ಇದೇ ಜುಲೈ 31 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗೌರವ ಪ್ರದಾನ.
ಅನುಷಾ ಆಚಾರ್ ಮೂಡಬಿದರೆ ಎಸ್ ಕೆಎಫ್ ಉದ್ಯಮ ಸಮೂಹದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಪತ್ನಿ.
ಮೂಡುಬಿದಿರೆ : ಬಾಣಂತನ ಎನ್ನುವುದು ಹೆಣ್ಣಿಗೆ ಮರುಜನ್ಮವಿದ್ದಂತೆ. ಆ ಹಂತದಲ್ಲಿ ಪ್ರಸವ ಪೂರ್ವ ಮಾತ್ರವಲ್ಲ, ನಂತರದ ಆಕೆಯ ಸಕಾಲಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಆಕೆಯ ಬದುಕು ಹಸನಾಗಲು ಸಾಧ್ಯ. ಇಲ್ಲವಾದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಶಾಶ್ವತವಾಗಿ ಕಾಡಿ ಆಕೆಯ ಬದುಕಿನ ಸಂಭ್ರಮವನ್ನೇ ಕಸಿದುಕೊಳ್ಳಬಹುದು ಎನ್ನುವುದು ವಾಸ್ತವ ಸಂಗತಿ.
ಆ ನಿಟ್ಟಿನಲ್ಲಿ ಆಧುಕತೆಯ ಜೀವನ ಶೈಲಿಯ ನಡುವೆ ಭಾರತೀಯ ಪಾರಂಪರಿಕ ಲೇಹಾದಿ ಜೌಷದಗಳ ಕುರಿತು ತಿಳಿದಿದ್ದ ಹಳೆಯ ತಲೆಮಾರಿನ ಕೊಂಡಿ ಕಳಚಿಕೊಳ್ಳುತ್ತಿರುವ ಆತಂಕವು ಎಲ್ಲರಲ್ಲಿದೆ.
ಈ ನಡುವೆಯೂ ಪರಂಪರೆಯ ಲೇಹ, ಉಪಚಾರದ ಆಹಾರವನ್ನು ನಾವೀನ್ಯತೆಯೊಂದಿಗೆ ಉಳಿಸಿ ಬೆಳೆಸುವ ಸಣ್ಣ ಪ್ರಯತ್ನಕ್ಕೆ ಮುಂದಾದವರು ಮೂಡುಬಿದಿರೆಯ ಅನುಷಾ ಆಚಾರ್.
ಇದೀಗ ಭಾರತದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ ( ಎಐಎಂ) ರಾಷ್ಟ್ರಮಟ್ಟದಲ್ಲಿನ ತಳಮಟ್ಟದ ನಾವೀನ್ಯತೆಯ ಕೊಡುಗೆಗಾಗಿ ಕೊಡಮಾಡುವ 2026ನೇ ಸಾಲಿನ ಆಯ್ದ 26 ರಾಷ್ಟ್ರಮಟ್ಟದ ಸಾಧಕರ ಪೈಕಿ ಅನುಷಾ ಅವರ ” ಮಾವೇದಾಸ್” ಆಯ್ಕೆಯಾಗಿದೆ.
ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ದಕ್ಷಿಣ ಕನ್ನಡದಿಂದ ಮಾತ್ರ ಆಯ್ಕೆಯಾಗಿರುವ ಇಬ್ಬರು ಸಾಧಕರ ಪೈಕಿ ಅನುಷಾ ಆಚಾರ್ ಒಬ್ಬರು ಎನ್ನುವುದು ಮತ್ತೊಂದು ವಿಶೇಷ.
ಇದೇ ಜುಲೈ 31 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾಧಕರನ್ನು ಗೌರವಿಸುವ ಸಮಾರಂಭದಲ್ಲಿ ಅನುಷಾ ಆಚಾರ್ ಅವರು ಆಹ್ವಾನಿತರಾಗಿದ್ದಾರೆ.
ದೇಶದ 250ಕ್ಕೂ ಅಧಿಕ ನಾವೀನ್ಯತೆಯ ಸ್ಟಾರ್ಟ್ ಅಪ್ ಗಳವರು ಈ ಸ್ಪರ್ಧಾ ಕಣದಲ್ಲಿದ್ದು ಅಂತಿಮ ಹಂತದಲ್ಲಿ 26 ಮಂದಿಗೆ ಈ ಸಾಲಿನ ರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ.
