Sunday, October 18, 2026
Homeಹೆಬ್ರಿ ನ್ಯೂಸ್ ವಿಶೇಷಗ್ರಾಮೀಣ ಪ್ರದೇಶದ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆ ೨ನೇ ಬಾರಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ!

ಗ್ರಾಮೀಣ ಪ್ರದೇಶದ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆ ೨ನೇ ಬಾರಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ!

ಸಮಾಜ ಶಿಕ್ಷಕನ ಮಾರ್ಗದರ್ಶನದ ಅತ್ಯದ್ಭುತ ಸಾಧನೆ !

ವಿದ್ಯಾರ್ಥಿ ಆದಿತ್ಯ ಜಪಾನ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

ಕುಕ್ಕುಜೆ : ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಕುಕ್ಕುಜೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಅಪೂರ್ವ ಸಾಧನೆ ಮಾಡಿದೆ !.

ಶಾಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಆದಿತ್ಯ ರೂಪಿಸಿದ ‘CUT IT EASY’ ಎಂಬ ನೂತನ ಯಂತ್ರವು INSPIRE Awards–MANAK ಸ್ಪರ್ಧೆಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ದಾಟಿ ರಾಷ್ಟ್ರಮಟ್ಟಕ್ಕೆ ತಲುಪಿತ್ತು. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ Top -60 ಆವಿಷ್ಕಾರಗಳಲ್ಲಿ ಸ್ಥಾನ ಪಡೆಯುವ ಜೊತೆಗೆ ಆದಿತ್ಯ ಜಪಾನ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈ ಸಾಧನೆಯೊಂದಿಗೆ ಕುಕ್ಕುಜೆಯಂತಹ ಅತ್ಯಂತ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಯ ಸಮಾಜ ಶಿಕ್ಷಕರೊಬ್ಬರು INSPIRE Awards–MANAK ಮೂಲಕ ಎರಡು ಬಾರಿ ಅಂತರಾಷ್ಟ್ರೀಯ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಒಂದೇ ಶಾಲೆಯಿಂದ ಎರಡು ಬಾರಿ ಈ ಸಾಧನೆ ಮಾಡಿದ ದೇಶದ ಮೊದಲ ಶಾಲೆ ಎಂಬ ವಿಶೇಷತೆಯನ್ನೂ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆ ತನ್ನದಾಗಿಸಿಕೊಂಡಿದೆ!

ಈ ಹಿಂದೆ ಇದೇ ಶಾಲೆಯ ವಿದ್ಯಾರ್ಥಿನಿಯರಾದ ಅಮೂಲ್ಯ ಹೆಗ್ಡೆ ಮತ್ತು ನಿಖಿತಾ INSPIRE Awards–MANAK ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಜಪಾನ್‌ನ Sakura Science High School Programmeಗೆ ಆಯ್ಕೆಯಾಗಿದ್ದರು. ಇದೀಗ ಆದಿತ್ಯ ಕೂಡ ಜಪಾನ್‌ಗೆ ಆಯ್ಕೆಯಾಗುವ ಮೂಲಕ ಶಾಲೆಯ ಅಂತರಾಷ್ಟ್ರೀಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದ್ದಾನೆ.

ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಈ ಮೂವರು ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಿದವರು ಒಬ್ಬರೇ ಶಿಕ್ಷಕರಾದ ಸುರೇಶ್ ಮರಕಾಲ ಎನ್ನುವುದು ವಿಶೇಷ. ತರಗತಿಯಲ್ಲಿ ಸಮಾಜ ಬೋಧಿಸುವ ಶಿಕ್ಷಕರಾಗಿರುವ ಅವರು ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ, ಮೂರು ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತೆ ಮಾರ್ಗದರ್ಶನ ನೀಡಿರುವುದು ಗಮನಾರ್ಹ ಸಾಧನೆಯಾಗಿದೆ.

ಈ ಬಾರಿ ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ ತಲುಪಿದ ಒಟ್ಟು 120 ವಿದ್ಯಾರ್ಥಿಗಳ ಪೈಕಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವವರು ಕೇವಲ 9 ವಿದ್ಯಾರ್ಥಿಗಳು. ಆ ಒಂಬತ್ತು ಪ್ರತಿಭಾವಂತರಲ್ಲಿ ಆದಿತ್ಯ ಕೂಡ ಒಬ್ಬನಾಗಿರುವುದು ಕುಕ್ಕುಜೆ ಗ್ರಾಮಕ್ಕೆ ಮಾತ್ರವಲ್ಲದೆ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ಸಂಗತಿಯಾಗಿದೆ!

ಸಂಪನ್ಮೂಲಗಳ ಕೊರತೆ ಅಥವಾ ಗ್ರಾಮೀಣ ಪರಿಸರ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ; ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ಸರಕಾರಿ ಶಾಲೆಯ ಮಕ್ಕಳೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚಬಲ್ಲರು ಎಂಬುದಕ್ಕೆ ಕುಕ್ಕುಜೆ ಶಾಲೆಯ ಈ ಸಾಧನೆ ಅತ್ಯುತ್ತಮ ನಿದರ್ಶನವಾಗಿದೆ.

