Sunday, August 9, 2026
HomeUncategorizedಉಡುಪಿ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಉಡುಪಿ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಉಡುಪಿ, : ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಉಡುಪಿ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಮಂಗಳವಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಭಿರಕ್ಷಕ ರಾಘವೇಂದ್ರ ಎಸ್. ಮಾತನಾಡಿ, ಯುವಜನರಲ್ಲಿ ಕಾನೂನಿನ ಅರಿವಿನ ಕೊರತೆಯಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಪ್ರೀತಿ, ಪ್ರೇಮ ಹಾಗೂ ಉದ್ಯೋಗದ ಆಮಿಷಗಳಿಗೆ ಹದಿಹರೆಯದವರು ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.

ಮಾನವ ಕಳ್ಳಸಾಗಣೆ, ಮಾದಕ ವಸ್ತುಗಳ ಬಳಕೆ, ಭಿಕ್ಷಾಟನೆ ಹಾಗೂ ಆಧುನಿಕ ಜೀತ ಪದ್ಧತಿಯಂತಹ ಸಮಾಜವಿರೋಧಿ ಕೃತ್ಯಗಳಲ್ಲಿ ಯುವಜನರು ತೊಡಗಿಸಿಕೊಳ್ಳುತ್ತಿರುವುದು ಶೋಚನೀಯ. ಮಾದಕ ವಸ್ತುಗಳ ಸೇವನೆ, ಸಾಗಣೆ ಹಾಗೂ ಸ್ವಾಧೀನವೂ ಶಿಕ್ಷಾರ್ಹವಾಗಿದ್ದು, ಈ ಕುರಿತು ಯುವಜನರಲ್ಲಿ ಸೂಕ್ತ ಕಾನೂನು ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು.

ಝೀರೊ ಎಫ್‌ಐಆರ್, ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ (BSA) ಸೇರಿದಂತೆ ಪ್ರಮುಖ ಕಾನೂನುಗಳ ಕುರಿತು ನಾಗರಿಕರು ಅರಿವು ಹೊಂದಿರಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಕುರಿತು ಸೂಕ್ತ ಜ್ಞಾನವನ್ನು ಪಡೆದುಕೊಂಡು, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ PLV, DLSA ರಕ್ಷಿತ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಾಜೇಂದ್ರ ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಮಂಗಳ ಕಾರ್ಯಕ್ರಮ ನಿರೂಪಿಸಿದರು. ನಿಸರ್ಗ ಪ್ರಾರ್ಥಿಸಿದರು. ಕಾಲೇಜಿನ ಗ್ರಂಥಪಾಲಕ ವೆಂಕಟೇಶ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments