ಕೆ. ಗೋಪಾಲಕೃಷ್ಣ ರಾವ್ ಅವರಿಗೆ ಹೆಬ್ರಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.
ಹೆಬ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲ್ಲೂಕು ಘಟಕದ ವತಿಯಿಂದ ಕಬ್ಬಿನಾಲೆಯ ‘ಅನುಗ್ರಹ’ ನಿವಾಸ ದಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಧಕ ಕೆ. ಗೋಪಾಲಕೃಷ್ಣ ರಾವ್ ಅವರಿಗೆ ಹೆಬ್ರಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಬಾರ್ ಕಬ್ಬಿನಾಲೆ ಮಾತನಾಡಿ, “ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ಉತ್ತಮ ಸೇವೆ ಮಾಡುತ್ತಿರುವ ಗೋಪಾಲಕೃಷ್ಣರು ಹಿರಿಯ ಮತ್ತು ಕಿರಿಯ ಕಲಾವಿದರ ಕೊಂಡಿಯಾಗಿದ್ದಾರೆ, ಇಂತಹ ಹಿರಿಯ ವ್ಯಕ್ತಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಅತ್ಯುತ್ತಮ ನಡೆ ಎಂದು ಪ್ರಶಂಸಿಸಿದರು.
ಸಾಹಿತಿಗಳಾದ ಶ್ರೀ ಮುದ್ರಾಡಿ ಮಾತನಾಡಿ, “ಕನ್ನಡ ನಾಡಿನ ಜನಪದರು ಶ್ರೀವಿಜಯ ಹೇಳಿದಂತೆ ಕುರಿತೋದೆಯುಂ ಕಾವ್ಯ ಪ್ರಯೋಗ ಪರಿಣತಿ ಮತಿಗಳು, ಸಾಹಿತ್ಯ ಸಂಸ್ಕೃತಿ ಕಲಾ ಸೇವಕರು ಎಂಬುದಕ್ಕೆ ಕೆ. ಗೋಪಾಲಕೃಷ್ಣ ರಾವ್ ಉತ್ತಮ ಉದಾಹರಣೆಯಾಗಿದ್ದಾರೆ” ಎಂದು ಬಣ್ಣಿಸಿದರು.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಗಾಯಕರಾದ ನಿತ್ಯಾನಂದ ಭಟ್ ಮತ್ತು ಸುಬ್ರಹ್ಮಣ್ಯ ಅವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು
ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಪದಾಧಿಕಾರಿ ಪುಪ್ಪಾವತಿ ಹೆಬ್ರಿ ಪ್ರಾರ್ಥಿಸಿದರು. ಮಹೇಶ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ನಿರೂಪಿಸಿದರು. ವೀಣಾ ಆರ್ ಭಟ್ ಸನ್ಮಾನ ಪತ್ರವನ್ನು ವಾಚಿಸಿದರು. ಬಾಲಚಂದ್ರ ಹೆಬ್ಬಾರ್ ವಂದಿಸಿದರು.