ಶಿಕ್ಷಕ ಸುರೇಶ್ ಮರಕಾಲ ಅವರ ನಿರಂತರ ಮಾರ್ಗದರ್ಶನ ಹಾಗೂ ಆದಿತ್ಯನ ಸಾಧನೆಯನ್ನು ಶ್ಲಾಘಿಸಿ ಶಿಕ್ಷಣ ಇಲಾಖೆಯ ಜಿಲ್ಲೆಯ ಉಪನಿರ್ದೇಶಕ ಲೋಕೇಶ್ ಸಿ., ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಗಿರಿಜಮ್ಮ ಹಾಗೂ INSPIRE Awards–MANAKನ ನೋಡಲ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸಮಾಜ  ಶಿಕ್ಷಕರಾಗಿದ್ದರೂ ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಿ, ಮೂರು ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸುರೇಶ್ ಮರಕಾಲ ಅವರ ಮಾರ್ಗದರ್ಶನ ಹಾಗೂ ಆದಿತ್ಯನ ಸಾಧನೆಗೆ ವ್ಯಾಪಕ ಪ್ರಶಂಸೆವ್ಯಕ್ತವಾಗಿದ್ದು, ಗ್ರಾಮೀಣ ಶಾಲೆಯೊಂದರಲ್ಲಿ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳ ಕನಸುಗಳಿಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ರೆಕ್ಕೆಗಳನ್ನು ನೀಡಬಹುದು ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.

“ಅತ್ಯಂತ ಗ್ರಾಮೀಣ ಮಟ್ಟದಲ್ಲಿರುವ ಒಂದು ಸರಕಾರಿ ಪ್ರೌಢಶಾಲೆ ಇನ್ಸ್ಪೈರ್ ಅವಾರ್ಡ್‌ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಎರಡೆರಡು ಬಾರಿ ಅಂತರಾಷ್ಟ್ರೀಯ ಮಟ್ಟಕ್ಕೆ ಕಳುಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ. ವಿದ್ಯಾರ್ಥಿ ಆದಿತ್ಯನಿಗೆ ಹಾಗೂ ಆತನ ಸಾಧನೆಗೆ ಕಾರಣರಾದ ಕುಕ್ಕುಜೆ ಪ್ರೌಢಶಾಲೆಯ ಸಮಾಜ ಶಿಕ್ಷಕರಾದ ಶ್ರೀ ಸುರೇಶ ಮರಕಾಲ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಇದು ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ದೇಶಕ್ಕೇ ತೋರಿಸುವ ಕಾರ್ಯವಾಗಿದೆ.”

– ಲೋಕೇಶ್ ಸಿ. ಉಪನಿರ್ದೇಶಕರು. – ಉಡುಪಿ ಜಿಲ್ಲೆ

….

ನಮ್ಮ ಸುತ್ತಮುತ್ತಲಿನ ಸನ್ನಿವೇಶಗಳಲ್ಲಿ ಪ್ರಮುಖವಾದ ಸಮಸ್ಯೆಯೊಂದನ್ನು ಗುರುತಿಸುವುದು ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸೋದಕ್ಕೆ ಇನ್ಸ್ಪೈರ್ ಅವಾರ್ಡ್ ಕಳೆದ ಕೆಲವು ವರ್ಷಗಳಿಂದ ಸಾಗಿ ಬರುತ್ತಿದೆ. ಈ ಸಮಸ್ಯೆಗಳಿಗೆ ಕೇವಲ ವಿಜ್ಞಾನವೊಂದೇ ಪರಿಹಾರವಾಗಬೇಕಾಗಿಲ್ಲ ಸಾಮಾಜಿಕವಾಗಿಯೂ ಈ ತರದ ಪರಿಹಾರಗಳನ್ನು ಯೋಚಿಸಬಹುದು ಎನ್ನುವುದನ್ನ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆ ಇಲ್ಲಿಯ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸತತ ಎರಡನೇ ಬಾರಿಗೆ ಈ ಬಗೆಯ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಶಿಕ್ಷಕರಾದ ಸುರೇಶ ಮರಕಾಲ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಮಾಸ್ಯೆ ಪರಿಹಾರದಂತಹ ಸಂಗತಿಗಳನ್ನು ತಿಳಿ ಹೇಳುತ್ತಾ ಅವರಿಂದ ಉತ್ತಮ ಮಾದರಿಗಳನ್ನು ಸಿದ್ಧಪಡಿಸಿ ಮಾರ್ಗದರ್ಶನ ನೀಡುತ್ತಿರುವುದು ಅಭಿನಂದನೀಯ. ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು, ಅವರನ್ನು ಸಿದ್ಧಪಡಿಸಿ ಕಳುಹಿಸುತ್ತಿರುವ ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಲು ಸಂಭ್ರಮಿಸುತ್ತೇನೆ.

– ಅಶೋಕ ಕಾಮತ್, ಪ್ರಾಂಶುಪಾಲರು, ಡಯೆಟ್ ಉಡುಪಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!