ಮೂಲತಃ ಕುಂದಾಪುರದವರಾದ ಅನುಷಾ ಆಚಾರ್ ಬಿ.ಇ ಇಲೆಕ್ಟ್ರಿಕಲ್ ಪದವೀಧರೆ. ಆದರೆ ದೇಸೀ ಆಹಾರ, ಅದರಲ್ಲೂ ಬಾಣಂತಿ ಆರೈಕೆಯ ಆಹಾರಗಳ ವಿಶೇಷ ಆಸಕ್ತಿಯಿಂದ ಅವುಗಳನ್ನು ತಯಾರಿಸುವುದನ್ನೂ ಕಲಿತು ಮುಂದಿನ ಪೀಳಿಗೆಗೆ ಆ ಪರಂಪರೆಯನ್ನು ಉಳಿಸುವ ಅನುಷಾ ಆಚಾರ್ ಅವರ ಪ್ರಯತ್ನಕ್ಕೆ ಇದೀಗ ಬೆಂಬಲ ದೊರೆತಂತಾಗಿದೆ.
ಮೆಂತೆ ಸತ್ವ, ಬಾಣಂತಿ ಲೇಹ, ಬೆಳ್ಳುಳ್ಳಿ ಲೇಹ, ಮೆಂತೆ ಲಡ್ಡು ಈಗಾಗಲೇ ಮಾವೇದಾಸ್ ಮೂಲಕ ಜನತೆಗೆ ಲಭ್ಯವಾಗುತ್ತಿದೆ. ಮುಂದೆ ಬೇಬಿ ಫುಡ್ ಸಹಿತ ಇನ್ನಷ್ಟು ಹೊಸ ಆಹಾರ ವೈವಿಧ್ಯಗಳೊಂದಿಗೆ ಕನಸಿನ ಯೋಜನೆ ವಿಸ್ತರಿಸುವ ಅನುಷಾ ಆಚಾರ್ ಅವರ ಕನಸಿಗೆ ಈ ಗೌರವ ಸ್ಫೂರ್ತಿ ತುಂಬಿದೆ.
2025ರ ಜುಲೈ 18 ರಂದು ಆರಂಭಗೊಂಡು ಈಗಷ್ಟೇ ವರ್ಷ ತುಂಬಿರುವ ಮಾವೇದಾಸ್ ಹೆಸರಿಗೆ ಅನುಗುಣವಾಗಿ ಅಮ್ಮ ಮತ್ತು ಪರಂಪರೆಯ ಕಾಳಜಿಯನ್ನು ಹೊಂದಿದೆ.ಬಾಯ್ಲರ್ ಮತ್ತು ರೈಸ್ ಮಿಲ್ ತಂತ್ರಜ್ಞಾನದಲ್ಲಿ ಮತ್ತು ಎಸ್ ಕೆಎಫ್ ಎಲಿಕ್ಸರ್ ಶುಧ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಮೂಡಬಿದರೆಯ ಎಸ್ ಕೆಎಫ್ ಉದ್ಯಮ ಸಮೂಹದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಅವರ ಪತ್ನಿ ಅನುಷಾ ಆಚಾರ್ ಅವರ ಪರಂಪರೆಯ ಬಗೆಗಿನ ಪ್ರೀತಿ, ಕಾಳಜಿಯ ಪ್ರಯತ್ನಕ್ಕೆ ಸಂದಿರುವ ಈ ರಾಷ್ಟ್ರೀಯ ಗೌರವ ಕರಾವಳಿಯ ಕನ್ನಡತಿಯೋರ್ವರ ಹೆಮ್ಮೆಯ ಸಾಧನೆ ಎನ್ನುವುದು ಇನ್ನೊಂದು ವಿಶೇಷ. ವಿಶ್ವಕರ್ಮ ಸಮುದಾಯ ಹೆಮ್ಮೆಯ ಸಾಧಕಿ. ಯುವ ಮನಸ್ಸುಗಳಿಗೆ ಪ್ರೇರಣೆಯಾಗಿದ್ದಾರೆ.


