ಅಗೆದು ಹಾಕಿದ ರಸ್ತೆಯಿಂದಾಗಿ ಸಂಚಾರಕ್ಕೆ ಹರಸಾಹಸ – ವಾಹನ ಸವಾರರಿಗೆ ಸಂಕಷ್ಟ !
ಮುನಿಯಾಲು : ಕಜಾನೆ ಪಡುಕುಡೂರು ಮುನಿಯಾಲು ರಸ್ತೆಯ ಸಮಸ್ಯೆ ಏನು ಇದ್ದರೂ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಶೀಘ್ರವಾಗಿ ಅವಕಾಶ ಕಲ್ಪಿಸಿಕೊಡಿ, ತಾಂತ್ರಿಕ ಸಮಸ್ಯೆ ಇದ್ದರೂ ಸರಿ ಮಾಡಿ, ಅಗತ್ಯವಿದ್ದರೆ ಮರು ಟೆಂಡರ್ ಕರೆದು ರಸ್ತೆ ಸಂಚಾರದ ಗಂಭೀರ ಸಮಸ್ಯೆಯನ್ನು ಸರಿ ಮಾಡಿ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಹೆಬ್ರಿ ಬೇಟಿ ವೇಳೆ ಖಡಕ್ ಸೂಚನೆ ನೀಡಿದರು.
ಪಡುಕುಡೂರು ಗ್ರಾಮಸ್ಥರು ಭಾರವಿ ಶೆಟ್ಟಿ ಪಟೇಲರ ಮನೆ ನೇತ್ರತ್ವದಲ್ಲಿ ಸಚಿವರಿಗೆ ನೀಡಿದ ಮನವಿಗೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಡುಕುಡೂರು ಕಜಾನೆ ಮುನಿಯಾಲು ರಸ್ತೆಯು ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ಟೀಯ ಹೆದ್ದಾರಿ ಮತ್ತು ಕೊಲ್ಲೂರು ಹೆಬ್ರಿ ಕಾರ್ಕಳ ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಲೋಕೋಪಯೋಗಿ ರಸ್ತೆಯಾಗಿದ್ದು ದಿನನಿತ್ಯ ನೂರಾರು ವಾಹನಗಳು ಉಡುಪಿ ಕಾರ್ಕಳ ಕಡೆಗೆ ಸಂಚರಿಸುತ್ತವೆ. ೩ ಗ್ರಾಮಗಳ ಸಂಪರ್ಕ ರಸ್ತೆಯೂ ಆಗಿದೆ. ಇತ್ತೀಚೆಗೆ ಇದೇ ರಸ್ತೆಯನ್ನು ಸುಮಾರು ೯ ಕಿಮೀ ನಲ್ಲಿ ೮ ಕಿಮೀ ವಿಸ್ತರಣೆ ಮಾಡಿ ಕಾಮಗಾರಿ ಮಾಡಲಾಗಿದೆ. ಈಗ ಅಗೆದು ಹಾಕಿದ ಕೇವಲ ೩೦೦ ಮೀಟರ್ ರಸ್ತೆಯನ್ನು ಹಾಗೇಯೆ ಬಿಡಲಾಗಿದೆ. ಹಲವು ತಿಂಗಳಿನಿಂದ ರಸ್ತೆಯು ಹಾಗೆಯೆ ಇದ್ದು ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ಈಗ ಮಳೆಗಾಲದಲ್ಲಿ ಕೆಸರುಮಯವಾಗಿ ಸಂಚರಿಸಲು ಅಸಾಧ್ಯವಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್ ಗಳು ಹಲವು ಭಾರಿ ಬೇಟಿ ನೀಡಿದ್ದರೂ ರಸ್ತೆಯು ಹಾಗೇಯೆ ಉಳಿದಿದೆ. ಮಳೆ ಶುರುವಾದ ಮೇಲೆ ಹಲವರು ರಸ್ತೆಯಲ್ಲಿ ಬಿದ್ದು ಪೆಟ್ಟಾಗಿರುವ ಘಟನೆಗಳು ನಡೆದಿದೆ.
ರಾಜಕೀಯ ಮೇಲಾಟ : ಪಡುಕುಡೂರು ರಸ್ತೆಯ ವಿಚಾರ ಹಲವು ಭಾರಿ ರಾಜಕೀಯ ಮೇಲಾಟಗಳಿಗೂ ಕಾರಣವಾಗಿತ್ತು. ಆದರೆ ರಸ್ತೆ ಮಾತ್ರ ಈ ತನಕ ದುರಸ್ತಿಯಾಗಿಲ್ಲ. ರಸ್ತೆಯನ್ನು ಇಂದು ಬದಿಯಿಂದ ಅಗೆದು ಹಾಕಿದ್ದು ರಸ್ತೆಯ ಒಂದು ಬದಿ ಎತ್ತರದಲ್ಲಿದ್ದರೆ ಮತ್ತೊಂದು ಬದಿಯಲ್ಲಿ ತಗ್ಗು ಇದೆ. ಇದು ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿದೆ. ವಾಹನಗಳು ಬಂದರೆ ಒಂದು ವಾಹನ ಹೋದ ಬಳಿಕವೇ ಮತ್ತೊಂದು ವಾಹನಗಳು ಹೋಗಬೇಕಾದ ಅನಿವಾರ್ಯತೆ ಇದೆ. ಸಣ್ಣ ವಾಹನಗಳು ಬಂದರೂ ಬೈಕ್ ಸವಾರರು ಕೂಡ ಬೈಕ್ ನಿಲ್ಲಿಸಿ ಆ ಬಳಿಕವೇ ಹೋಗಬೇಕಾದ ಪರಿಸ್ಥಿತಿ ಇದೆ.
ಹಿರಿಯರಾದ ನಿವೃತ್ತ ಮುಖ್ಯ ಶಿಕ್ಷಕ ಭುಜಂಗ ಶೆಟ್ಟಿ, ಗೋಪಿನಾಥ ಭಟ್, ಪಡುಕುಡೂರಿನ ಭಾರವಿ ಶೆಟ್ಟಿ, ಪ್ರಸನ್ನ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾರಾಯಣ ಆಚಾರ್ಯ, ಹರೀಶ ಪೂಜಾರಿ, ತಾರಾವತಿ ಶೆಟ್ಟಿ, ಲಕ್ಷ್ಮೀ ಶೆಟ್ಟಿ, ರವಿ ಸೇರಿ ಹಲವರು ಸೇರಿ ಸಚಿವರಿಗೆ ಮನವಿ ಮಾಡಿದ್ದಾರೆ.



