ಹೆಬ್ರಿ : ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ೨೦೨೬-೨೭ನೇ ಶೈಕ್ಷಣಿಕ ಸಾಲಿನ “ಉಚಿತ ಯಕ್ಷಗಾನ ತರಗತಿ” ಉದ್ಘಾಟನೆ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಮುದ್ರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ ಸತೀಶ್ ಬೇಳಂಜೆ ಯಕ್ಷಗಾನ ತರಗತಿಗಳನ್ನು ಉದ್ಘಾಟಿಸಿದರು.
“ಯಕ್ಷಗಾನವು ಕೇವಲ ಒಂದು ಪ್ರದರ್ಶನ ಕಲೆಯಲ್ಲ; ಅದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಭಾಷಾ ಶುದ್ಧಿ, ಆಶುಭಾಷಣ ಕಲೆ ಮತ್ತು ಸೃಜನಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ನಮ್ಮ ಕರಾವಳಿಯ ಈ ಶ್ರೀಮಂತ ಕಲಾ ಪರಂಪರೆಯು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದ್ದು, ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಸತೀಶ್ ಬೇಳಂಜೆ ಹೇಳಿದರು.
ಯಕ್ಷಗಾನ ಗುರುಗಳಾಗಿ ಆಗಮಿಸಿದ ಪ್ರಸಿದ್ಧ ಯಕ್ಷಗಾನ ವಿದ್ವಾಂಸ ಮಹೇಶ್ ಕುಮಾರ್ ಮಂದಾರ್ತಿ ವಿದ್ಯಾರ್ಥಿಗಳಿಗೆ ಕಲೆಯ ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಮೌಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಜೇಂದ್ರ ಶೆಟ್ಟಿ ವಹಿಸಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್. ಹಾಗೂ ಹಿರಿಯ ಶಿಕ್ಷಕಿ ಲಕ್ಷಾಧಿನಿ ಉಪಸ್ಥಿತರಿದ್ದರು.ಕರಾವಳಿ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಇಂದಿನ ವಿದ್ಯಾರ್ಥಿ ದೆಸೆಯಲ್ಲೇ ಪೋಷಿಸುವ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದಾತ್ತ ಉದ್ದೇಶದಿಂದ ಯಕ್ಷಗಾನ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರವೀಣ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.


