ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ತಲಾ ೧ ರಂತೆ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗಿದ್ದು, ಅದೇ ರೀತಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸರಾಸರಿ 4000 ಜನಸಂಖ್ಯೆಗೆ ಒಂದರಂತೆ, ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದರಂತೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8000 ಜನಸಂಖ್ಯೆಗೆ ಒಂದು ಸಂಘವನ್ನು ಸ್ಥಾಪಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
ಯುವ ಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು, ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಆದೇಶಿಸಿದ್ದು, ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮಾರ್ಗಸೂಚಿಯನ್ವಯ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಯುವಜನತೆಯಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ, ಸಂವಿಧಾನದ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಹಾಗೂ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹತ್ತು ಸಾವಿರ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಈ ಸಂಘಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ವಿಕಾಸಶೀಲ ಮತ್ತು ಸೌಹಾರ್ದಶೀಲ ರಾಜ್ಯ ನಿರ್ಮಾಣಕ್ಕಾಗಿ, ಸಮುದಾಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಕ್ರೀಡೆ, ಫಿಟ್‌ನೆಸ್ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಯುವಜನರನ್ನು ಸಬಲೀಕರಣಗೊಳಿಸಿ, ತಳಮಟ್ಟದ ಆಡಳಿತದಲ್ಲಿ ಸಕ್ರೀಯ ಪಾಲುದಾರರನ್ನಾಗಿ ಮಾಡಲು ಸಶಕ್ತ ಯುವಜನರನ್ನೊಳಗೊಂಡ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗಿದ್ದು, ಅದೇ ರೀತಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸರಾಸರಿ 4000 ಜನಸಂಖ್ಯೆಗೆ ಒಂದರಂತೆ, ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6000 ಜನಸಂಖ್ಯೆಗೆ ಒಂದರಂತೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಸರಾಸರಿ 8000 ಜನಸಂಖ್ಯೆಗೆ ಒಂದು ಸಂಘವನ್ನು ಸ್ಥಾಪಿಸುವಂತೆ ತಿಳಿಸಿದ ಅವರು, ಪ್ರತಿ ಸಂಘಕ್ಕೆ ಸರ್ಕಾರದಿಂದ ಹಂತಹಂತವಾಗಿ ಅನುದಾನವನ್ನು ನೀಡಲಾಗುವುದು ಎಂದರು.


