಸ್ನೇಹಿತರ ಸಹವಾಸ, ಕುತೂಹಲವು ಕೂಡ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಮತ್ತು ಸದಾಕಾಲ ಪೋಷಕರ ಮೊದಲ ಕರ್ತವ್ಯ ಮಕ್ಕಳನ್ನು ಗಮನಿಸುವುದು ಮತ್ತು ಅವರ ಜೊತೆ ಕುಳಿತು, ಸಭ್ಯ ಸ್ನೇಹ ಪೂರ್ಣವಾಗಿ ಅವರ ಒಳಿತು, ಕೆಡುಕುಗಳನ್ನು ಮನದಟ್ಟು ಮಾಡುವ ಕೆಲಸ ಆಗಬೇಕು.ಮನೆಯೇ ಮೊದಲ ಪಾಠಶಾಲೆ.ಪೋಷಕರು ಮೊದಲು ಮಕ್ಕಳಿಗೆ ಮಾದರಿಯಾಗಬೇಕು. ಅವರ ಕಲಿಕೆಗೆ ಸದಾಕಾಲ ಪ್ರೋತ್ಸಾಹ ಕೊಡಬೇಕು. ಹೀಗಾದಾಗ ಮಕ್ಕಳು ಉತ್ತಮ ಬದಲಾವಣೆ ಹೊಂದುತ್ತಾರೆ. ಜೊತೆಗೆ ದುಃಶ್ಚಟಗಳಿಂದ ದೂರವಾಗುತ್ತಾರೆ. ಪೋಷಕರು ಆಗಾಗ್ಗೆ ಶಾಲೆಗೆ ಭೇಟಿ ನೀಡುತ್ತಾ ಶಿಕ್ಷಕರಲ್ಲಿ ಮಕ್ಕಳ ಕಲಿಕೆ ಹಾಗೂ ನಡವಳಿಕೆಯ ಬಗ್ಗೆ ಚರ್ಚಿಸಿ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸದಾ ತೊಡಗಿಸಿಕೊಳ್ಳಿ ಎಂದು ಉಡುಪಿ ದೊಡ್ಡಣಗುಡ್ಡೆ ಎ. ವಿ. ಬಾಳಿಗ ಆಸ್ಪತ್ರೆಯ ಖ್ಯಾತ ಆಪ್ತ ಸಮಾಲೋಚಕರಾದ ಪದ್ಮಾ ರಾಘವೇಂದ್ರ ಹೇಳಿದರು.
ಅವರು ಮುದ್ರಾಡಿಯ ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ.) ಇದರ ಆಡಳಿತಕ್ಕೊಳಪಟ್ಟ ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಶಾಲೆಯ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನಾ ಘಟಕದ ವತಿಯಿಂದ ನಡೆದ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿಯವರು ಮಾತನಾಡಿ, ಈಗಿನ ಮಕ್ಕಳಲ್ಲಿನ ಜ್ಞಾನ ಭಂಡಾರವು ಹೆಚ್ಚು ಕಡಿಮೆ ತುಂಬಿರುವುದು ಮೊಬೈಲ್ ಎಂಬ ಮಾಯಾಲೋಕದಿಂದ. ಕೊರೋನಾ ನಂತರದ ಸಮಯವು ಮಕ್ಕಳನ್ನು ಮೊಬೈಲ್ ನ ಮಾಯಾಲೋಕಕ್ಕೆ ಎಳೆ ತಂದಿದೆ. ಅವರನ್ನು ಅಲ್ಲಿಂದ ಹೊರತಂದು ಕೂರಿಸುವುದು ತುಂಬಾ ಕಷ್ಟಸಾಧ್ಯ ಕೆಲಸ. ಆ ಕಾರಣ ಪೋಷಕರು ಮೊಬೈಲ್ ನ ಅತಿಯಾದ ಬಳಕೆಯಿಂದ ಮಕ್ಕಳು ಹಾದಿ ತಪ್ಪದಂತೆ ಎಚ್ಚರವಹಿಸಿ, ಅವರ ಚಲನ ವಲನಗಳ ಬಗ್ಗೆ ಸದಾ ಗಮನಹರಿಸಿ ಎಂದು ಹೇಳಿದರು.
ವೇದಿಕೆಯಲ್ಲಿ ರಕ್ಷಕ – ಶಿಕ್ಷಕ ಸಮಿತಿಯ ಸದಸ್ಯೆ ಸವಿತಾ ಹರೀಶ್ ವರಂಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಸಾಂತ್ರಪಲ್ಕೆ,ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ಪಿ.ವಿ. ಆನಂದ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕ ಮಹೇಶ ನಾಯ್ಕ ಕೆ. ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ಯಾಮಲಾ,ಅನುಷಾ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಸಹಕರಿಸಿದರು.



