Sunday, August 9, 2026
Homeಶಿವಪುರ ಗ್ರಾಮ ಪಂಚಾಯತ್‌ಕಜಾನೆಯಲ್ಲಿ ಶ್ರೀದುರ್ಗಾದೇವಿ ಭಜನಾ ಮಂಡಳಿ ಲೋಕಾರ್ಪಣೆ. - ಭಜನಾ ಮಂಗಲೋತ್ಸವ

ಕಜಾನೆಯಲ್ಲಿ ಶ್ರೀದುರ್ಗಾದೇವಿ ಭಜನಾ ಮಂಡಳಿ ಲೋಕಾರ್ಪಣೆ. – ಭಜನಾ ಮಂಗಲೋತ್ಸವ

ಕಜಾನೆ ಎಂದರೆ ಒಳ್ಳೇಯತನಕ್ಕೆ ಹೆಸರಾದ ಊರು : ಉದಯ ಕುಮಾರ್‌ ಶೆಟ್ಟಿ.

ಕಜಾನೆ ( ಶಿವಪುರ ) : ಕಜಾನೆ ಎಂದರೆ ಒಳ್ಳೇಯತನಕ್ಕೆ ಹೆಸರಾದ ಊರು. ಗ್ರಾಮೀಣ ಪ್ರದೇಶದ ಕಜಾನೆಯಲ್ಲಿ ದೈವಶಕ್ತಿಯ ಮೂಲಕ ಅತ್ಯುತ್ತಮ ಕಾರ್ಯಗಳು ನಡೆಯುತ್ತಿದೆ. ಕಜಾನೆಯನ್ನು ನನ್ನ ಜೀವನದಲ್ಲಿ ಮರೆಯಲು ಸಾದ್ಯವಿಲ್ಲ. ಕಜಾನೆಯಲ್ಲಿ ನೂತನವಾಗಿ ಲೋಕಾರ್ಪಣೆಯಾದ ಶ್ರೀದುರ್ಗಾದೇವಿ ಭಜನಾ ಮಂಡಳಿಯು ಮೂಲಕ ಜನಮನ ಗೆಲ್ಲುವಂತಾಗಲಿ, ಊರು ಸುಭಿಕ್ಷೆಯಾಗಲಿ, ಅಂದು ನಮಗೆ ಮನೆಯಲ್ಲಿ ಭಜನೆ ಮಾಡದೆ ಊಟ ಬಡಿಸುತ್ತಿರಲಿಲ್ಲ. ಆ ದಿನಗಳು ಈಗಲೂ ನೆನಪಾಗುತ್ತಿದೆ. ಈಗ ಮತ್ತೇ ಭಜನೆಗೆ ಅತ್ಯಂತ ಹೆಚ್ಚು ಮಹತ್ವ ದೊರೆಯುತ್ತಿದೆ. ಭಜನೆಯ ಬಗೆಗೆ ಯುವಸಮುದಾಯ ಭಜನೆಯತ್ತ ಆಕರ್ಷಿತರಾಗಿ ಭಜನಾ ಮಂಡಳಿಗಳ ಮೂಲಕ ದೇವರ ಸೇವೆ ಮಾಡುತ್ತಿರುವುದು ಅತ್ಯಂತ ಮೆಚ್ಚುಗೆಯ ಸಂಗತಿ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷರಾದ ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಅವರು ಶಿವಪುರ ಗ್ರಾಮದ ಕಜಾನೆಯ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದಲ್ಲಿ ಭಾನುವಾರ ನೂತನ ಶ್ರೀದುರ್ಗಾದೇವಿ ಭಜನಾ ಮಂಡಳಿಯ ಉದ್ಘಾಟನಾ ಸಂಭ್ರಮದಲ್ಲಿ ಮಾತನಾಡಿದರು.
ಕಜಾನೆ ಬಾಲ್ಯದಲ್ಲಿ ನಾನು ನಡೆದಾಡಿದ ನನ್ನ ಪ್ರೀತಿಯ ಊರು. ಅಜ್ಜಿ ಮನೆಗೆ ಬಂದು ಅಜ್ಜಿಯನ್ನು ಕರೆದುಕೊಂಡು ಮುನಿಯಾಲಿಗೆ ಹೋಗುತ್ತಿದ್ದ ಆ ದಿನಗಳನ್ನು ಮನದಲ್ಲಿದೆ. ಕಜಾನೆಯ ಮನೆಮಂದಿ ಅತ್ಯಂತ ಪ್ರಾಮಾಣಿಕರು, ಕಜಾನೆ ನನಗೆ ಜೀವನದಲ್ಲಿ ಶಕ್ತಿ ನೀಡಿದ ಊರು, ಎಂದೂ ಕಜಾನೆಯನ್ನು ಮರೆಯಲ್ಲ. ನಿಮ್ಮೆಲ್ಲರೊಂದಿಗೆ ಸೇರಿ ಕಜಾನೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ ಉದಯ ಕುಮಾರ್‌ ಶೆಟ್ಟಿಯವರು ಅಂದು ಹಿರಿಯರಾದ ಪಳ್ಳಿ ಶ್ರೀನಿವಾಸ ಹೆಗ್ಡೆಯವರು ಕಜಾನೆಯ ಬಗ್ಗೆ ತೋರಿದ ಪ್ರೀತಿ, ಹಾಕಿದ ಅಡಿಪಾಯವನ್ನು ಇಂದೂ ಕೂಡ ಅವರ ಸುಪುತ್ರರಾದ ರಾಜಾರಾಮ ಹೆಗ್ಡೆ ಮತ್ತು ನಟರಾಜ ಹೆಗ್ಡೆಯವರು ಮುಂದುವರಿಸಿಕೊಂಡು ಹೋಗುತ್ತ ಊರಿನ ಹೆಸರನ್ನು ಬೆಳಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಭಜನಾ ಮಂಡಳಿಯ ಮೂಲಕ ಕಜಾನೆ ಇನ್ನಷ್ಟು ಬೆಳಗಲಿ ಎಂದು ಆಶಿಸಿದರು. ಪ್ರೀತಿ ವಿಶ್ವಾಸಕ್ಕೆ ಕಜಾನೆಯು ಹೆಸರಾಗಿದೆ. ಕಜಾನೆ ಎಗ್ರಿಕಲ್ಚರಲ್‌ ಫಾರ್ಮ್‌ ಅನ್ನು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿಯು ಶ್ರೀನಿವಾಸ ಹೆಗ್ಡೆಯವರಿಗೆ ಸಲ್ಲುತ್ತದೆ ಎಂದು ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಪುರ ದೇವಸ್ಥಾನ ಜೀರ್ಣೋದ್ಧಾರ :

ಕಜಾನೆ ಹರೀಶ್‌ ಶೆಟ್ಟಿ ಸೇವೆಗೆ ಮೆಚ್ಚುಗೆ.ಗ್ರಾಮದ ದೇವಸ್ಥಾನ ಶಿವಪುರ ಶ್ರೀಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶಾಭಿಷೇಕಕ್ಕೆ ತನ್ನ ಕರ್ಮಭೂಮಿ ಪೂನಾದಲ್ಲಿ ಊರಿನ ಪ್ರತಿಯೊಬ್ಬರನ್ನು ಬೇಟಿ ಮಾಡಿಸಿ ಅತ್ಯಂತ ದೊಡ್ಡ ಮಟ್ಟದ ದೇಣಿಗೆ ಸಂಗ್ರಹಿಸುವಲ್ಲಿ ವಿಶೇಷ ಸಹಕಾರ ನೀಡಿದ ಯುವ ಉದ್ಯಮಿ ಕಜಾನೆ ಹರೀಶ ಶೆಟ್ಟಿ ಪೂನಾ ಅವರ ಸೇವೆಯನ್ನು ಶಿವಪುರ ಶ್ರೀಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಮುನಿಯಾಲು ಉದಯ ಕುಮಾರ್‌ ಶೆಟ್ಟಿಯವರು ಸ್ಮರಿಸಿದರು.

ಕಜಾನೆಯ ಯುವಶಕ್ತಿಯ ಸೇವೆ ಸ್ಮರಣೀಯ : ನಟರಾಜ ಹೆಗ್ಡೆ.
ಒಂದು ಕಾಲದಲ್ಲಿ ಬೆರಳೆಣಿಕೆಯ ಮನೆಗಳಿಂದ ಊರು ಕಜಾನೆಯು ಇಂದು ಬೆಳೆದು ವಿಸ್ತಾರಗೊಂಡಿದೆ. ಅತ್ಯಂತ ಒಳ್ಳೇಯ ಜನ ಕಜಾನೆಯಲ್ಲಿದ್ದಾರೆ. ಯುವ ಶಕ್ತಿಯು ಕೂಡ ಸಮಾಜಮುಖಿ ಸೇವೆಯನ್ನು ಮಾಡುತ್ತಿದೆ. ಅದಕ್ಕೆಲ್ಲ ಕಜಾನೆಯ ಶಕ್ತಿ ಶ್ರೀ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನಗಳೇ ಪ್ರಮುಖ ಕಾರಣ. ದೈವಗಳ ಶಕ್ತಿಯಿಂದಲೇ ದೈವಸ್ಥಾನದ ಅಭಿವೃದ್ಧಿ ಸೇರಿ ಎಲ್ಲವೂ ಸುಸೂತ್ರವಾಗಿ ಕಲ್ಪನೆಗೂ ಮೀರಿ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಕಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ಮೋಕ್ತೇಸರರಾದ ಭಜನಾ ಮಂಡಳಿಯ ಗೌರವಾಧ್ಯಕ್ಷ ನಟರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಜಾನೆಯ ಮಹಿಳೆಯರು ಸೇರಿ ಯುವ ಶಕ್ತಿ ಒಂದಾಗಿ ಭಜನಾ ಮಂಡಳಿಯನ್ನು ಸ್ಥಾಪಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಧರ್ಮ ಕಾರ್ಯದ ಜೊತೆಗೆ ಗ್ರಾಮದ ಸುಭಿಕ್ಷೆಗಾಗಿ ದೈವಸ್ಥಾನದ ಜೊತೆಗೆ ಭಜನಾ ಮಂಡಳಿಯು ಸೇವೆ ಮಾಡಲಿದೆ. ಊರಿನವರ ಶ್ರೇಯೋಭಿವೃದ್ಧಿಗಾಗಿ ಮತ್ತು ಕಜಾನೆಯ ಮನೆಮಂದಿಯ ಸಂಕಷ್ಟಕ್ಕೆ ನೆರವಾಗಲು ಹಲವು ಯೋಜನೆಯನ್ನು ಹಂತಹಂತವಾಗಿ ಕಾರ್ಯಗತಗೊಳಿಸುತ್ತೇವೆ. ಅದಕ್ಕಾಗಿ ಮನೆಮನೆಯ ಸರ್ವೆ ಕಾರ್ಯವನ್ನು ನಡೆಸುತ್ತೇವೆ ಎಂದು ನಟರಾಜ ಹೆಗ್ಡೆ ಊರಿನ ಅಭಿವೃದ್ಧಿಗಾಗಿ ತಮ್ಮ ಮನದಾಸೆಯನ್ನು ಪ್ರಕಟಿಸಿದರು. ಅಂದಿನ ಹಿರಿಯರು, ಈಗಿನ ಹಿರಿಯರು ಯುವಕರು ಎಲ್ಲರೂ ಕಜಾನೆಗಾಗಿ, ದೈವಸ್ಥಾನಕ್ಕಾಗಿ ನಿಸ್ವಾರ್ಥವಾಗಿ ಮಾಡುತ್ತಿರುವ ಸೇವೆಯನ್ನು ನಟರಾಜ್‌ ಹೆಗ್ಡೆ ಸ್ಮರಿಸಿದರು.
ಅಂದು ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಯವರು ಸರ್ಕಾರದ ಮಟ್ಟದಲ್ಲಿ ವಿಶೇಷ ಪ್ರಯತ್ನ ನಡೆಸಿದ್ದ ಇಂದು ಕಜಾನೆ ರಸ್ತೆಯು ಅತ್ಯಂತ ಒಳ್ಳೇಯದಾಗಿ ನಿರ್ಮಾಣಗೋಂಡು ನಾವೆಲ್ಲರೂ ಸುಗಮ ಸಂಚಾರ ಮಾಡುವಂತಾಗಿದೆ. ಶಾಸಕ ಸುನೀಲ್‌ ಕುಮಾರ್‌ ಅವರ ವಿಶೇಷ ಪ್ರಯತ್ನದಿಂದ ಕಜಾನೆ ದೈವಸ್ಥಾನದಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಕಜಾನೆ ಕ್ಷೇತ್ರದ ಅಭಿವೃದ್ಧಿ ಎಲ್ಲರೂ ಇನ್ನಷ್ಟು ಸಹಕಾರ ನೀಡುವಂತೆ ನಟರಾಜ ಹೆಗ್ಡೆ ಮನವಿ ಮಾಡಿದರು.

ಕಜಾನೆ ಹಣದ ಖಜಾನೆಯಲ್ಲ !
ಕಜಾನೆ ಎಂದರೆ ಅದು ಹಣದ ಖಜಾನೆಯಲ್ಲ ! ಅದು ನಂಬಿಕೆ ಪ್ರೀತಿಯ ಕಜಾನೆ. ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವ ಶಕ್ತಿಯ ಖಜಾನೆ, ಅದೇ ಕಜಾನೆಯಲ್ಲಿ ಭಜನೆಯ ಅಜನೆ ಆರಂಭಗೊಂಡಿದೆ, ಧರ್ಮದ ಕಾರ್ಯಗಳು ನಡೆಯುವ ಮೂಲಕ ಭಜನಾ ಮಂಡಳಿ ಬೆಳಗಲಿ ಎಂದು ಶ್ರೀಕಾಂತ್‌ ಶೆಟ್ಟಿ ಕಾರ್ಕಳ ವಿಶೇಷ ಉಪನ್ಯಾಸದಲ್ಲಿ ಕಜಾನೆಯ ಬಗೆಗೆ ಅಭಿಮಾನದ ಮಾತು ಹೇಳಿದರು.
ಭಜನೆಗೆ ಹೊಸದಿಕ್ಕು ತೋರಿದ ಸೂರಿಮಣ್ಣು ಸದಾಶಿವ ಉಪಾಧ್ಯಾಯರು ಈಗಿನ ನಡೆದಾಡುವ ಭಜನಾ ಹರಿದಾಸರು. ಅವರಿಂದ ಭಜನಾ ಸೇವಾ ಕ್ಷೇತ್ರಕ್ಕೆ ಅಪಾರ ಕೊಡುಗೆಗಳು ನಿರಂತರವಾಗಿ ದೊರೆಯುತ್ತಿದೆ ಎಂದು ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಅಭಿನಂದಿಸಿದರು.

ಭಜನೆಯಿಂದ ಊರು ಸುಭಿಕ್ಷೆ !

ಅಂದು ಹಿರಿಯರು ಭಜನೆಯ ಮೂಲಕ ತಮ್ಮ ಸಂಕಷ್ಟಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಪ್ರತಿ ಮನೆಮನೆಯಲ್ಲೂ ತಾಳದ ನಾದ, ಭಜನೆ ಕೇಳುತ್ತಿತ್ತು. ಒತ್ತಡದ ಜನಜೀವನದಲ್ಲಿ ಸ್ವಲ್ಪ ವರ್ಷಗಳಲ್ಲಿ ಜನ ಭಜನೆಯಿಂದ ದೂರವಿದ್ದರೂ ಈಗ ಮತ್ತೇ ಭಜನೆಯ ಕಾಲಗಳ ಶುರುವಾಗಿದೆ. ಭಜನೆಯ ಮಹತ್ವ ಹೆಚ್ಚಾಗುತ್ತಿದೆ. ಖಜಾನೆಯ ನೂತನ ಭಜನಾ ಮಂಡಳಿ ಬೆಳಗಲಿ, ಊರು ಸುಭಿಕ್ಷೆಯಾಗಲಿ. ನಾವು ಮಾಡುವ ಭಜನೆ ನಮಗೆ ಮೊದಲು ಸಂತೃಪ್ತಿಯಾಗಬೇಕು. ದಾಸ ಸಾಹಿತ್ಯಗಳ ಭಜನೆಗೆ ಆದ್ಯತೆ ನೀಡಿ ಭಜನೆ ಮಾಡಿ ಭಜನಾ ಮಂಡಳಿಯನ್ನು ಬೆಳೆಸಿ ಮುನ್ನಡೆಸಿ ಭಜನೆಯಲ್ಲಿ ಎಂದೂ ಸ್ಪರ್ಧೆಗಳಾಗುವುದು ಬೇಡ, ಭಜನೆ ಜನಸಾಮಾನ್ಯರು ದೇವರನ್ನು ಒಲಿಸುವ ಮಾರ್ಗವೇ ಹೊರತು ಸ್ಪರ್ಧೆ ಅಲ್ಲ ಎಂದು ನೆನಪಿಸಿದರು.

ಸನ್ಮಾನ :
ಭಜನಾ ಕ್ಷೇತ್ರಕ್ಕೆ ಅಪಾರ ಸೇವೆ ನೀಡಿದ ಹಿರಿಯರಾದ ಸೂರಿಮಣ್ಣು ಮಠದ ಮುಖ್ಯಸ್ಥ ಸದಾಶಿವ ಉಪಾಧ್ಯಾಯ ಮತ್ತು ಕಾರ್ಕಳ ತಾಲ್ಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಹರೀಶ ಹೆಗ್ಡೆ ಕಡ್ತಲ ಅವರನ್ನು ಸನ್ಮಾನಿಸಲಾಯಿತು.

ಅರ್ಚಕರಾದ ನಾಯರಕೋಡು ರಘುಪತಿ ಭಟ್‌ ನೇತ್ರತ್ವದಲ್ಲಿ ಶ್ರೀದುರ್ಗಾದೇವಿ ಭಜನಾ ಮಂಡಳಿಯ ಉದ್ಘಾಟನೆಗೆ ಮುನ್ನಾ ಸಾಮೂಹಿಕ ಶ್ರಿ ಸತ್ಯನಾರಾಯಣ ಪೂಜೆ ಮತ್ತು ಬಳಿಕ ಭಜನಾ ಮಂಗಲೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.

ಹಿರಿಯರಾದ ಕಜಾನೆ ರಾಜು ಶೆಟ್ಟಿ, ಶ್ರೀದುರ್ಗಾದೇವಿ ಭಜನಾ ಮಂಡಳಿಯ ಅಧ್ಯಕ್ಷ ಯೋಗೀಶ ಶೆಟ್ಟಿ. ಕಾರ್ಯದರ್ಶಿ ಸುರೇಶ ನಾಯ್ಕ್‌, ಕೋಶಾಧಿಕಾರಿ ಗೀತಾ ಶೆಟ್ಟಿ ಕಜಾನೆ, ಕಜಾನೆಯ ವಿವಿಧ ಪ್ರಮುಖರು, ಗಣ್ಯರು, ಭಜನಾ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ ಮುಟ್ಲುಪಾಡಿ, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕಡ್ತಲ, ಶ್ರೀ ಬ್ರಹ್ಮಶ್ರೀ ಭಜನಾ ಮಂಡಳಿ ಮಾತಿಬೆಟ್ಟು, ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಭಜನಾ ಮಂಡಳಿ ಸೂರಿಮಣ್ಣು ಮತ್ತು ಶ್ರೀ ರಾಮ ಭಜನಾ ಮಂಡಳಿ ಅಶ್ವತ್ಥಕಟ್ಟೆ ಬಣ್ಣಂಪಳ್ಳಿ ಅವರಿಂದ ಭಜನಾ ಮಂಡಳಿಯಿಂದ ಭಜನಾ ಮಂಗಲೋತ್ಸವ ನಡೆಯಿತು. ಖಜಾನೆ ಸಂದೇಶ ಶೆಟ್ಟಿ ನಿರೂಪಿಸಿದರು. ಯೋಗೀಶ ಶೆಟ್ಟಿ ಸ್ವಾಗತಿಸಿ ಸುರೇಶ ನಾಯ್ಕ್‌ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments